ನಿವೃತ್ತಗೊಂಡ ನೆಚ್ಚಿನ ಶಿಕ್ಷಕ ಬಸವರಾಜ ಅನಂತಪುರಗುರುವಿಗೆ ಕಲ್ಪವೃಕ್ಷ ಕಾಣಿಕೆ
ಚಿಕ್ಕಪಡಸಲಗಿ (ಜಮಖಂಡಿ): ತಮ್ಮ ಅಚ್ಚುಮೆಚ್ಚಿನ ಗುರುಯೊಬ್ಬರು ಸೇವಾ ನಿವೃತ್ತಿ ಹೊಂದಿದರು. ತನ್ನಿಮಿತ್ಯ ಈ ಶುಭ ಹಾರೈಕೆಯ ಸುಘಳಿಗೆಯಲ್ಲಿ ಹಲವಾರು ಹಿತೈಷಿಗಳು, ಶಾಲಾ ಮಕ್ಕಳು ಗುರುದೇವೋಭವನ ಗುಣಗಾನದೊಂದಿಗೆ ಸಂಪ್ರೀತಿಯ ಕಾಣಿಗಳನ್ನು ಸಮರ್ಪಿಸಿ ಧನ್ಯತಾಭಾವ ಮೆರೆದರು. ಆದರೆ ಕೆಲ ಬಾಲೆಯರು ತಮ್ಮ ಪ್ರೀತಿ ಪಾತ್ರ ಆ ಗುರುವಿಗೆ ವಿಭಿನ್ನ ಸವಿನೆನಪಿನ ಕಾಣಿಕೆಯೊಂದನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಗಮನ ಸೆಳೆದರು.
ಹೌದು! ನಿಷ್ಕಲ್ಮಶ ಭಾವದ ಆ ಗುರುಜಿಗೆ ಶಾಲಾ ಬಾಲೆಯರು ನೀಡಿದ ಕಾಣಿಕೆ ಅಂತಿಂಥ ಕಾಣಿಕೆಯಲ್ಲ ! ಅದು ಪರಿಸರ ಕಾಳಜಿಯುತ ಕಳಕಳಿಯ ಕಾಣಿಕೆ. ಗುರುಜಿಯವರ ವಿಶ್ರಾಂತ ಜೀವನವು ಕಲ್ಪವೃಕ್ಷದಂತೆ ಅರಳಲಿ. ಸವಿಸಿಹಿ ಭಾವ ಬಂಧನ ಗಟ್ಟಿಗೊಳ್ಳಲಿ. ಔದಾರ್ಯ ಗುಣದ ಪ್ರೀತಿಭರಿತ ಪುಷ್ಪರಸ ಇನ್ನೂ ಶಿಷ್ಯವೃಂದಕ್ಕೆ ಲಭಿಸಲಿ ಎನ್ನುವ ಉದಾತ್ತ ಚಿಂತನೆ ಸಿಂಚನದೊಂದಿಗೆ ಸವಿನೆನಪಿಗಾಗಿ ಕಲ್ಪವೃಕ್ಷದ ಸಸಿ ನೀಡಿ ಮಹೋನ್ನತ ಪರಿಸರ ಸ್ನೇಹಕ್ಕೆ ಮುಂದಾದರು. ತಮ್ಮ ಅಂತರಂಗದಲ್ಲಿ ಮೊಳಕೆಯೊಡೆದಿದ್ದ ಹಸಿರಿನ ಹಸಿವು ಗುರುವಿಗೆ ಕಲ್ಪವೃಕ್ಷ ಸಸಿ ನೀಡುವ ಮೂಲಕ ನೀಗಿಸಿಕೊಂಡು ಹಸಿರೆಲೆಯ ಚಿಗುರಕ್ಕೆ ನಾಂದಿಯಾದರು, ಮಾದರಿಯಾದರು, ಸಾಕ್ಷಿಯಾದರು !
ಇದು ಕೃಷ್ಣೆಯ ಸೆರೆಗಿನಲ್ಲಿರುವ ಪುಟ್ಟ ಗ್ರಾಮವೊಂದರಲ್ಲಿ ಕಂಡು ಬಂದ ದೃಶ್ಯ ! ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿರುವ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಬಸವರಾಜ ಅನಂತಪುರ ಅವರು ಸುದೀರ್ಘ ೩೯ ವರ್ಷಗಳ ಕಾಲ ಅತ್ಯಂತ ಶಿಸ್ತು ಬದ್ಧ ವೃತ್ತಿ ಕಾಯಕ ಗೈದಿದ್ದಾರೆ. ಸೇವಾ ಪಯಣದಲ್ಲಿ ಎಲ್ಲರ ಪ್ರೀತಿ, ವಿಶ್ವಾಸ ಪಡೆದು ಮೆಚ್ಚುಗೆ ಸಂಪಾದಿಸಿ ಈಚೆಗೆ ಸೇವಾ ವಯೋನಿವೃತ್ತಿ ಹೊಂದಿದ್ದ ಪ್ರಯುಕ್ತ ಶಾಲಾ ಬಾಲೆಯರು ಕಲ್ಪವೃಕ್ಷದ ಸಸ್ಯಯೊಂದನ್ನು ತಮ್ಮ ಪ್ರೀತಿ ಪಾತ್ರ ಗುರುವಿಗೆ ಕಾಣಿಕೆಯಾಗಿ ನೀಡಿಲ್ಲದೇ ಗುರುವಿನ ಅಮೃತಹಸ್ತದಿಂದಲೇ ಅವರ ಸವಿನೆನಪಿಗಾಗಿ ಶಾಲಾವರಣದಲ್ಲಿ ಕಲ್ಪವೃಕ್ಷ ಟೆಂಗಿನ ಸಸಿ ನೆಡಿಸಿ ಜನ್ಯವಾದ ಧನ್ಯತಾಭಾವ ತೋರಿದ್ದಾರೆ. ಬಾಲೆಯರು ಕಾಣಿಕೆ ರೂಪದಲ್ಲಿ ಕೊಡಮಾಡಿದ ಆ ಚಿಗುರೆಲೆಯ ಕಲ್ಪವೃಕ್ಷ ಸಸಿ ಅನಂತಪುರ ಗುರುಜಿ ಸಂತಸದಿಂದ ನೆಟ್ಟು,ನೀರುಣಿಸಿ ಮಕ್ಕಳೊಂದಿಗೆ ಖುಷಿ ಹಂಚಿಕೊಂಡರು.
ವ್ಯಕ್ತಿ ಆದರ್ಶ – ಪರಿಸರ ಸ್ನೇಹಕ್ಕೆ ಈ ಬಾಲೆಯರ ಭಾವಲೋಕದ ಕ್ರಿಯಾತ್ಮಕ ವಿಶೇಷತೆ ಕಾಯಕ ಸಮರ್ಥ, ಸಾರ್ಥಕ ಎನಿಸಿತು. ಶಾಲಾ ಬಾಲೆಯರಾದ ಸ್ವಾತಿ ಯಲಗುದ್ರಿ, ಪ್ರಿಯಾಂಕಾ ಜಾಯಗೊಂಡ, ಪ್ರತೀಕ್ಷಾ ಜಾಯಗೊಂಡ, ಕವಿತಾ ಲಾಯ್ಯನವರ,ಕಾವೇರಿ ಹಾದಿಮನಿ, ಸಾಕ್ಷಿ ಜಾಧವ ಸೇರಿದಂತೆ ಅನೇಕ ಒಡನಾಡಿ ಸ್ನೇಹಪಾಠಿಗಳು ಟೆಂಗಿನ ಸಸಿ ಗುರುವಿಗೆ ಪೂಜ್ಯತೆಯ ಭಾವದಿಂದ ನೀಡಿ ಗೌರವಿಸಿದರು.
ಈ ವೇಳೆ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಮಕ್ಕಳು ಗೈದ ಈ ವಿಶೇಷ ಅಪರೂಪದ ಕಾಯಕ ಶ್ಲಾಘನೀಯ.ಯುವಜನತೆಯಲ್ಲಿ ಪರಿಸರ ಪ್ರೇಮ ವ್ಯಾಪಕವಾಗಿ ಜಾಗೃತವಾಗಬೇಕು. ಗಿಡ,ಮರಗಳನ್ನು ನೆಟ್ಟು ಸಂರಕ್ಷಿಸಲು ಮುಂದಾದರೆ ಅವು ನಮ್ಮನ್ನು ರಕ್ಷಣೆ ಮಾಡುತ್ತವೆ. ಶುದ್ಧ ಗಾಳಿ ನೀಡುವ ಮೂಲಕ ಜೀವ ಚೈತನ್ಯ ಕರುಣಿಸುತ್ತವೆ.ಕಾರಣ ಪ್ರತಿಯೊಬ್ಬರಲ್ಲೂ ಇಂದು ಪರಿಸರ ವ್ಯವಸ್ಥೆಯ ಕಾಳಜಿ ಇರಬೇಕಾಗಿರುವುದು ಅತ್ಯಗತ್ಯ ಎಂದರು.
ಶಿಕ್ಷಕರಾದ ಈರಣ್ಣ ದೇಸಾಯಿ, ಸದಾಶಿವ ಸಿದ್ದಾಪುರ, ಲೋಹಿತ ಮಿರ್ಜಿ, ಜಿ.ಆರ್.ಜಾಧವ, ಶಿಕ್ಷಕಿಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಪ್ರಾಥಮಿಕ ಶಾಲೆಯ ಹಣಮಂತ ಗದಿಗೆಪ್ಪಗೋಳ, ದೈಹಿಕ ಶಿಕ್ಷಕ ಕುಮಾರ ವಾಣಿ ಮೊದಲಾದವರಿದ್ದರು.

