“ವಿದ್ಯಾರ್ಥಿ ನಿಧಿ” ಮಕ್ಕಳ ಕಥೆ- ಮಂಡ್ಯ ಮ.ನಾ.ಉಡುಪ
ರಾಜ ಮತ್ತು ಮಂತ್ರಿ ಮಾರುವೇಷದಲ್ಲಿ ದೇಶ ಸಂಚಾರಕ್ಕೆ ಹೊರಟಿದ್ದರು. ಹೀಗೆ ನಡೆಯುತ್ತಾ ನಡೆಯುತ್ತಾ ಅವರಿಬ್ಬರು ಗಡಿಭಾಗದ ಒಂದು ಹಳ್ಳಿ ತಲುಪಿದರು. ದಾರಿಯುದ್ದಕ್ಕೂ ರಾಜ ಒಂದು ವಿಚಿತ್ರವನ್ನು ಗಮನಿಸುತ್ತಾ ಬಂದಿದ್ದ. ಅದೇನೆಂದರೆ, ಎಲ್ಲರೂ ಮಂತ್ರಿಯ ಮುಖ ನೋಡಿ ಮುಗುಳ್ನಗುತ್ತಿದ್ದರು.
ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಈ ಮಂತ್ರಿ ಪರಿಚಿತನೇನೋ ಎಂಬಂತೆ ಜನ ನಡೆದುಕೊಳ್ಳುತ್ತಿದ್ದರು. ಕೆಲ ಹಿರಿಯರು ಬಂದು ಮಂತ್ರಿಯನ್ನು ಮಾತನಾಡಿಸಿದ್ದರು ಕೂಡ. ಇದನ್ನು ನೋಡಿ ರಾಜನಿಗೆ ಆಶ್ಚರ್ಯವೋ ಆಶ್ಚರ್ಯ. ಮಾರುವೇಷದಲ್ಲಿದ್ದರೂ ಮಂತ್ರಿಗೆ ಇಷ್ಟೊಂದು ಜನಮನ್ನಣೆ ಸಿಗುತ್ತಿರುವುದು ಹೇಗೆ ಎಂದು ತಲೆ ಕೆಡಿಸಿಕೊಂಡ. ಇದೇ ರೀತಿ ಮುಂದಿನ ಹಳ್ಳಿಗಳಲ್ಲೂ ಪುನರಾವರ್ತನೆಯಾದಾಗ ಕುತೂಹಲ ತಡೆಯಲಾರದೆ ಕೇಳಿಯೇ ಬಿಟ್ಟ. ‘ಮಂತ್ರಿಗಳೇ ನನಗೊಂದು ಸಂದೇಹ ಕಾಡುತ್ತಿದೆ’ ‘ಏನು ಮಹಾಪ್ರಭು ಅಂಥ ಸಂದೇಹ?’‘ನಾವಿಬ್ಬರೂ ಮಾರುವೇಷದಲ್ಲಿದ್ದೇವೆ. ಆದರೂ ಜನ ನಿಮ್ಮನ್ನು ಗುರುತಿಸುತ್ತಿದ್ದಾರೆ. ನನ್ನನ್ನೇಕೆ ಗುರುತಿಸುತ್ತಿಲ್ಲ?’.
‘ಇಲ್ಲ ಮಹಾಪ್ರಭು ಇಲ್ಲಿ ಯಾರೂ ನನ್ನನ್ನು ಗುರುತಿಸುತ್ತಿಲ್ಲ. ನೀವು ದೇಶದ ಮಹಾರಾಜರು ಎಂದೂ ಅವರಿಗೆ ತಿಳಿದಿಲ್ಲ. ನಮ್ಮನ್ನು ದಾರಿಹೋಕರೆಂದೇ ಭಾವಿಸಿದ್ದಾರೆ. ಆದರೂ ನಿಮಗೇಕೆ ಈ ಅನುಮಾನ ಕಾಡಿತು?’ ಎಂದು ಕೇಳಿದ ಮಂತ್ರಿ.
‘ಹೌದಾ? ಮತ್ತೆ ಎಲ್ಲರೂ ನಿಮ್ಮನ್ನು ನೋಡಿ ಮುಗುಳ್ನಗುತ್ತಿದ್ದಾರೆ, ನಮಸ್ಕಾರ ಮಾಡುತ್ತಿದ್ದಾರೆ. ನಿಮ್ಮನ್ನು ಅವರಾಗಿಯೇ ಬಂದು ಮಾತನಾಡಿಸುತ್ತಿದ್ದಾರೆ. ಇವೆಲ್ಲ ಹೇಗೆ ಸಾಧ್ಯ?’ ಎಂದ ರಾಜ ಅಚ್ಚರಿಯಿಂದ.
‘ಮಹಾಪ್ರಭು ನೀವು ಜನರನ್ನು ಮಾತ್ರ ಗಮನಿಸುತ್ತಿದ್ದೀರಿ. ನನ್ನನ್ನು ಗಮನಿಸಿದಂತೆ ಕಾಣುತ್ತಿಲ್ಲ. ಅವರು ಮುಗುಳ್ನಗುವುದಕ್ಕೂ ಮುನ್ನ ನಾನು ಅವರನ್ನು ನೋಡಿ ನಗುತ್ತೇನೆ. ನಾನು ಪರಿಚಿತನಂತೆ ನಕ್ಕಿದ್ದನ್ನು ನೋಡಿ ಅವರೂ ನಗುತ್ತಾರೆ. ಆಗ ನಮ್ಮಿಬ್ಬರ ನಡುವೆ ನಮಗೇ ತಿಳಿಯದಂತೆ ಆತ್ಮೀಯ ಬಂಧವೊಂದು ಬೆಳೆದು ಬಿಡುತ್ತದೆ. ಹಾಗಾಗಿ ಅವರು ನಮಸ್ಕರಿಸುತ್ತಾರೆ, ಮಾತಾಡಿಸುತ್ತಾರೆ’ ಎಂದ ಮಂತ್ರಿ ನಗುತ್ತಾ.
‘ಇದು ನಿಜವೇ?’ ಎಂದು ರಾಜ ಕೇಳಿದ.
‘ಬೇಕಿದ್ದರೆ ನೀವೂ ಪ್ರಯತ್ನಿಸಿ ನೋಡಿ’ ಎಂದ ಮಂತ್ರಿ.
ಮುಂದಿನ ಹಳ್ಳಿಗೆ ಹೋದಾಗ ರಾಜನೂ ಸ್ಥಳೀಯರತ್ತ ಮುಗುಳ್ನಗೆ ಬೀರಿದ. ಆ ನಗು ಜನರ ಮುಖದಲ್ಲಿಯೂ ಪ್ರತಿಫಲಿಸಿತು! ಊರಿನ ಹಿರಿಯರು ಬಂದು ಮಾತನಾಡಿಸಿದರು, ಎಲ್ಲಿಂದ ಬಂದಿರುವಿರೆಂದು ವಿಚಾರಿಸಿ, ಸತ್ಕರಿಸಿದರು.
‘ಮಂತ್ರಿಗಳೇ, ಒಂದು ಸಣ್ಣ ನಗುವಿಗೆ ಇಷ್ಟೊಂದು ಶಕ್ತಿ ಇದೆಯೆಂದು ನನಗೆ ತಿಳಿದಿರಲಿಲ್ಲ. ಎಲ್ಲರೂ ಹೀಗೆ ನಗುನಗುತ್ತಾ ಇದ್ದರೆ ಪ್ರಪಂಚ ಎಷ್ಟೊಂದು ಚೆನ್ನಾಗಿರುತ್ತದಲ್ಲವೇ? ಆದರೂ ಜನರೇಕೆ ನಗುವುದಿಲ್ಲ?’ ಎಂದು ಮಂತ್ರಿಯನ್ನು ಕೇಳಿದ.
‘ಮಹಾರಾಜರೇ, ನಮ್ಮ ಜನರು ನಗುವುದಕ್ಕೂ ಕಾರಣವೊಂದು ಬೇಕೆಂದು ಹುಡುಕುವವರು. ಅವರು ಸುಮ್ಮ ಸುಮ್ಮನೆ ಹಾಗೆಲ್ಲಾ ನಗುವುದಿಲ್ಲ. ತುಂಬಾ ಗಂಭೀರವಾಗಿದ್ದರೆ ಗೌರವ ಎಂಬ ತಪ್ಪು ಕಲ್ಪನೆ ಅವರಲ್ಲಿದೆ. ಹಾಗೆಯೇ ಇನ್ನೊಂದು ಕೆಟ್ಟ ಬುದ್ಧಿ ಕೂಡ ಇದೆ. ಅವರು ಇನ್ನೊಬ್ಬರನ್ನು ನೋಡಿ ಕುಹಕದಿಂದ ನಗುತ್ತಾರೆ ವಿನಾ ಇನ್ನೊಬ್ಬರೊಡನೆ ಖುಷಿಯಿಂದ ನಗುವುದಿಲ್ಲ!’
‘ಮಂತ್ರಿಗಳೇ ಸೈನಿಕರಿಗೆ ಶಸ್ತ್ರಾಭ್ಯಾಸ ನೀಡುವಂತೆ ಜನರಿಗೆಲ್ಲ ನಗುವುದನ್ನೂ ಕಡ್ಡಾಯವಾಗಿ ಕಲಿಸಿದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ’ ಎಂದು ಮಂತ್ರಿಯ ಮುಖ ನೋಡಿದ ರಾಜ. ಇಬ್ಬರೂ ಜೋರಾಗಿ ನಗುತ್ತಾ ಹೆಜ್ಜೆ ಬೆಳೆಸಿದರು.

