ಮುದ್ದೇಬಿಹಾಳ: ತಾಲೂಕಿನಲ್ಲಿ ಕನ್ನಡದ ತೇರನ್ನು ಎಳೆಯಲು ಹಿರಿಯ ಸಾಹಿತಿಗಳು, ಕನ್ನಡಾಭಿಮಾನಿಗಳು ಸೇರಿದಂತೆ ಪತ್ರಕರ್ತರ ಸಹಕಾರ ಕೋರುವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮದವರೊಂದಿಗೆ ಸಮಾಲೋಚನೆ ಮತ್ತು ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
ನನ್ನ ಕಿರು ಸೇವೆಯನ್ನು ಗುರುತಿಸಿ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಈ ಹುದ್ದೆ ಅಲಂಕರಿಸಿದ ನಾನು ಈ ಸ್ಥಾನಕ್ಕೆ ಎಂದಿಗೂ ಚ್ಯುತಿ ಬರದ ರೀತಿಯಲ್ಲಿ ಸಾಗುವೆ. ಯುವ ಬರಹಗಾರರು, ಕಣ್ಮರೆಯಲ್ಲಿರುವ ಸಾಹಿತಿಗಳು ಸೇರಿದಂತೆ ತೆರೆ ಮರೆಯಲ್ಲಿರುವ ಕನ್ನಡಾಭಿಮಾನಿಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗುವೆ. ಎಲ್ಲರೂ ಸೇರಿ ತಾಲೂಕಿನಲ್ಲಿ ಕನ್ನಡದ ವೈಭವವನ್ನು ಮೆರೆಯೋಣ. ನನಗೆ ಎಲ್ಲರ ಸಹಕಾರ ಅವಶ್ಯ. ಸಾಹಿತಿಗಳನ್ನು ವೇದಿಕೆಯ ಮೇಲೆ ಕೂರಿಸಿ ನಾನು ಕೆಳಗೆ ಕೂರಬೇಕು ಅನ್ನೋ ಮನೋಭಾವದವನು ನಾನು. ಜಾತಿ ಮತ ಪಂಥ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣುವೆ. ತಿಳಿಯದೇ ಸಣ್ಣ ಪುಟ್ಟ ತಪ್ಪುಗಳು ನನ್ನಿಂದಾಗುತ್ತಿದ್ದರೆ ತಿಳಿ ಹೇಳಿದರೆ ಸಾಕು ತಿದ್ದಿಕೊಳ್ಳುವೆ. ತಾಲೂಕಿನಲ್ಲಿ ಕನ್ನಡದ ಕಂಪನ್ನು ಇನ್ನಷ್ಟು ಪಸರಿಸುವ ಕಾರ್ಯಕ್ಕೆ ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹೆಜ್ಜೆ ಹಾಕುತ್ತೇನೆ. ಅದೆಷ್ಟೋ ವೇದಿಕೆ ಸಿಗದ ಪ್ರತಿಭಾನ್ವಿತ ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ ಕಾರ್ಯ, ನಿಂತ ದತ್ತಿ ಕಾರ್ಯಕ್ರಮಗಳು ಸೇರಿದಂತೆ ಸಾಹಿತ್ಯಾತ್ಮಕ ಚಟುವಟಿಕೆಗಳು ಇನ್ನು ಮೇಲಿಂದ ಮೇಲೆ ನಡೆಯಲಿವೆ ಎಂದರು.
ಈ ವೇಳೆ ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಮಾತನಾಡಿ, ತಾಲೂಕಿನ ಕನ್ನಡದ ರಥವನ್ನು ಎಳೆಯುವ ಜವಾಬ್ದಾರಿಯನ್ನು ಕ್ರಿಯಾಶೀಲತೆಯಲ್ಲಿ ಯಾರಿಗೂ ಕಡಿಮೆ ಇಲ್ಲದ ಕಾಮರಾಜ ಅವರಿಗೆ ನೀಡಿದ್ದು ಸಂತಸ ತಂದಿದೆ. ಸಮಾಜದಲ್ಲಿ ಒಳ್ಳೆಯದನ್ನು ಹುಡುಕುವುದರ ಜೊತೆಗೆ ಕೆಟ್ಟದ್ದಕ್ಕೆ ಎಚ್ಚರಿಕೆ ಘಂಟೆಯನ್ನು ಬಾರಿಸುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ವಿಶ್ವಾಸ ನನಗಿದೆ ಎಂದರು.
ಈ ವೇಳೆ ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಮುಖಂಡರಾದ ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ, ಬಸಲಿಂಗಪ್ಪಣ್ಣ ರಕ್ಕಸಗಿ, ವಿಲಾಸ ಪಾಟೀಲ, ಸದಾಶಿವ ಮಠ, ರವಿ ಪಾಟೀಲ, ಹುಸೇನ ಮುಲ್ಲಾ ಕಾಳಗಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

