ಸಮರ್ಪಕ ಮಳೆ | ಬಿತ್ತನೆ ಪೂರ್ಣ | ಗುರಿ ಮೀರಿದ ಬಿತ್ತನೆ | ಬಂಪರ್ ಬೆಳೆ ನಿರೀಕ್ಷೆ |
– ಇಲಾಹಿ ಇ. ಜಮಖಂಡಿ
ಚಿಮ್ಮಡ: ಬೇಸಿಗೆಯ ಬೀರು ಬಿಸಿಲಿನ ತಾಪದಿಂದ ಬಸವಳಿದ ಜನತೆಗೆ ಸಮರ್ಪಕವಾಗಿ ಸುರಿದ ಮುಂಗಾರು ಪೂರ್ವ, ಮುಂಗಾರು ಮಳೆಯಿಂದ ಈ ಭಾಗದ ಇಡೀ ವಾತಾವರಣವೇ ತಂಪೆರೆದಂತಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಅಶ್ವಿನಿ, ಭರಣಿ, ರೋಹಿಣಿ ಮಳೆಗಳು ರೈತರಲ್ಲಿ ಆಶಾಭಾವಣೆ ಮೂಡಿಸಿದ್ದವು, ಮಳೆಯನ್ನೆ ನಂಬಿ ಹಲವು ರೈತರು ಬಿತ್ತನೆ ಕಾರ್ಯ ಶುರು ಮಾಡಿದ್ದರು. ಜೂನ್ ಏಳರಿಂದ ಪ್ರಾರಂಭಗೊಳ್ಳಬೇಕಿದ್ದ ಮೃಗಶಿರಾ ಮಳೆ ಒಂದು ವಾರ ಕಳೆದರೂ ಬಾರದಿದ್ದಾಗ ಆತಂಕ ಎದುರಾಗಿತ್ತು. ತಡವಾಗಿಯಾದರೂ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯನ್ನೆ ನಂಬಿ ಬಿತ್ತನೆ ಮಾಡಿದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಬೆಳಗಾವಿ ಮಹಾರಾಷ್ಟ್ರ ಭಾಗಗಳಲ್ಲಿ ಮಳೆ ಕೊರತೆಯ ಪರಿಣಾಮ ಹಿಡಕಲ್ ಜಲಾಶಯದಲ್ಲಿ ನೀರು ಸಂಗ್ರಹಣಾ ಪ್ರಮಾಣವೂ ಕ್ಷೀಣಿಸಿದ್ದು ಇದರಿಂದಾಗಿ ಗ್ರಾಮದ ಮೂಲಕ ಹರಿಯುವ ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸುವ ಪ್ರಮಾಣ ಕೂಡ ಕಡಿಮೆಯಾಗಿದೆ. ಇದರಿಂದ ವಾಣಿಜ್ಯ ಬೆಳೆಗಳಾದ ಕಬ್ಬು, ಅರಿಷಿಣ, ಬೆಳೆಗಾರರಲ್ಲಿ ಆತಂಕ ಮೂಡಿದ್ದರೂ, ಗೋವಿನಜೋಳ ಸೇರಿದಂತೆ ಹಲವು ಮಿಶ್ರ ಬೆಳೆಗಳು ರೈತರ ಕೈಹಿಡಿಯುವ ಆಶಾಭಾವಣೆ ಮೂಡಿಸಿದೆ.
ಕಳೆದ ಎರಡು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದರಿಂದ ಬೆಳೆದ ಬೆಳೆಯ ಲಾಭ ಕೈಗೆಟುಕದೆ ನಷ್ಟ ಅನುಭವಿಸಿದ ಪರಿಣಾಮ ಸಾಲದ ಶೂಲ ಕಾಡುತಿದ್ದರೂ ವರುಣನನ್ನೇ ನಂಬಿ ರೈತರು ಬಿತ್ತನೆ ಮಾಡಿದ್ದಾರೆ, ಈ ಬಾರಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಉತ್ತಮ ವಾತಾವರಣ ನಿರ್ಮಾಣಗೊಡಿದ್ದು ಬಾವಿ, ಬರ‍್ವೆಲ್‌ಗಳ ಅನುಕೂಲ ಹೊಂದಿದವರು ವಾಣಿಜ್ಯ ಬೆಳೆಗಳಾದ ಕಬು, ಅರಿಷಿನ ಬೆಳೆ ಬಿತ್ತನೆ ಮಾಡಿದ್ದು ಕಾಲುವೆನೀರು, ಮಳೆ ಆಶ್ರಯಿಸಿದ ರೈತರು ಗೋವಿನಜೋಳ, ಶೇಂಗಾ, ಹೆಸರು, ಸೂರ್ಯಕಾಂತಿ, ಉದ್ದು, ತೊಗರಿ ಸೇರಿದಂತೆ ತರಕಾರಿ ಬೆಳೆಯನ್ನೂ ಹಲವು ರೈತರು ಬಿತ್ತನೆ ಮಾಡಿದ್ದು ಬಂಪರ್ ಬೆಳೆ ಪಡೆಯುವ ನಿರಿಕ್ಷೆಯಲ್ಲಿದ್ದಾರೆ.
“ಸರಕಾರ ಕೃಷಿ ಇಲಾಖೆಯ ಮೂಲಕ ಸೋಯಾಬಿನ್, ಹೆಸರು, ಉದ್ದು ಗೋವಿನಜೋಳದ ಬಿತ್ತನೆ ಬೀಜಗಳನ್ನು ಈ ಬಾರಿ ಸಕಾಲಕ್ಕೆ ರಿಯಾಯಿತಿ ದರದಲ್ಲಿ ಪೋರೈಸಲಾಗಿದ್ದು, ಶೇ ೭೫ರಷ್ಟು ರೈತರು ಈಗಾಗಲೆ ಪಡೆದುಕೊಂಡಿದ್ದಾರೆ, ಪರಿಶಿಷ್ಠ ಜಾತಿ, ಪಂಗಡದವರಿಗೆ ವಿಶೇಷ ರಿಯಾಯಿತಿ ದರದಲ್ಲಿ ಪೋರೈಸಲಾಗಿದೆ. ಅಲ್ಲದೇ ಸಾವಯವ ಕೃಷಿಗೆ ಬಳಸಲಾಗುವ ಲಘೂ ಪೋಷಕಾಂಶಗಳನ್ನು ಕೂಡ ರಿಯಾಯಿತಿ ದರದಲ್ಲಿ ಲಭ್ಯವಿದ್ದು ಅವಶ್ಯವಿರುವ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದು.”
– ಎಸ್.ಎಂ. ಬಿರಾದಾರ
ತಾಲೂಕು ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ತೇರದಾಳ.
” ಕಳೆದ ಹಲವು ವರ್ಷಗಳಿಂದ ನಮ್ಮ ಭಾಗದಲ್ಲಿ ಮಿರ್ಗಾ ಸೇರಿದಂತೆ ಮುಂಗಾರು ಮಳೆ ಆಗಿರಲಿಲ್ಲ. ಈ ಬಾರಿ ಎಲ್ಲ ಮಳೆಗಳು ಉತ್ತಮ ಪ್ರಮಾಣದಲ್ಲಿ ಸುರಿಯುತಿದ್ದು ಬಿತ್ತಿದ ಬೆಳೆ ಕೈಗೆಟುಕುವ ಭರವಸೆ ಮೂಡಿಸಿದೆ. ನಮ್ಮ ಬಾಗದ ರೈತರು ಹೆಚ್ಚಾಗಿ ಘಟಪ್ರಭಾ ಕಾಲುವೆಯ ನೀರನ್ನೇ ಅವಲಂಭಿಸಿದ್ದು ಎಡದಂಡೆ ಕಾಲುವೆಗೆ ಈಗಾಗಲೆ ನೀರು ಹರಿಸಿರುವುದರಿಂದ ರೈತರಿಗೆ ಸಧ್ಯಕ್ಕೆ ಬೆಳೆಗೆ ನೀರುಣಿಸುವ ಸಮಸ್ಯೆ ಕಾಡದು.”
– ನಿಂಗಣ್ಣ ಪೂಜಾರಿ
ಪ್ರಗತಿಪರ ರೈತರು, ಚಿಮ್ಮಡ.

