“ವೀಣಾಂತರಂಗ”
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ
ಅದು 2ನೆಯ ವಿಶ್ವ ಯುದ್ಧದ ಸಮಯ. ಭಾರತದಲ್ಲಿ ಆಗ ಇದ್ದ ಬ್ರಿಟಿಷ್ ಮಿಲಿಟರಿಯ ಗೋರ್ಖಾಪಡೆಯ ತುಕಡಿಯೊಂದರ ಮುಖ್ಯಸ್ಥನಾಗಿದ್ದ ಆ ವ್ಯಕ್ತಿ ಬರ್ಮಾದ ಗಡಿಯಲ್ಲಿರುವ ಸೇತುವೆಯನ್ನು ಜಪಾನಿ ಸೈನಿಕರಿಂದ ರಕ್ಷಿಸಲು ಸತತ ನಾಲ್ಕು ದಿನಗಳ ಕಾಲ ತನ್ನ ಸೈನ್ಯದ ತುಕಡಿಯೊಂದಿಗೆ ನಿದ್ರಾಹಾರಗಳಿಲ್ಲದೆ ಕಾರ್ಯ ನಿರ್ವಹಿಸಿದನು. ಮರಳಿ ಬರುತ್ತಿರುವಾಗ ತನ್ನ ಅರ್ಧಕ್ಕಿಂತ ಹೆಚ್ಚು ಸೈನಿಕರನ್ನು ತಮ್ಮದೇ ಬ್ರಿಟಿಷ್ ಮಿಲಿಟರಿ ವಾಯುಪಡೆಯ ವಿಮಾನಗಳ ದಾಳಿಗೆ ಗೊತ್ತಿಲ್ಲದೇ ಆದ ಅಚಾತುರ್ಯಕ್ಕೆ ಸಿಲುಕಿ ಮರಣ ಹೊಂದಿದರೂ, ಉಳಿದ ಸೈನ್ಯವನ್ನು ಹುರಿದುಂಬಿಸಿ ಯುದ್ಧಕ್ಕೆ ಸಜ್ಜು ಮಾಡುವ ಹೊಣೆಗಾರಿಕೆಯನ್ನು ಆತನಿಗೆ ನೀಡಲಾಯಿತು. ತನ್ನ ಅತ್ಯದ್ಭುತ ವಾಕ್ಜರಿಯಿಂದ ಸೈನಿಕರನ್ನು ಹುರಿದುಂಬಿಸಿದ ಆತ ಮರುದಿನ ಮುಂಜಾನೆ ಯುದ್ಧಕ್ಕೆ ಸನ್ನದ್ಧರಾಗುತ್ತಿರುವ ಸಮಯದಲ್ಲಿ ಜಪಾನಿಯರು ಬುದ್ಧ ಪರ್ವತವನ್ನು ಏರುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ
ತನ್ನ ಸೇನೆಯವರಲ್ಲಿ ಉತ್ಸಾಹ ತುಂಬಿ ಮುನ್ನಡೆಯುತ್ತಿರುವಾಗ ಆತನ ಮೇಲೆ ಉಂಟಾದ ಹಠಾತ್ ದಾಳಿಯಲ್ಲಿ 9 ಗುಂಡುಗಳು ಆತನ ಶರೀರವನ್ನು ಹೊಕ್ಕವು. ವಿಪರೀತ ರಕ್ತಸ್ರಾವದಿಂದ ಬಳಲುತ್ತಿದ್ದರೂ ಕೂಡ ಆತ ತನ್ನ ಸೇನೆಯನ್ನು ಮುಂದೆ ಕಳುಹಿಸಿದ. ಆದರೆ ಆತನ ಬೆಂಗಾವಲುಗಾರ ದಲ್ವೀರ ಸಿಂಗ್ ಆತನನ್ನು ಹೊತ್ತು ಕ್ಯಾಂಪಿಗೆ ಮರಳಿ ಬಂದನು. ವಿಪರೀತ ರಕ್ತಸ್ರಾವಾಗಿದ್ದರೂ ವೈದ್ಯರ ಮಾತಿಗೆ ತಮಾಷೆಯ ಪ್ರತ್ಯುತ್ತರ ನೀಡಿದ ಆ ವ್ಯಕ್ತಿಯ ದೇಹವನ್ನು ಒಳಹೊಕ್ಕ ಗುಂಡುಗಳನ್ನು ತೆಗೆದು ಚಿಕಿತ್ಸೆ ನೀಡಲಾಯಿತು. ಅಸಾಮಾನ್ಯ ಶೌರ್ಯವನ್ನು ತೋರಿದ್ದಕ್ಕೆ ಆತನಿಗೆ ಮಿಲಿಟರಿ ಕ್ರಾಸ್ ರಿಬ್ಬನ್ ಅನ್ನು ಗೌರವ ಪೂರ್ವಕವಾಗಿ ನೀಡಲಾಯಿತು. ಸುಮಾರು ನಾಲ್ಕು ದಶಕಗಳ ಕಾಲ ಸೇನೆಯ ಕಮಾಂಡರ್ ಇನ್ ಚೀಫ್ ಹುದ್ದೆಯಲ್ಲಿದ್ದುಕೊಂಡು,ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತನ್ನ ಸೈನಿಕರನ್ನು ಹುರಿದುಂಬಿಸುತ್ತಾ, ಅವರಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುತ್ತಾ, ಮಿಲಿಟರಿ ಸಹೋದರರನ್ನು ಮಕ್ಕಳಂತೆ ಪೋಷಿಸುತ್ತಾ, ಮಿಲಿಟರಿ ಯೋಧರ ಘನತೆಯನ್ನು ಎತ್ತಿ ಹಿಡಿಯುತ್ತ ದೇಶದ ಮೂರು ಪಡೆಗಳಾದ ಭೂಸೇನೆ, ನೌಕಾ ಸೇನೆ ಮತ್ತು ವಾಯುಪಡೆಗಳ ಮುಖ್ಯಸ್ಥನಾಗಿ ಅಂತಿಮವಾಗಿ ಫೀಲ್ಡ್ ಮಾರ್ಷಲ್ ಆಗಿ ಕಾರ್ಯನಿರ್ವಹಿಸಿದ ಆ ವ್ಯಕ್ತಿಯೇ ಸ್ಯಾಮ್ ಹರ್ಮೋಸಜಿ ಫ್ರಾಮಜಿ ಜಮಶೇಡ್ ಜಿ ಮಾಣೆಕ್ ಶಾ.
ತಂದೆ ಮಿಲಿಟರಿ ವೈದ್ಯರು, ತಾಯಿ ಗೃಹಿಣಿ. ಅಮೃತಸರದಲ್ಲಿ 1914ರಲ್ಲಿ ಜನಿಸಿದ ಸ್ಯಾಮ್ ತಮ್ಮ 18ನೇ ವಯಸ್ಸಿನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯ ಮೊದಲ ಬ್ಯಾಚ್ ನ 40 ಜನ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ತೇರ್ಗಡೆ ಹೊಂದಿ ತರಬೇತಿ ಪಡೆದರು. ಬ್ರಿಟಿಷರ ಅಧೀನದಲ್ಲಿದ್ದ ಇಂಡಿಯನ್ ಮಿಲಿಟರಿ ಅಕಾಡೆಮಿಯ ಶಿಸ್ತಿನ ವಾತಾವರಣ ಓರ್ವ ಅತ್ಯದ್ಭುತ ಸೇನಾ ನಾಯಕನನ್ನು ಸೃಷ್ಟಿಸಿತು ಎಂದರೆ ತಪ್ಪಿಲ್ಲ. ತಮ್ಮ ಅದ್ಭುತ ದೇಹಸೌಷ್ಟವ, ಆಕರ್ಷಕ ಮಾತು ಮತ್ತು ಜೋವಿಯಲ್ ನಡವಳಿಕೆಯಿಂದ ಎಲ್ಲರನ್ನು ಆಕರ್ಷಿಸುತ್ತಿದ್ದ ಸ್ಯಾಮ್ ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. 1937 ರಲ್ಲಿ ಪರಿಚಯವಾದ ಸಿಲ್ಲೋ ಎಂಬ ಮಹಿಳೆಯನ್ನು 1939ರಲ್ಲಿ ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳನ್ನು ಪಡೆದಿದ್ದರು.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಸ್ಯಾಮ್ ಭಾರತೀಯ ಸೇನೆಯನ್ನು ಆಯ್ದುಕೊಂಡರೆ ಅವರ ಅತ್ಯಾಪ್ತ ಸ್ನೇಹಿತ ಯಾಹ್ಯಾಖಾನ್ ಪಾಕಿಸ್ತಾನಿ ಸೇನೆಯನ್ನು ಸೇರಿದನು.ಸ್ಯಾಮ್ ಬಹದ್ದೂರ್ ಸ್ವತಂತ್ರ ಭಾರತದ ಒಟ್ಟು ಐದು ಯುದ್ಧಗಳಲ್ಲಿ ಎರಡನೇ ವಿಶ್ವ ಯುದ್ಧದಲ್ಲಿ ಬ್ರಿಟಿಷರ ಪರವಾಗಿ, 1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಸಮಸ್ಯೆಯ ಸಮಯದಲ್ಲಿ, 1962ರಲ್ಲಿ ಇಂಡೋ ಸೈನೋ ಯುದ್ಧದಲ್ಲಿ 1965ರಲ್ಲಿ ಚೀನಿಯರ ಜೊತೆಗಿನ ಯುದ್ಧದಲ್ಲಿ ಮತ್ತು 1971ರಲ್ಲಿ ಬಾಂಗ್ಲಾ ವಿಮೋಚನೆಯ ಸಲುವಾಗಿನ ಪಾಕಿಸ್ತಾನದೊಂದಿಗಿನ ಯುದ್ಧಗಳಲ್ಲಿ ಭಾಗವಹಿಸಿದ ವ್ಯಕ್ತಿಯಾಗಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಭಾರತೀಯ ಕಮಾಂಡರ್ ಇನ್ ಚೀಫ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ಭಾರತೀಯ ಮಿಲಿಟರಿ ಪಡೆಯ ಸರ್ವೋಚ್ಛ ನಾಯಕರ ಐದು ನಕ್ಷತ್ರಗಳನ್ನು ತಮ್ಮ ಭುಜದ ಮೇಲೆ ಹೊತ್ತವರು ಸ್ಯಾಮ್.
ತಮ್ಮ ಕಾರ್ಯದಕ್ಷತೆ, ಪ್ರಾಮಾಣಿಕತೆ ಮತ್ತು ನಿಷ್ಟೆಗೆ ಹೆಸರಾಗಿದ್ದ ಸ್ಯಾಮ್ ಅವರು ಹಲವಾರು ವರ್ಷಗಳ ಕಾಲ ತಮಿಳುನಾಡಿನ ವೆಲ್ಲಿಂಗ್ಟನ್ ನಲ್ಲಿರುವ ಸೇನಾ ತರಬೇತು ಶಾಲೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಆ ಸಮಯದಲ್ಲಿ ಅವರ ಸಹೋದ್ಯೋಗಿ ಕೌಲ್ ರ ಕುತಂತ್ರದ ಪರಿಣಾಮವಾಗಿ ಸ್ಯಾಮ್ ಅವರು ಭಾರತೀಯ ರಕ್ಷಣಾ ಇಲಾಖೆಯು ನಡೆಸುವ ಕೋರ್ಟ್ ವಿಚಾರಣೆಯನ್ನು ಎದುರಿಸಬೇಕಾಯಿತು. ಆದರೆ ತುಸು ಜೋವಿಯಲ್ ಆದ,ಆದರೆ ತಮ್ಮ ಕೆಲಸದ ವಿಷಯದಲ್ಲಿ ಅತ್ಯಂತ ನಿಷ್ಠಾವಂತರೂ ಪ್ರಾಮಾಣಿಕರೂ ಆಗಿದ್ದ ಸ್ಯಾಮ್ ನಿರಾತಂಕಿತರಾಗಿದ್ದರು. ಅವರ ಮೇಲೆ ಹೊರಿಸಿದ ಎಲ್ಲಾ ಅಪವಾದಗಳು ನಿರಾಧಾರವೆಂದು ಸಾಬೀತಾಯಿತು.
ಸೇನೆಯ ಜವಾನರನ್ನು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಬಳಸಿಕೊಳ್ಳುವುದನ್ನು ಅವರು ವಿರೋಧಿಸುತ್ತಿದ್ದರು. ಸೇನೆಯ ಎಲ್ಲಾ ಸೈನಿಕರು ತಮ್ಮ ತಮ್ಮ ಕರ್ತವ್ಯಗಳಲ್ಲಿ ಬದ್ಧರಾಗಿಯೂ ಉನ್ನತ ದೇಶ ಪ್ರೇಮಿಗಳಾಗಿಯೂ ನಿಷ್ಠೆಯಿಂದ ಕಾರ್ಯನಿರ್ವಹಿಸಲು ಎಲ್ಲ ರೀತಿಯ ನೆರವು ನೀಡುತ್ತಿದ್ದ ಅವರು ಸೈನಿಕರ ಮೇಲೆ ಆಗುವ ತೇಜೋವಧೆಗಳನ್ನು ಖಂಡಿಸುತ್ತಿದ್ದರು. ಇದು ಅಧಿಕಾರ ವರ್ಗಕ್ಕೆ ನುಂಗಲಾರದ ತುತ್ತಾಗಿತ್ತು.
1947ರ ಭಾರತ ಸ್ವತಂತ್ರದ ನಂತರ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸ್ಯಾಮ್. ತಮ್ಮನ್ನು ಕಾಪಾಡಲು ತಡವಾಗಿ ಆಗಮಿಸಿದರು ಎಂದು ಭಾರತ ಸರ್ಕಾರದ ಪ್ರತಿನಿಧಿಯಾಗಿ ವಿ.ಕೆ. ಮೆನನ್ ರವರ ಮೇಲೆ ಅಸಹನೆ ವ್ಯಕ್ತಪಡಿಸಿದ ಕಾಶ್ಮೀರದ ಮಹಾರಾಜನಿಗೆ ತಕ್ಕ ಪ್ರತ್ಯುತ್ತರ ನೀಡಿದರೂ ನಂತರ ಅವರನ್ನು ಸುರಕ್ಷಿತವಾಗಿ ವಿಮಾನದಲ್ಲಿ ದೆಹಲಿಗೆ ಕರೆ ತಂದವರು ಸ್ಯಾಮ್.
ಪಂಜಾಬಿನ ಗೂರ್ಖ ರೆಜಿಮೆಂಟಿನ ಸಿಪಾಯಿಗಳಿಂದ ಬಹದ್ದೂರ್ ಎಂಬ ಬಿರುದನ್ನು ಪಡೆದವರು ಸ್ಯಾಮ್.
1963 ರಲ್ಲಿ ನೆಹರು ಅವರು ಚೀನಾ ಯುದ್ಧದಲ್ಲಿ ಸೋಲುವ ಸಮಯದಲ್ಲಿ ಹತಾಶರಾಗಿ ಮಾತನಾಡಿದ್ದನ್ನು ಖಂಡಿಸಿದವರು ಸ್ಯಾಮ್. ದೇಶದ ಪ್ರಧಾನಿಯೇ ಹತಾಶನಾದರೆ ದೇಶದ ಪ್ರಜೆಗಳ ಗತಿ ಏನು? ಎಂಬುದು ಅವರ ವಾದವಾಗಿತ್ತು. ಮುಂದೆ ನೆಹರು ಅವರೊಂದಿಗೆ ರಕ್ಷಣಾ ಕಾರ್ಯಾಚರಣೆಯ ಕುರಿತಾದ ಮಾತುಕತೆಯ ಸಮಯದಲ್ಲಿ ಪರಿಚಯವಾದ ಇಂದಿರಾ ಗಾಂಧಿಯವರ ವಿಶ್ವಾಸಕ್ಕೆ ಪಾತ್ರರಾದರು ಸ್ಯಾಮ್ ತಪ್ಪು ಕಂಡು ಬಂದಾಗ ನಿಷ್ಠುರವಾಗಿ ಹೇಳಲು ಕೂಡ ಸಿದ್ದ ಎಂಬುದನ್ನು ಸಾಬೀತುಪಡಿಸಿದರು.
1964 ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಭಾರತ ದೇಶದ ರಕ್ಷಣಾ ವ್ಯವಸ್ಥೆಯ ಮೂರೂ ಒಕ್ಕೂಟಗಳ ಕಮಾಂಡರ್ ಇನ್ ಚೀಫ್ ಎಂದು ನಿಯುಕ್ತರಾದರು. ಕೆಲಸದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಸ್ಯಾಮ್ ಕಾರ್ಯನಿಮಿತ್ತ ಪ್ರಧಾನಿ ಕಾರ್ಯಾಲಯವು ಏರ್ಪಡಿಸುವ ಔತಣಕೂಟಗಳಲ್ಲಿ ಸೈನಿಕರ ಪರವಾಗಿ ತಮ್ಮ ಅಹವಾಲುಗಳನ್ನು ಪ್ರಧಾನಿಯವರಿಗೆ ಸಲ್ಲಿಸಿ ಸೈನಿಕರ ನಿವೃತ್ತಿ ವೇತನ ಮತ್ತಿತರ ಹಲವಾರು ಸಮಸ್ಯೆಗಳನ್ನು ಪರಿಹರಿಸಿದರು. ಯುದ್ಧವನ್ನು ಕೇವಲ ಮೈದಾನದಲ್ಲಿ ಮಾತ್ರ ಮಾಡುವುದಲ್ಲ, ಔತಣ ಕೂಟಗಳಲ್ಲಿಯೂ ಇದು ಸಾಧ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದರು.

ಮುಂದೆ 1971ರಲ್ಲಿ ಬಾಂಗ್ಲಾ ವಿಮೋಚನೆಯ ಕುರಿತು ಪ್ರಧಾನಿಯವರು ಉಪ ಪ್ರಧಾನಿ, ರಕ್ಷಣಾ ಸಚಿವ ಮತ್ತು ಮಿಲಿಟರಿ ಮುಖ್ಯಸ್ಥರ ಜೊತೆಗಿನ ಮಾತುಕತೆಯಲ್ಲಿ ಪೂರ್ವ ಪಾಕಿಸ್ತಾನದ ಪರವಾಗಿ ಪಶ್ಚಿಮ ಪಾಕಿಸ್ತಾನದೊಂದಿಗೆ ಯುದ್ಧ ಮಾಡಲು ಸಭೆ ಕರೆದರು. ಆ ಸಭೆಯಲ್ಲಿ ಅತ್ಯಂತ ಕರಾರುವಾಕ್ಕಾಗಿ ಅಕಸ್ಮಾತ್ ಈ ಸಮಯದಲ್ಲಿ ನಾವು ಯುದ್ಧವನ್ನು ಆರಂಭಿಸಿದರೆ ಈ ಯುದ್ಧದಲ್ಲಿ ನಾವು ಖಂಡಿತವಾಗಿಯೂ ಸೋಲುತ್ತೇವೆ, ಸೇನಾ ನಾಯಕನಾಗಿ ನಾನು ಇದಕ್ಕೆ ತಯಾರಿಲ್ಲ ಅಷ್ಟಾಗಿಯೂ ನೀವು ಯುದ್ಧ ನಡೆಯಲೇಬೇಕು ಎಂದು ಆಗ್ರಹಿಸಿದರೆ ನಾನು ಸೇನಾ ನಾಯಕನ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಅವರ ಮಾತನ್ನು ಗಂಭೀರವಾಗಿ ಪರಿಣಮಿಸಿದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ನೈಜ ಕಾರಣವನ್ನು ನೀಡಲು ಹೇಳಿದಾಗ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿಪರೀತ ಬಿಸಿಲಿನ ಕಾರಣ ಹಿಮ ಕರಗಿ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ನದಿಗಳು ಅಡ್ಡಾದಿಡ್ಡಿ ಉಕ್ಕಿ ಹರಿಯುತ್ತವೆ. ನಂತರ ಬರುವ ಮಳೆಗಾಲದಲ್ಲಿ ಕೂಡ ಈ ತೊಂದರೆ ಮುಂದುವರೆಯುತ್ತದೆ. ಅದೂ ಅಲ್ಲದೆ ನಮ್ಮ ಸೈನಿಕರನ್ನು ಏಕಾಏಕಿ ಯುದ್ಧಕ್ಕೆಳಸಿದರೆ 1965 ರಂತೆ ಮತ್ತೆ ಸೋಲಾಗುವುದು ಖಂಡಿತ. ಅದರ ಬದಲಾಗಿ ಡಿಸೆಂಬರ್ ನಲ್ಲಿ ಪೂರ್ವ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಅಲ್ಲಿ ಇರುವ ಪಾಕಿಸ್ತಾನಿ ಸೈನಿಕರನ್ನು ಹೊರಗಟ್ಟಿ ಅಲ್ಲಿಯ ಬಾಂಗ್ಲಾ ಜನರನ್ನು ರಕ್ಷಿಸಬಹುದು ಎಂದು ಸಲಹೆ ನೀಡಿದರು. ಸಮಯೋಚಿತವಾದ ಈ ಸಲಹೆಯನ್ನು ಒಪ್ಪಿದ ಪ್ರಧಾನಿ ಇಂದಿರಾ ವಾರ್ ರೂಂ ಸಿದ್ದಪಡಿಸಿ ಯುದ್ಧಕ್ಕೆ ತಯಾರಿ ನಡೆಸಲು ಮೌಖಿಕ ಆದೇಶ ನೀಡಿದರು. ಅಂತೆಯೇ ಸ್ಯಾಮ್ ತಮ್ಮ ಮೂರು ದಳಗಳ ಮುಖ್ಯಸ್ಥರೊಂದಿಗೆ ಚರ್ಚಿಸುತ್ತಾ ಸುಮಾರು ಆರು ತಿಂಗಳ ಕಾಲ ಸೇನೆಯನ್ನು
ಸನ್ನದ್ಧಗೊಳಿಸಿದರು. ಸ್ಯಾಮ್ ಹೇಳಿದಂತೆ ಡಿಸೆಂಬರ್ 4 ರಂದು ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಘೋಷಣೆ ಮಾಡಿತು. ಇದಕ್ಕಾಗಿಯೇ ಕಾದಿದ್ದ ಭಾರತೀಯ ಸೈನ್ಯ ಕೆಲವೇ ದಿನಗಳಲ್ಲಿ ಪೂರ್ವ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಅಲ್ಲಿನ ಪಶ್ಚಿಮ ಪಾಕಿಸ್ತಾನಿ ಸೈನಿಕರನ್ನು ಸೋಲಿಸಿ ಸ್ವತಂತ್ರ ಬಾಂಗ್ಲಾ ದೇಶದ ಉದಯಕ್ಕೆ ಕಾರಣರಾದರು.
ಈ ಯುದ್ಧದ ನಂತರ ನಡೆದ ಸಂದರ್ಶನದಲ್ಲಿ ಸೇನಾ ಮುಖ್ಯಸ್ಥರಾದ ಸ್ಯಾಮ್ ಬಹದ್ದೂರ್ ತಮಾಶೆಯಾಗಿ ಮಾತನಾಡಿದ ಮಾತುಗಳು ಆಗ ಹೆಚ್ಚು ಪ್ರಚಲಿತವಾಗಿದ್ದವು.
ತಮ್ಮ ಅದ್ಭುತ ಶೌರ್ಯ ಪ್ರದರ್ಶನಕ್ಕಾಗಿ 1968ರಲ್ಲಿ ಪದ್ಮಭೂಷಣ ಪ್ರಶಸ್ತಿ, 1972 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಸ್ಯಾಮ್ ಮುಂದೆ ತಾವು ನಿವೃತ್ತಿಯಾಗುವ ಕೇವಲ 15 ದಿನಗಳ ಮುಂಚೆ 1973 ಜನವರಿ 15ರಂದು ಫೀಲ್ಡ್ ಮಾರ್ಷಲ್ ಆಗಿ ಅಧಿಕಾರ ಸ್ವೀಕರಿಸಿದರು.ಸ್ಯಾಮ್ ಅದೇ ವರ್ಷದ ಜನವರಿ 26ರಂದು ನಡೆದ ಗಣರಾಜ್ಯೋತ್ಸವದಲ್ಲಿ ಫೀಲ್ಡ್ ಮಾರ್ಷಲ್ ಆಗಿ ಭಾಗವಹಿಸಿ ಅದೇ ತಿಂಗಳ 31ರಂದು ಸೇನೆಯಿಂದ ನಿವೃತ್ತರಾದರು ಸ್ಯಾಮ್ ಮಾಣೆಕ್ ಶಾ. ಭಾರತೀಯ ಸೇನೆಯ ಐದು ನಕ್ಷತ್ರಗಳನ್ನು ಹೊಂದಿದ ಅಧಿಕಾರಿಯಾಗಿದ್ದರಿಂದ ಸೇನೆಯಿಂದ ನಿವೃತ್ತಿ ಹೊಂದಿದರೂ ತಮ್ಮ ಜೀವಿತದ ಕೊನೆಯವರೆಗೂ ಆ ಪದವಿಯನ್ನು ಹೊಂದಿರುವ ವ್ಯಕ್ತಿಯಾಗಿ ದೇಶದ ಸರ್ವೋಚ್ಛ ನಾಯಕ ಎನಿಸಿಕೊಂಡರು.
ಸ್ಯಾಮ್ ಅವರ ಸೇನಾ ಬದುಕಿನ ಹಲವಾರು ರೋಚಕ ಕಥಾನಕಗಳನ್ನು ನಾವು ಕೇಳಿದ್ದೇವೆ. ಭಾರತೀಯ ಸೇನೆಯೆಡೆಗಿನ ಅವರ ಶ್ರದ್ಧೆ,ನಿಷ್ಠೆ,ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಜೊತೆ ಜೊತೆಗೆ ಅವರು ತಮ್ಮ ಸೈನಿಕರನ್ನು ಹುರಿದುಂಬಿಸಿ ಸಜ್ಜು ಮಾಡುತ್ತಿದ್ದ ರೀತಿ ಇಂದಿಗೂ ಮನೆ ಮಾತಾಗಿವೆ.

2008ರಲ್ಲಿ ವಯೋ ಸಹಜವಾಗಿ ನಿಮೊನಿಯಾ ಕಾಯಿಲೆಗೆ ತುತ್ತಾದ ಜನರಲ್ ಸ್ಯಾಮ್ ಮರಣ ಹೊಂದಿದರು. ಒಂದು ಅದ್ಭುತ ವ್ಯಕ್ತಿತ್ವದ ಸ್ಯಾಮ್ ತನ್ನ ಜೀವಿತದ ಕೊನೆಯಲ್ಲಿ ಅವರು ಯಾವಾಗಲೂ ಹೇಳುತ್ತಿದ್ದ ಮಾತೇ ಆಗಿತ್ತು ಅದು … ಐ ಯಾಮ್ ಓಕೇ.
ಅಂತಹ ಅದ್ಭುತ ಸೇನಾನಿಗೆ ನಮ್ಮ ಕೋಟಿ ಕೋಟಿ ನಮನಗಳು.. ಜೈ ಹಿಂದ್
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ

