ಅಮೋಘಸಿದ್ದೇಶ್ವರ ಜಾತ್ರೆ | ಪಲ್ಲಕ್ಕಿ ಉತ್ಸವ | ರಥೋತ್ಸವ | ನೀರೋಕುಳಿ | ಕಂಬ ಕಸರತ್ತು
ತಿಕೋಟಾ: ತಾಲ್ಲೂಕಿನ ಘೋಣಸಗಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಜರುಗಿದ ಅಮೋಘಸಿದ್ದ ದೇವರ ಜಾತ್ರೆಯಲ್ಲಿ ಭಕ್ತರು ಭಂಡಾರದಲ್ಲಿ ಮಿಂದೆದ್ದು ಪುಳಕಿತರಾದರು. ಗ್ರಾಮದ ರಾಮೇಶ್ವರ, ಕೇದಾರಲಿಂಗ, ಲಕ್ಷ್ಮಿದೇವಿ ಜಾತ್ರೆ ಹಾಗೂ ಮಲ್ಲಯ್ಯನ ಐದೇಶಿ ಎಲ್ಲವೂ ಸೇರಿ ಗ್ರಾಮಸ್ಥರು ಆಚರಣೆ ಮಾಡಿದ್ದು ವಿಶೇಷ.
ಮೊದಲ ದಿನ ಗುರುವಾರ ಗ್ರಾಮದ ಅಮೋಘಸಿದ್ದ ದೇವರ ಪಲ್ಲಕ್ಕಿ ಹಾಗೂ ಸೋಮದೇವರಹಟ್ಟಿಯ ಸೋಮನಿಂಗ ದೇವರ ಪಲ್ಲಕಿಯ ಭೇಟಿ ನೀಡಿದವು. ಅಪಾರ ಭಕ್ತ ಸಮೂಹದ ಮಧ್ಯೆ ಪಲ್ಲಕ್ಕಿ ಭೇಟಿ ಭಕ್ತರ ಮನ ಸೆಳೆಯಿತು. ನಂತರ ರಾಮೇಶ್ವರ ದೇವರ ತೇರನ್ನು ಭಕ್ತರು ಎಳೆದರು. ಮಹಿಳೆಯರು ಬಾಳೆಹಣ್ಣು, ಬದಾಮ, ಖಾರಿಕ ಚುರುಮುರಿ ಎಸೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಶಾಲಾ ಮಕ್ಕಳಿಂದ ಕೋಲಾಟ, ಯುವಕರಿಂದ ಡೊಳ್ಳು ಕುಣಿತ ಜರುಗಿದವು.
ಎರಡನೇ ದಿನ ಗುರುವಾರ ಯುವಕರ ನೀರೋಕುಳಿ ಮದ್ಯಾಹ್ನ ಸುಡುಬಿಸಿಲಿನಲ್ಲಿ ಆರಂಭವಾಯಿತು. ಐವತ್ತು ಅಡಿಕ್ಕಿಂತ ಹೆಚ್ಚು ಎತ್ತರವಿರುವ ಕಂಬ ಏರುವ ಯುವಕರ ಸಾಹಸ ದೃಶ್ಯ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿತು. ಯುವಕರು ಕಂಬ ಏರುವ ತವಕದಲ್ಲಿದ್ದರೆ ಸುತ್ತಲಿನ ಯುವಕರು ನೀರು ಚಿಮ್ಮುವ ಮೂಲಕ ಕಂಬ ಏರದಂತೆ ಜಾರಿಸುತ್ತಿದ್ದರು. ಕಿಕ್ಕಿರಿದು ನೋಡುವ ಜನ ತಮ್ಮ ಮೋಬೈಲದಲ್ಲಿ ನೀರೋಕುಳಿ ದೃಶ್ಯ ಸೆರೆ ಹಿಡಿದುಕೊಂಡರು. ಸಂಜೆ ಬಣದಲ್ಲಿ ಜಂಗಿ ಕುಸ್ತಿ, ಬಾರ ಎತ್ತುವ ಸ್ಪರ್ಧೆ ಜರುಗಿದವು. ಅನ್ನ ಪ್ರಸಾದ ಸ್ವೀಕರಿಸಿ ಇಡೀ ರಾತ್ರಿ ಡೊಳ್ಳಿನ ಪದ ಹಾಡುವ ಮೂಲಕ ಜಾಗರಣೆ ನಡೆಯಿತು.
ಮೂರನೇಯ ದಿನ ಶನಿವಾರ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಅಪಾರ ಭಕ್ತ ಸಮೂಹದ ಮಧ್ಯೆ ಸೋಮಲಿಂಗೇಶ್ವರ ಹಾಗೂ ಅಮೋಘಸಿದ್ದೇಶ್ವರ ಭೇಟಿಯ ಸಂದರ್ಭದಲ್ಲಿ ಭಕ್ತರು ಭಂಡಾರ ಎಸೆಯುವ ಮೂಲಕ ಭಂಡಾರದಲ್ಲಿ ಮಿಂದೆದ್ದರು. ದೇವರ ಪಲ್ಲಕಿಗಳನ್ನು ಭಕ್ತರು ಎತ್ತರಕ್ಕೆ ಎತ್ತುವ ಮೂಲಕ ದೇವರ ಭೇಟಿ ಮಾಡಿಸಿದರು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪಾವನರಾದರು.