ದೇವರಹಿಪ್ಪರಗಿ ತಾಲ್ಲೂಕು ರೈತ ಜಾಗೃತಿ ಸಮಾವೇಶ | ನೂತನ ಪದಾಧಿಕಾರಿಗಳ ನೇಮಕ | ಸದಸ್ಯತ್ವ ಅಭಿಯಾನ | ರೈತರ ವಿವಿಧ ಬೇಡಿಕೆಗಳ ಚಿಂತನಾ ಸಭೆ
ದೇವರಹಿಪ್ಪರಗಿ: ರೈತ ಸಮುದಾಯ ಕೇವಲ ಕೃಷಿಯ ಮೇಲೆ ಅವಲಂಬಿತವಾಗದೇ ಹೈನುಗಾರಿಕೆ, ಮೀನು ಸಾಕಾಣಿಕೆಯಂತಹ ಕಾರ್ಯಗಳನ್ನು ಮೈಗೂಡಿಸಿಕೊಂಡು ಸಾಲಮುಕ್ತ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂದು ರೈತಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಡಿಯಲ್ಲಿ ಜರುಗಿದ ದೇವರಹಿಪ್ಪರಗಿ ತಾಲ್ಲೂಕು ರೈತ ಜಾಗೃತಿ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ನೇಮಕ, ಸದಸ್ಯತ್ವ ಅಭಿಯಾನ, ರೈತರ ವಿವಿಧ ಬೇಡಿಕೆಗಳ ಚಿಂತನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರೈತರಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ರೈತ ಸಮುದಾಯ ಈ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಅದಕ್ಕಾಗಿ ಒಗ್ಗಟ್ಟಿನ ಪ್ರದರ್ಶನ ಹಾಗೂ ಸಂಘಟನೆ ಮುಖ್ಯವಾಗಿದೆ ಎಂದರು.
ರೈತಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಮಾತನಾಡಿ, ಅಧಿಕಾರಿವರ್ಗ ಹಾಗೂ ರಾಜಕಾರಣಿಗಳು ರೈತ ಸಮುದಾಯಕ್ಕೆ ಋಣಿಯಾಗಿರಬೇಕು. ರೈತ ಸಮುದಾಯದ ಶ್ರಮದಿಂದಲೇ ಇಂದು ಜಗತ್ತು ಅನ್ನ ಪಡೆಯುತ್ತಿದೆ. ರೈತರ ಶ್ರಮ, ಸೇವೆಯನ್ನು ಎಲ್ಲರೂ ಗುರುತಿಸುವಂತಾಗಬೇಕು. ಅದಕ್ಕಾಗಿ ನಾವೆಲ್ಲ ಒಂದಾಗೋಣ ಎಂದರು.
ಕೃಷಿ ಇಲಾಖೆಯ ಜೆ.ಡಿ ರಾಜಶೇಖರ ವಿಲಿಯಮ್ಸ್ ಮಾತನಾಡಿ, ಕೃಷಿ ಇಲಾಖೆಯಡಿ ರೈತರಿಗೆ ಇರುವ ಯೋಜನೆಗಳು, ಅವಕಾಶಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.
ರೈತಸಂಘದ ರಾಜ್ಯ ಕಾರ್ಯಾದ್ಯಕ್ಷ ಮಹೇಶಗೌಡ ಸುಬೇದಾರ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಸ್ಥಳೀಯ ಪಿ.ಕೆ.ಪಿ.ಎಸ್ ಅಧ್ಯಕ್ಷ ಸಂಗಮೇಶ ಛಾಯಾಗೋಳ ಮಾತನಾಡಿದರು.
ಸ್ಥಳೀಯ ಚೌಕಿಮಠದ ಅಭಿನವ ಮುರಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಆರ್ಶೀಚನ ನೀಡಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಉಪತಹಶೀಲ್ದಾರ ಜೋಷಿ, ತಾಲ್ಲೂಕು ರೈತಸಂಘದ ಅಧ್ಯಕ್ಷ ಈರಪ್ಪ ಕುಳೇಕುಮಟಗಿ, ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಬಸನಗೌಡ ಲಿಂಗದಳ್ಳಿ(ಚಬನೂರ), ಸಚೀನಗೌಡ ಪಾಟೀಲ, ಭೀಮನಗೌಡ ಸಿದರಡ್ಡಿ, ರಫೀಕ್ ಬ್ಯಾಕೋಡ, ಅಪ್ಪುಗೌಡ ಪೊಲೀಸ್ ಪಾಟೀಲ, ಸಂಪತ್ ಜಮಾದಾರ, ಮಲ್ಲನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ದಾವಲಸಾಬ್ ಮಂದೇವಾಲ್, ಸಂಗಪ್ಪಗೌಡ ಬಿರಾದಾರ, ಶಾಕಿರಾ ಹೆಬ್ಬಾಳ, ಸುನಂದಾ ಸೊನ್ನಳ್ಳಿ, ಸಂಗಮೇಶ ಹುಣಸಗಿ, ಸುಭಾಸ್ ಸಜ್ಜನ, ಚಂದ್ರಕಾಂತ ಪ್ಯಾಟಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಇದ್ದರು.

