ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಸಿಂದಗಿ: ಜೆಡಿಎಸ್ ಘೋಷಿತ ಅಭ್ಯರ್ಥಿಯ ಧೋರಣೆಯ ವಿಚಾರದಲ್ಲಿ 13 ಜನ ಪದಾಧಿಕಾರಿಗಳು ಅಸಮಾಧಾನಗೊಂಡು ರಾಜೀನಾಮೆ ಸಲ್ಲಿಸಿದ್ದೇವೆ ಎಂದು ತಾಲೂಕಾಧ್ಯಕ್ಷ ದಾನಪ್ಪಗೌಡ ಚನಗೊಂಡ ಹೇಳಿದರು.
ಶನಿವಾರದಂದು ಈ ಕುರಿತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಅಭ್ಯರ್ಥಿಯಾಗಿ ಘೋಷಿತರಾದ ವಿಶಾಲಾಕ್ಷಿ ಪಾಟೀಲ ಅವರು ಪಕ್ಷದಲ್ಲಿ ಪದಾಧಿಕಾರಿಗಳು ಮಾಡುವ ಸಂಘಟನಾತ್ಮಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿಲ್ಲ. ಅಲ್ಲದೆ ಸಲಹೆ ಸೂಚನೆಗಳನ್ನು ನೀಡಿದರೂ ಅವುಗಳನ್ನು ಆಲಿಸುತ್ತಿಲ್ಲ. ಪಕ್ಷದ ಪದಾಧಿಕಾರಿಗಳನ್ನು ಸಮಾಧಾನ ಪಡಿಸುವಲ್ಲಿ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಭ್ಯರ್ಥಿಯು ಗೆಲುವು ಸಾಧಿಸಬೇಕಾದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಗೆಲುವಿಗೆ ಶ್ರಮಿಸುತ್ತೇವೆ. ಇಲ್ಲವಾದಲ್ಲಿ ಜೆಡಿಎಸ್ ಕಾರ್ಯಕರ್ತರೆಲ್ಲ ಜೊತೆಗೂಡಿ, ಪಕ್ಷದ ಕಾರ್ಯಕರ್ತೆಯಾದ ಜ್ಯೋತಿ ಗುಡಿಮನಿಯವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ, ಅವರನ್ನು ಜಯಗೊಳಿಸಲು ಪಣ ತೊಡುವುದಾಗಿ ಎಚ್ಚರಿಕೆ ನೀಡಿದರಲ್ಲದೆ ಜೆಡಿಎಸ್ ಗೆಲುವಿಗೆ ತಾವು ಸದಾ ಬದ್ಧರಾಗಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿಂಗರಾಜು ಬಗಲಿ, ಶಿವರಾಜ ಪೊಲೀಸ್ ಪಾಟೀಲ, ಸಿ.ಎಸ್.ಕುಂಬಾರ, ಶಿವಶರಣ ಹೆಗ್ಗಣದೊಡ್ಡಿ, ಮ ಬಾಬುಪಟೇಲ ಬಿರಾದಾರ ಮತ್ತಿತರರಿದ್ದರು.