ಪದ್ಮಭೂಷಣ ಡಾ.ಸುಧಾಮೂರ್ತಿ ಭರವಸೆ
ಆಲಮಟ್ಟಿ: ನೂತನ ನಿಡಗುಂದಿ ತಾಲ್ಲೂಕಿನ ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಕ್ಲಾಸ್ ನ್ನಾಗಿ ರೂಪಿಸಲು ಅಗತ್ಯ ಸಹಕಾರ ನೀಡುವುದಾಗಿ ಪದ್ಮವಿಭೂಷಣ ಪ್ರಶಸ್ತಿ ವಿಜೇತೆ, ಇನ್ಪೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಸಮೀಪದ ಕೂಡಗಿ ಎನ್ಟಿಪಿಸಿ ವ್ಯಾಪ್ತಿಯ ಮಹಾಶಕ್ತಿನಗರದಲ್ಲಿ ಶನಿವಾರ ತಮ್ಮನ್ನು ಭೇಟಿಯಾಗಿ ಬೇಡಿಕೆಯನ್ನಿಟ್ಟ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳಿಗೆ ಈ ಭರವಸೆಯನ್ನು ಅವರು ನೀಡಿದರು. ಇದಕ್ಕೂ ಮುನ್ನ ಡಾ.ಸುಧಾಮೂರ್ತಿಯವರನ್ನು ಅಭಿನಂದಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಮಹಾದಾನಿ ಸುಧಾಮೂರ್ತಿ ಅಮ್ಮನವರು ಈಗಾಗಲೇ ನಿಡಗುಂದಿ ತಾಲೂಕಿನ 100 ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಸುಮಾರು 50 ಲಕ್ಷ ರೂ., ವೆಚ್ಛದಲ್ಲಿ ಗಣಕಯಂತ್ರಗಳನ್ನು ನೀಡಿರುವುದು ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ದಾರಿದೀಪವಾಗಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದರು.
ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನ ಕಾರ್ಯದರ್ಶಿ ಸಲೀಂ ದಡೇದ, ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎ.ನದಾಫ್, ಎಂ.ಆರ್. ಮಕಾನದಾರ್, ಸಂಘಟನಾ ಕಾರ್ಯದರ್ಶಿ ಎಂ.ಎಂ.ಮುಲ್ಲಾ, ಬಿ.ಸಿ.ನದಾಫ್, ಎಂ.ಬಿ.ಹೆಬ್ಬಾಳ. ಡಿ.ಎಲ್.ಮಾನೆ, ಆನಂದ ಗೌಡರ, ಅನೀಲಕುಮಾರ ಯಂಕಂಚಿ ಮತ್ತಿತರರು ಇದ್ದರು.