ಸೀರೆ ಮತ್ತು ನೀರೆಗೆ ಅವಿನಾಭಾವ ಸಂಬಂಧವಿದೆ.ನೀರೆಗೆ ಸೀರೆಯೇ ಸೊಬಗು ನಮ್ಮ ಭಾರತ ದೇಶದ ಸಂಸ್ಕೃತಿ ಕೂಡ ಹೌದು.ಸೀರೆಯಿಂದ ನಾರಿಯ ಸೌಂದರ್ಯ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ.ಪಾರಂಪರಿಕ ಉಡುಪು ಕೂಡ ಹೌದು.ಸೀರೆಯಲ್ಲಿ ನೀರೆಯ ಅಂದವೇ ಚಂದ.ಸೀರೆ ನಮ್ಮ ದೇಶದ ಸಂಸ್ಕೃತಿಯ ಜೀವಾಳ.ನೀರೆಗೆ ಸೀರೆಯ ಮೇಲೆ ಮೋಹ ಹೆಚ್ಚು ಅದರಿಂದ ಅವಳ ಮೆರಗೂ ಕೂಡ ಹೆಚ್ಚಾಗುವುದು.
ನವಿಲಿನ ನಾಟ್ಯ ಚಂದ
ಕೋಗಿಲೆಯ ಗಾನ ಚಂದ
ನೀರೆಗೆ ಸೀರೆ ಬಲು ಅಂದ..
ಹೆಣ್ಣು ತೆಳ್ಳಗಿರಲಿ, ಬೆಳ್ಳಗಿರಲಿ, ದಪ್ಪಗಿರಲಿ , ಉದ್ದವಿರಲಿ, ಗಿಡ್ಡವಿರಲಿ,ಪ್ರತಿಯೊಬ್ಬರ ತನು ಮನವನ್ನು ಅಪ್ಪಿ ಬಳಸಿ ಎಲ್ಲರಿಗೂ ಖುಷಿ ಕೊಡುವುದು ಈ ಸೀರೆ.ಬಣ್ಣ ಬಣ್ಣದ ಬಗೆ ಬಗೆಯ ಸೀರೆಗೆ ಸೆಳೆಯುವ ಗುಣವಿದೆ.ಎಲ್ಲ ಭಾವಗಳನ್ನು ಸಂಬಂಧಗಳನ್ನು ಬೆಸೆದುಕೊಂಡಿದೆ.ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಎಷ್ಟೇ ಉಡುಪುಗಳು ಬಂದರು ಸೀರೆಯ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.ಅತಿ ಉದ್ದದ ಉಡುಪಾದರು ಎಲ್ಲ ಸಭೆ ಸಮಾರಂಭಗಳಲ್ಲಿ ಆಕರ್ಷಣೀಯ ಮೆರಗು ಕೊಡುವುದು ಸೀರೆ ಮಾತ್ರ.
ಸೀರೆಯ ಮಹಿಮೆ ಅಪಾರ
ನಮ್ಮ ರೀ ಯನ್ನು ಸೆಳೆಯುವ ಗುರಿಕಾರ.
ಚಂದವಾಗಿ ಸೀರೆಯುಟ್ಟು ಜಡೆಗೆ ಮಲ್ಲಿಗೆ ಮುಡಿದು ಕೈತುಂಬ ಬಳೆತೊಟ್ಟು ಹಣೆಗೆ ಕುಂಕುಮವಿಟ್ಟು ನಿಂತರೆ ಮೆಲ್ಲಗೆ ಬರದೆ ಇರ್ತಾರಾ ನಮ್ಮವರು.
ನನ್ನ ರೀ ಕೊಟ್ಟ ಮೊದಲ ಕಾಣಿಕೆ ಸೀರೆ.
ನನಗೆ ಮೊದಲ ಸಲ ನನ್ನ ಹುಟ್ಟು ಹಬ್ಬಕ್ಕೆ” ನನ್ನ ರೀ “ಕಡು ನೀಲಿ ಬಣ್ಣಕ್ಕೆ ಬಂಗಾರ ಬಣ್ಣದ ಅಂಚು ಇರುವ ಸೀರೆ ಕಾಣಿಕೆ ಕೊಟ್ಟಿದ್ರು ತುಂಬಾ ಅಂದ್ರೆ ತುಂಬಾ ಖುಷಿಯಾಗಿತ್ತು.ನನಗೆ ಸೀರೆ ಅಂದ್ರೆ ಪಂಚ ಪ್ರಾಣ. ಅದನ್ನು ನಿಟಾಗಿ ಉಟ್ಟು ಸಿಂಗರಿಸಿಕೊಂಡು ಬಂದಾಗ ನನ್ನವರು ನನಗೆ ಹೇಳಿದ ಮಾತು ಏನು ಗೊತ್ತಾ “ಅಯ್ಯೋ ನನ್ನ ಬಂಗಾರ” ನಾನು ನಾಚಿ ನೀರಾಗಿ ಹಾಗೆ ಹರಿದು ಅವರೆದೆಗೆ ಒರಗುವಂತೆ ಮಾಡಿದ್ದು ಈ ಸೀರೆ.ನನ್ನವರ ಮೊದಲ ಕಾಣಿಕೆಯ ಸೀರೆ ಹಾಗೂ ಆ ಕ್ಷಣದ ಮಧುರ ಪ್ರೀತಿ ಜೋಪಾನವಾಗಿ, ಸೀರೆಯನ್ನು ಬಿರುವಿನಲ್ಲಿ ಪ್ರೀತಿಯನ್ನು ಮನದಲ್ಲಿ ಕಾಪಿಟ್ಟುಕೊಂಡು ಬಂದಿರುವೆ..
ಇದನ್ನು ಯಾಕೆ ಹೇಳ್ತಾಯಿದಿನಿ ಅಂದ್ರೆ ಅವರು ಹೊಗಳುವುದು ಅಪರೂಪ.ಈ ಸೀರೆಯಿಂದ ನಾ ಬಂಗಾರವಾದೆ.ಅಂದ್ರೆ ಸೀರೆಯಲ್ಲಿ ಏನೊ ಜಾದುವಿದೆ.ಮಕ್ಕಳಿಂದ ಮುದುಕರವರೆಗೆ ಸೀರೆಗೆ ಗೌರವದ ಸ್ಥಾನವಿದೆ. ಚಮತ್ಕಾರದ ಉಡುಪಾಗಿದೆ
ಉಟ್ಟರೆ ನೀರೆ ಸೀರೆ
ಹರಿದು ಬರುವುದು
ರೀ ಗಳ ಒಲವ ಧಾರೆ..
ಗಂಡಂದಿರನ್ನು ಸೆಳೆಯಬೇಕಾದರೆ ಹೆಂಡಂದಿರು ಉಡಬೇಕು ಸೀರೆ.ಇದರಲ್ಲಿ ಅಂದದ ದೇವತೆಯಾಗಿ ಕಾಣುವಳು ನೀರೆ.ಸೀರೆಗೆ ಬಡವ ಶ್ರೀಮಂತ ಬೇಧವಿಲ್ಲ. ಜಾತಿ ಮತದ ತಾರತಮ್ಯವಿಲ್ಲ. ಎಲ್ಲರನ್ನು ಸುತ್ತಿ ಬಳಸಿ ಅಂದಗೊಳಿಸುವುದು, ನೀರೆಯರ ಮನ ಸಂತಸದ ಬುಗ್ಗೆಯಾಗಿಸುವುದು.
ಬರೆದಷ್ಟು ಮುಗಿಯದು ಈ ಸೀರೆ ಪುರಾಣ. ಕೊನೆಯದಾಗಿ ಹೇಳುವುದಿಷ್ಟೇ ಯುಗ ಯುಗ ಕಳೆದರೂ ಈ ಸೀರೆಯ ಮಹತ್ವ ಮಾಸದೇ ಉಳಿಯಬೇಕು. ಅದಕ್ಕಾಗಿ ಪ್ರತಿ ಹೆಣ್ಣು ಇತರ ಆಧುನಿಕ ಉಡುಪಿನ ಜೊತೆಗೆ ಸೀರೆಗೂ ಕೂಡ ಸ್ಥಾನ ಕೊಟ್ಟು, ನೀರೇ ಮತ್ತು ಸೀರೆಯ ಅವಿನಾಭಾವ ಸಂಬಂಧವನ್ನು ಕಾಪಿಟ್ಟುಕೊಂಡು ಬರಲಿ.