ಮನೆಯಲ್ಲಿ ಮಕ್ಕಳಿದ್ದರೆ ಆ ಮನೆಗೆ ಒಂದು ಕಳೆ. ಹೊರಗಡೆ ಹೋಗಿ ಎಷ್ಟೇ ಸುಸ್ತಾಗಿದ್ದರೂ ಮನೆಗೆ ಬಂದ ಕೂಡಲೇ ಮಗುವಿನ ಮುದ್ದಾದ ಮಾತು ಕೇಳಿದೊಡನೆ ಸುಸ್ತೆಲ್ಲಾ ಹೊರಟು ಹೋಗಿ ನವ ಚೈತನ್ಯ ಮೂಡುತ್ತದೆ. ಮುಗ್ಧ ಮನಸ್ಸಿನ ತೊದಲು ನುಡಿಯು ಜೀವ ಚೈತನ್ಯದ ಚಿಲುಮೆ. ಹೆಣ್ಣಿರಲಿ ಗಂಡಿರಲಿ ಮಕ್ಕಳು ಎಲ್ಲ ಒಂದೆ. ಆದಾಗ್ಯೂ ತುಲನಾತ್ಮಕವಾಗಿ ನೋಡಿದಾಗ ಹೆಣ್ಣು ಮಕ್ಕಳೇ ತುಸು ಹೆಚ್ಚು ತೂಗುತ್ತಾರೆ ಎಂದರೆ ತಪ್ಪಾಗಲಾರದೇನೋ.ಹೆಣ್ಣು ಚೆಲುವಿನ ಗಣಿಯು, ಸಂತಸದ ನಿಧಿಯು.
ಹೆಣ್ಣು ಮಗುವಿನ ಶಾರೀರಿಕ ವಿನ್ಯಾಸ ಗಂಡು ಮಗುವಿಗಿಂತ ಹೆಚ್ಚು ಸುಂದರ. ಸ್ವರವೂ ಕೋಮಲವಾಗಿರುತ್ತದೆ. ಚೋಟುದ್ದ ಜಡೆ ಬಿಟ್ಟು ಮನೆ ತುಂಬಾ ಓಡಾಡುತ್ತ ತನ್ನ ಚುರುಕುತನದಿಂದ ಮನೆ ಹಾಗೂ ಸುತ್ತಲಿನ ಎಲ್ಲರ ಮನವನ್ನು ಬಹು ಬೇಗ ಗೆಲ್ಲುತ್ತಾಳೆ. ಪಕ್ಕದ ಮನೆಯವರು ” ನಿಮ್ಮ ಮಗಳು ತುಂಬಾ ಚೂಟಿಯಾಗಿದ್ದಾಳೆ, ಎಷ್ಟು ಶಾಂತ ಸ್ವಭಾವ ” ಅಂದಾಗ ತಾಯಿಯ ಹೃದಯ ತುಂಬಿ ಬರುತ್ತದೆ. ಇನ್ನು ಅಲಂಕಾರ ಮಾಡುವುದೂ ಅಷ್ಟೆ. ಗಂಡು ಮಕ್ಕಳಿಗೆ ಒಂದು ಚಡ್ಡಿ ಅಂಗಿ ಸಿಕ್ಕಿಸಿದರೆ ಮುಗಿಯಿತು.ಹೆಣ್ಣಾದರೆ ಫ್ರಾಕ್, ಮಿಡ್ಡಿ, ಚೂಡಿ ಬಗೆ ಬಗೆಯ ಡ್ರೆಸ್ ಹಾಕಬಹುದು, ಬೇರೆ ಬೇರೆ ಭಂಗಿಯಲ್ಲಿ ಕೂದಲಿನ ಅಲಂಕಾರ ಮಾಡಬಹುದು. ಬಗೆ ಬಗೆಯ ಸರ ಓಲೆ ಹಾಕಿ ಸಂತಸಪಡಬಹುದು. ಹೀಗೆ ತಾಯಾದವಳು ತನ್ನ ಹೆಣ್ಣು ಮಗುವಿಗೆ ನಾನಾ ರೀತಿ ಅಲಂಕಾರ ಮಾಡುವುದರಲ್ಲಿ ಅನಿರ್ವಚನೀಯ ಆನಂದವನ್ನು ಅನುಭವಿಸುತ್ತಾಳೆ. (ಆದರೆ ಇದು ಒಂದು ಶಿಸ್ತಿನ ಪರಿಧಿಯೊಳಗೆ ಇದ್ದರೆ ಶ್ರೇಯಸ್ಸು) ಇನ್ನು ರಾಖಿ ಹಬ್ಬ , ನವರಾತ್ರೆ , ಸಂಕ್ರಾಂತಿ ಹಬ್ಬಗಳಲ್ಲಿ ಹೆಣ್ಣು ಮಕ್ಕಳು ಬಣ್ಣ ಬಣ್ಣದ ಉಡುಪಿನಲಿ ಕೇರಿ ತುಂಬಾ ಓಡಾಡಿಕೊಂಡು ಇರುವುದನ್ನು ನೋಡುವದು ಕಣ್ಣಿಗೆ ಹಬ್ಬವೇ ಸರಿ.ಹೆಣ್ಣು ಮಗುವಿಲ್ಲದ ತಂದೆಗೆ ಒಮ್ಮೆಯಾದರೂ ‘ತನಗೊಂದು ಹೆಣ್ಣು ಮಗು ಹುಟ್ಟಬಾರದಿತ್ತೇ ‘ ಅನಿಸದೇ ಇರದು. ಇನ್ನು ಓದುವುದರಲ್ಲೂ ಹೆಣ್ಣು ಮಕ್ಕಳೇ ಮುಂದಿರುತ್ತಾರೆ. ಪಬ್ಲಿಕ್ ಪರೀಕ್ಷಾ ಫಲಿತಾಂಶ ಹೇಳುವಾಗ ‘ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರದ್ದೇ ಮೇಲುಗೈ ‘ ಎನ್ನುವದನ್ನು ಪ್ರತಿ ವರ್ಷ ಕೇಳುತ್ತೇವೆ. ನಯ ವಿನಯ, ತಾಳ್ಮೆ, ಕರುಣೆ ಇವು ಹೆಣ್ಣು ಮಕ್ಕಳಿಗೆ ಹುಟ್ಟಿನಿಂಲೇ ಬಂದಿರುತ್ತವೆ ಎಂದರೂ ತಪ್ಪಾಗಲಾರದು.
ಅಣ್ಣಂದಿರ ಮೇಲೆ ತಂಗಿ ತೋರುವ ಅಕ್ಕರೆ ಅದ್ಭುತ. ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಅತ್ಯಂತ ಹತ್ತಿರದ ಬಂಧು ಅವಳ ಅಣ್ಣ ಅಥವ ತಮ್ಮ. ಶಾಲೆಯಿಂದ ಬಂದ ಕೂಡಲೇ ಎಲ್ಲವನ್ನೂ ತನ್ನ ಅಣ್ಣನಿಗೆ ಚಾಚೂ ತಪ್ಪದೇ ವರದಿ ಒಪ್ಪಿಸಬೇಕು ಆಗಲೇ ಮನಸಿಗೆ ನೆಮ್ಮದಿ. ದಿನಕ್ಕೆ ಒಮ್ಮೆಯಾದರೂ ಅಣ್ಣನೊಂದಿಗೆ ಹುಸಿ ಜಗಳವಾಡದೇ ಇದ್ರೆ ಹೆಚ್ಚಿನ ಹೆಣ್ಣು ಮಕ್ಕಳಿಗೆ ಕಣ್ಣಿಗೆ ನಿದ್ದೆಯೇ ಹತ್ತುವದಿಲ್ಲ. ತನ್ನ ಅಣ್ಣನಿಗೆ ಸಣ್ಣ ನೋವಾದರೂ ತಂಗಿ ಸಹಿಸಲಾರಳು. ಮದುವೆಯಾದ ನಂತರವೂ ಅಷ್ಟೆ ಎಷ್ಟೇ ದೂರದಲ್ಲಿರಲಿ ತನ್ನ ಅಣ್ಣ ಅಥವ ತಮ್ಮ ಸದಾ ಸುಖವಾಗಿರಲಿ ಎಂದು ದೇವರಲ್ಲಿ ಬೇಡುತ್ತ ಹಾರೈಸುತ್ತಾ ಇರುತ್ತಾಳೆ.
‘ಗದ್ದೆಗೆ ತೆವರಿ ಹೆಣ್ಣಿಗೆ ತವರು’ ಎನ್ನುವ ಗಾದೆಯಂತೆ ಹೆಣ್ಣಿಗೆ ತನ್ನ ತವರು ಮನೆ ಎಂದರೆ ಎಲ್ಲಿಲ್ಲದ ವ್ಯಾಮೋಹ. ಗಂಡನ ಮನೆಯಲ್ಲಿ ತನಗೆ ಎಷ್ಟೇ ಬಡತನವಿದ್ದರೂ ಸಹಿಸುತ್ತಾಳೆ.ಅತ್ತೆ ನಾದಿನಿ ಏನೇ ಮಾತನಾಡಿದರೂ ಸುಮ್ಮನಿರಬಲ್ಲಳು. ಆದರೆ ತನ್ನ ತವರು ಮನೆಯ ಸ್ಥಿತಿ ಗತಿಯನ್ನು ಆಡಿಕೊಳ್ಳುತ್ತಿರುವದು ತಿಳಿದು ಬಂದಾಗ ಕೆಂಡಮಂಡಲವಾಗುತ್ತಾಳೆ. ಬಡತನವಿದ್ದರೂ ತಂದೆ ಅವಳ ಪಾಲಿಗೆ ಊರಿನಲ್ಲೇ ಶ್ರೀಮಂತ, ವ್ಯವಹಾರ ಚತುರ, ಗುಣಾಡ್ಯ ವ್ಯಕ್ತಿ. ತಾಯಿ ಕೊಡುಗೈ ದಾನಿ, ಸಿರಿದೇವಿ ! ಅಣ್ಣ ಅಂದ್ರೆ ಚಿನ್ನ.ಯಾರಾದರೂ ಮನೆಗೆ ಬಂದವರು “ನಿನ್ನ ಅಪ್ಪ ಸಿಕ್ಕಿದ್ದ ಅಣ್ಣ ಸಿಕ್ಕಿದ್ದ ” ಅಂದ್ರೆ ಸಾಕು ಅವರಿಗೆ ಎಷ್ಟೇ ಒತ್ತಡವಿರಲಿ ಒತ್ತಾಯ ಮಾಡಿ ಕೂರಿಸಿ ತಕ್ಷಣ ಕಡಕ್ ಚಹ ಮಾಡಿ ತಂದಿಟ್ಟು ಕುಡಿಯಲಿಕ್ಕೂ ಬಿಡುವುದಿಲ್ಲ. “ಅಮ್ಮ ಹೇಗಿದಾಳೆ, ನನ್ನ ಸುದ್ದಿ ಹೇಳಿದಳಾ,.. ಹೇಳ್ದೆ ಎಲ್ಲಿರ್ತಾಳೆ ನಾನು ಅಂದ್ರೆ ಜೀವ,,.ಅಪ್ಪ ಹೇಗಿದಾನೆ ವೀಕ್ ಆಗಿದಾನಾ? ಪಾಪ ಎಲ್ಲ ಕೆಲಸ ಒಬ್ನೇ ಮಾಡಬೇಕು… ಅಣ್ಣ ನನ್ನ ಸುದ್ದಿ ಹೇಳಿದನಾ? ಹೇಳದೆ ಎಲ್ಲಿರ್ತಾನೆ… ಈ ರೀತಿ ಎದುರಿಗೆ ಕುಳಿತ ಆ ಮಹಾನುಭಾವನಿಗೆ ಮಧ್ಯೆ ಮಾತನಾಡಲು ಬಿಡದೆ ಎಲ್ಲವನ್ನೂ ಒಂದೇ ಸಲ ಹೇಳಿ ಸಂಭ್ರಮಿಸುತ್ತಾಳೆ.
ಇನ್ನು ಸಂಸಾರವನ್ನು ತೂಗಿಸಿಕೊಂಡು ಹೋಗುವುದರಲ್ಲೂ ಹೆಣ್ಣು ಎತ್ತಿದ ಕೈ. ಗಂಡು ಮನೆಗೆ ಬೇಕಾದ ದಿನಸಿಗಳನ್ನು , ಸಾಮಾನುಗಳನ್ನು ತಂದು ಹಾಕಬಹುದು ಆದರೆ ಇವೆಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸುವುದು ನಿರ್ವಹಣೆ ಮಾಡುವ ಕಲೆ ಹೆಣ್ಣಿಗೇ ಹೆಚ್ಚು ಸಿದ್ಧಿಸಿರುತ್ತದೆ. ಒಂದು ಮನೆಯಲ್ಲಿ ಕುಟುಂಬದ ಎಲ್ಲ ಯೋಗಕ್ಷೇಮವನ್ನು ನೋಡಿಕೊಳ್ಳುವ ಹೆಣ್ಣು ನಾಲ್ಕು ದಿನ ಹೊರಗಡೆ ಹೋದಾಗ ಊಟ , ಉಪಹಾರ ಎಲ್ಲಾ ಕೆಲಸ ಕಾರ್ಯಗಳಲ್ಲೂ ಏರುಪೇರು ಉಂಟಾಗಿರುತ್ತದೆ. ಸಾಮಾನುಗಳೆಲ್ಲ ಸ್ಥಾನಪಲ್ಲಟಗೊಂಡಿರುತ್ತವೆ.
ಗಂಡನಿಗೆ ತಕ್ಕ ಹೆಂಡತಿಯಾಗಿ ಮಗುವಿಗೆ ತಾಯಿಯಾಗಿ ಅತ್ತೆ ಮಾವಂದಿರ ಮೆಚ್ಚಿನ ಸೊಸೆಯಾಗಿ ಮೈದುನ ಮೈದುನಿಯರಿಗೆ ಅತ್ತಿಗೆಯಾಗಿ ಈ ರೀತಿ ಒಂದು ಕುಟುಂಬದಲ್ಲಿ ಹೆಣ್ಣು ಹಲವಾರು ಪಾತ್ರಗಳನ್ನು ನಿರ್ವಹಿಸುವ ರೀತಿ ಅದ್ಭುತ ! ಅದಕ್ಕೆ ಅಲ್ಲವೇ ಹೆಣ್ಣು ಮನೆಗೆ ಭೂಷಣ .. ಹೆಣ್ಣು ಸಂಸಾರದ ಕಣ್ಣು ಎಂದು ಹೇಳುವುದು… ಅದಕ್ಕಾಗಿ ಹೆಣ್ಣಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಇಂದು ಹೆಣ್ಣು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಿಂಚುತ್ತ ತಾಳ್ಮೆ ಮತ್ತು ದಕ್ಷತೆಯಿಂದ ತನ್ನ ಸ್ಥಾನ ಮಾನವನ್ನು ಭದ್ರ ಪಡಿಸಿಕೊಂಡು ತಾನು ಅಬಲೆಯಲ್ಲ ಎನ್ನುವುದನ್ನು ಸಾಬೀತುಪಡಿಸಿರುವುದು ಧನಾತ್ಮಕ ಅಂಶವಾಗಿದೆ.
ಆದಾಗ್ಯೂ ಅಲ್ಲಲ್ಲಿ ಹೆಣ್ಣು ಭ್ರೂಣದ ಹತ್ಯೆ, ಲೈಂಗಿಕ ದೌರ್ಜನ್ಯದಂತಹ ಹೇಯ ಪ್ರಕರಣಗಳು ವರದಿಯಾಗುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ಈ ನೆಲದ ನಂಬಿಕೆಯಂತೆ ಹೆಣ್ಣನ್ನು ಹಾಗೂ ಹೆಣ್ಣಿನ ಭಾವನೆಗಳನ್ನು, ಹಕ್ಕುಗಳನ್ನು ಗೌರವಿಸುವುದರ ಜೊತೆಗೆ ಹೆಣ್ಣು ಗಂಡಿಗೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಅಥವ ಗಂಡು ಹೆಣ್ಣು ಸರಿಸಮಾನರು ಎನ್ನುವುದು ಮಹತ್ವದ್ದಾಗಿದೆ.