ಸ್ವಚ್ಚತೆ ಹಾಗೂ ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅನುಸೂಯ ತೆರದಾಳ ಸಲಹೆ
ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಹಾಗೂ ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೆರದಾಳ ಮಾತನಾಡಿ, ಎಲ್ಲೆಡೆ ಡೆಂಗ್ಯೂ ಜ್ವರ ಹರಡುತ್ತಿರುವುದರಿಂದ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಸೊಳ್ಳೆಗಳನ್ನು ನಿರ್ಮೂಲನೆ ಮಾಡಬೇಕು. ಡೆಂಗ್ಯೂ ಹರಡುವುದನ್ನು ನಿಯಂತ್ರಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆಯನ್ನು ನಡೆಸುವುದರ ಜೊತೆಗೆ ಜನರಿಗೆ ಆರೋಗ್ಯ ಶಿಕ್ಷಣ ನೀಡುತ್ತಿದೆ. ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುವುದರಿಂದ ಇವುಗಳನ್ನು ಶುಚಿಗೊಳಿಸಿ, ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು. ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಬೇಕು. ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬಾರದು. ಮನೆಯ ಸುತ್ತಲು ಹಾಗೂ ತಾರಸಿ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮುಖ್ಯ ಗುರು ಎಸ್.ಎಸ್.ಕುಲಕರ್ಣಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಐ.ಬಿ.ಹೂಗಾರ ಮಾತನಾಡಿದರು.
ಶಿಕ್ಷಕರಾದ ವ್ಹಿ.ಎಸ್.ತೆಗ್ಗಿ, ಎಸ್.ಪಿ.ಮಠ, ಕೆ.ಜಿ.ಗುಣಕಿ, ಬಿ.ಎಂ.ಕಡಿ, ಎಂ.ಎಸ್.ತುರುಡಗಿ, ಎಸ್.ಎಸ್.ಠಾಣೆದ್, ಬಿ.ಎಂ.ಕುಳಗೇರಿ, ವಿದ್ಯಾ ಪಾಟೀಲ, ಎಲ್.ಟಿ.ಮಾದರ, ಎಲ್.ಎಂ.ಚವಾಣ, ಆರೋಗ್ಯ ಇಲಾಖೆಯ ಚನ್ನಮ್ಮ ಛಲವಾದಿ, ಆಶಾ ರೇಣುಕಾ ಛಲವಾದಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

