ವಿಜಯಪುರ: ಇನ್ನುಮುಂದೆ ನೀನು ನಡೆದಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಸಿಗೆಯಲ್ಲಿಯೇ ಕಾಲ ಕಳೆಯಬೇಕು ಎಂದು ವೈದ್ಯರು ಹೇಳಿದ್ದನ್ನು ಸವಾಲಾಗಿ ಸ್ವೀಕರಿಸಿದ ನಮ್ಮ ಎಲುಬು ಮತ್ತು ಕೀಲುಗಳ ವಿಭಾಗದ ತಜ್ಞ ವೈದ್ಯರ ಬಳಗ ಸ್ವಾಧೀನ ಕಳೆದುಕೊಂಡಿದ್ದ ಕಾಲುಗಳಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದ್ದು ನಮ್ಮ ಆಸ್ಪತ್ರೆಯ ವೈದ್ಯರ ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಹೇಳಿದರು.
ಶನಿವಾರ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಬಸವರಾಜ್ ರಾಂಪೂರ ಎನ್ನುವ ವ್ಯಕ್ತಿಯು ಯಾವುದೋ ಕಾರಣದಿಂದ ಬಿದ್ದು ಕಾಲಿನ ಸ್ವಾಧಿನತೆಯನ್ನು ಕಳೆದುಕೊಂಡಿದ್ದರು. ನಗರದ ವಿವಿಧ ವೈದ್ಯರುಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡರೂ ಸಹ ಯಾವುದೇ ರೀತಿಯ ಪ್ರಯೋಜನ ಕಾಣದೇ ಕಳೆದ ಒಂದು ತಿಂಗಳಿನಿಂದ ಹಾಸಿಗೆ ಹಿಡಿದು ಮಲಗಿದ್ದರು. ಹಾಸಿಗೆಯನ್ನು ಬಿಟ್ಟು ಏಳಲಾಗದ ಸ್ಥಿತಿಯಲ್ಲಿ ಜೀವನ ಕಳೆಯಬೇಕಾಯಿತಲ್ಲ ಎಂದು ಕಂಗಾಲಾದ ಕುಟುಂಬ ನಮ್ಮ ಆಸ್ಪತ್ರೆಗೆ ಆಗಮಿಸಿ ಎಲುಬು ಮತ್ತು ಕೀಲುಗಳ ವಿಭಾಗದ ಮುಖ್ಯ ವೈದ್ಯರನ್ನು ಸಂಪರ್ಕಿಸಿದಾಗ ಅಲ್ಲಿನ ತಜ್ಞ ವೈದ್ಯರುಗಳು ಈ ಹಿಂದೆ ನೀಡಲಾಗಿದ್ದ ಎಲ್ಲ ವರದಿಗಳನ್ನು ಅಧ್ಯಯನ ಮಾಡಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಅದರಲ್ಲೂ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಗೆ ಪಿಟ್ಸ್ ರೋಗದ ಸಮಸ್ಯೆ ಇದ್ದು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅದು ಮರುಕಳಿಸುವ ಸಾಧ್ಯತೆ ಇರುವ ಕಾರಣ ನಾವು ಯಾವುದೇ ರೀತಿಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದರು.
ಆದರೆ ಮುಂದೆ ತೊಂದರೆಯಾಗುತ್ತದೆ ಎಂದು ಇಂದು ಚಿಕಿತ್ಸೆ ನೀಡದೇ ಬಿಟ್ಟರೆ ಮುಂದಿನ ದಿನಗಳಲ್ಲಿ ಆ ವ್ಯಕ್ತಿಯ ಬದುಕು ದುಸ್ತರವಾಗುತ್ತದೆ ಎನ್ನುವುದನ್ನು ಮನಗಂಡ ನಮ್ಮ ವೈದ್ಯರ ತಂಡ ಯಾವುದೇ ರೀತಿಯ ಅಪಾಯ ಬಂದರೂ ಅದನ್ನು ನಾವು ಸಮರ್ಥವಾಗಿ ನಿರ್ವಹಣೆ ಮಾಡುತ್ತೇವೆ ಎನ್ನುವ ಭರವಸೆಯಿಂದ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರು. ಅದರ ಪರಿಣಾಮವಾಗಿ ಇಂದು ಶಸ್ತ್ರಚಿಕಿತ್ಸೆಯ ನಂತರದಲ್ಲಿ ವ್ಯಕ್ತಿಯು ಪುನಃ ನಡೆದಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಕುಟುಂಬ ವರ್ಗದವರಲ್ಲಿ ಸಂತಸ ಮೂಡಿದೆ. ಇದಕ್ಕೆ ನಮ್ಮ ತಜ್ಞ ವೈದ್ಯರ ತಂಡದ ಕಾರ್ಯ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಸಿದ್ಧೇಶ್ವರ ಶ್ರೀಗಳ ಆಶಿರ್ವಾದವು ನಮ್ಮ ಜೊತೆಗಿದೆ. ಹೀಗಾಗಿ ಎಂಥದೇ ಸಮಸ್ಯೆಯನ್ನು ಸಹ ನಿರಾತಂಕವಾಗಿ ನಾವು ನಿಭಾಯಿಸುತ್ತೇವೆ ಎಂದು ಹೇಳಿದರು.
ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದ ಎಲುಬು ಮತ್ತು ಕೀಲುಗಳ ವಿಭಾಗದ ಸರ್ವ ವೈದ್ಯ ಬಳಗಕ್ಕೂ ಹಾಗೂ ಶಸ್ತ್ರಚಿಕಿತ್ಸೆಗೆ ನೆರವಾದ ಎಲ್ಲ ಓಟಿ ವಿಭಾಗದ ಮುಖ್ಯಸ್ಥರು, ಅರವಳಿಕೆ ತಜ್ಞರು ಹಾಗೂ ಸರ್ವ ಸಿಬ್ಬಂದಿಗಳಿಗೂ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಸರ್ವ ಸದಸ್ಯ ಬಳಗದವರು ಶುಭ ಹಾರೈಸಿದ್ದಾಗಿ ಡಾ.ಮಳಖೇಡ್ಕರ ತಿಳಿಸಿದರು.
Subscribe to Updates
Get the latest creative news from FooBar about art, design and business.
ಸ್ವಾಧೀನವಿಲ್ಲದ ಕಾಲುಗಳಿಗೆ ಮರುಜೀವ ನೀಡಿದ ಜೆಎಸ್‌ಎಸ್ ಆಸ್ಪತ್ರೆ :ಡಾ.ಮಳಖೇಡ್ಕರ್
Related Posts
Add A Comment

