ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಒಂದು ಊರಿನಲ್ಲಿ ಒಬ್ಬ ಧನಿಕನಿದ್ದ. ಒಮ್ಮೆ ಆತ ತನ್ನ ಕುಟುಂಬದೊಂದಿಗೆ ಮಾರುಕಟ್ಟೆಗೆ ತೆರಳುತ್ತಾನೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುತ್ತಾ ಕೊನೆಗೆ ಬಾಳೆಹಣ್ಣಿನ ಅಂಗಡಿಯ ಮುಂದೆ ಬಂದು ನಿಲ್ಲುತ್ತಾನೆ. ಅಂಗಡಿಯ ಮುಂದೆ ನೇತುಹಾಕಿದ್ದ ಬಾಳೆಹಣ್ಣನ್ನು ನೋಡಿ ಇದರ ದರವೆಷ್ಟು ಎಂದು ವ್ಯಾಪಾರಿಯಲ್ಲಿ ಕೇಳುತ್ತಾನೆ. ಆಗ ವ್ಯಾಪಾರಿಯು ಕಿಲೋಗೆ ಅರುವತ್ತು ರೂಪಾಯಿ ಎನ್ನುತ್ತಾನೆ. ಬಾಳೆಹಣ್ಣನ್ನು ತೆಗೆದುಕೊಳ್ಳಲೇ ಎಂದು ಧನಿಕನು ತನ್ನ ಹೆಂಡತಿಯಲ್ಲಿ ಕೇಳಿದಾಗ, ಹೆಂಡತಿಯು ದರವು ಅತ್ಯಂತ ದುಬಾರಿಯಾಯಿತು ಬೇರೆಡೆ ನೋಡೋಣ ಎನ್ನುತ್ತಾಳೆ. ಇವರು ಇನ್ನೊಂದು ಅಂಗಡಿಗೆ ತೆರಳಿ ಅಲ್ಲಿ ಬಾಳೆಹಣ್ಣಿನ ದರವನ್ನು ವಿಚಾರಿಸಿದಾಗ ಕಿಲೋಗೆ ನಲುವತ್ತೊಂದು ರೂಪಾಯಿ ಎಂದು ಅಂಗಡಿಯಾತ ಹೇಳುತ್ತಾನೆ. ಧನಿಕನ ಆಶ್ಚರ್ಯಗೊಂಡು ಒಂದೇ ಗುಣಮಟ್ಟದ ಬಾಳೆಹಣ್ಣು ಹತ್ತಿರ ಹತ್ತಿರದ ಎರಡು ಅಂಗಡಿಗಳಲ್ಲಿದ್ದರೂ ದರದಲ್ಲೇಕೆ ಎಷ್ಟೊಂದು ವ್ಯತ್ಯಾಸವೆಂದು ಚಿಂತಿಸುತ್ತಾನೆ. ಧನಿಕ ಮರಳಿ ಮೊದಲನೇ ಬಾಳೆಹಣ್ಣಿನ ಅಂಗಡಿಗೆ ಬಂದು ಅಲ್ಲಿನ ವ್ಯಾಪಾರಿಯಲ್ಲಿ ನಿನ್ನ ದರವು ಹೆಚ್ಚಾಗಿದ್ದು ಪಕ್ಕದ ಅಂಗಡಿಯಾತ ಕಡಿಮೆ ದರಕ್ಕೆ ಬಾಳೆಹಣ್ಣನ್ನು ನೀಡುತ್ತಿದ್ದಾನೆ ನಿನ್ನ ಬಾಳೆಹಣ್ಣನ್ನು ಯಾರು ಖರೀದಿಸುತ್ತಾರೆ ಎಂದು ಪ್ರಶ್ನೆಯನ್ನು ಅಂಗಡಿಯಾತನಿಗೆ ಹಾಕುತ್ತಾನೆ.
ಆಗ ಮೊದಲನೆ ಅಂಗಡಿಯಾತ ನಗುತ್ತಾ, ನಾನು ಇಡೀ ಬಾಳೆಹಣ್ಣಿನ ಗೊನೆಯನ್ನೇ ಇಟ್ಟುಕೊಂಡು ಬಾಳೆಹಣ್ಣನ್ನು ವ್ಯಾಪಾರ ಮಾಡುತ್ತೇನೆ. ಗ್ರಾಹಕರು ಬಾಳೆಹಣ್ಣನ್ನು ಕೇಳಿದಾಗ ಗೊನೆಯಿಂದ ಬಾಳೆಹಣ್ಣನ್ನು ಕಿತ್ತು ನೀಡುತ್ತೇನೆ. ಆದರೆ ಪಕ್ಕದ ಅಂಗಡಿಯಾತನ ಬಾಳೆಹಣ್ಣು ಗೊನೆಯಿಂದ ಸಂಪೂರ್ಣವಾಗಿ ಉದುರಿದ್ದು, ಅದನ್ನು ಆತ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾನೆ ಎಂದು ಉತ್ತರಿಸುತ್ತಾನೆ. ಬಾಳೆಹಣ್ಣಿನ ವ್ಯಾಪಾರಿಯ ಉತ್ತರವು ನಮ್ಮೆಲ್ಲರಿಗೂ ಹೊಸತಾದ ಒಂದು ಸಂದೇಶವನ್ನು ನೀಡುತ್ತದೆ. ಅದೇನೆಂದರೆ ಸಮಾಜದಲ್ಲಿ ಹತ್ತು ಮಂದಿಯ ಜೊತೆಗೆ ಕೂಡಿ ಬದುಕಿದಾಗ ಮಾತ್ರ ಒಬ್ಬ ವ್ಯಕ್ತಿಗೆ ಮೌಲ್ಯ ಜಾಸ್ತಿ. ಅದು ಬಿಟ್ಟು ಕೇವಲ ನಾನು, ನನ್ನ ಹೆಂಡತಿ, ನನ್ನ ಕುಟುಂಬ ಎಂದಷ್ಟೇ ಸಮಾಜದಿಂದ ವಿಮುಖರಾಗಿ ಬದುಕಿದರೆ ಉದುರಿ ಹೋದ ಬಾಳೆಹಣ್ಣಿನಂತೆ ನಮ್ಮ ಬೆಲೆ ಕೇವಲ ನಲುವತ್ತೊಂದು ರೂಪಾಯಿ ಆಗಿರುತ್ತದೆ. ಸಮಾಜದಲ್ಲಿ ಯಾರು ಹತ್ತು ಜನರ ಮಧ್ಯೆ, ವಿವಿಧ ರೀತಿಯ ಸಂಘಟನೆಗಳ ಜೊತೆಯಲ್ಲಿ ಸೇರಿ ಹೊಂದಿಕೊಂಡು ಬದುಕುತ್ತಾರೋ ಅವರಿಗೆ ತೂಕ, ಬೆಲೆ, ಹಾಗೂ ಬದುಕಿನ ಸಾರ್ಥಕ್ಯ ಜಾಸ್ತಿ ಎಂದು.

ನಾನು, ನನ್ನ ದುಡಿಮೆ, ನನ್ನ ದುಡ್ಡು, ನನ್ನ ಅಂತಸ್ತು ಎನ್ನುವುದಿದ್ದಲ್ಲಿ ಅದು ಕೇವಲ ಆತನಿಗಷ್ಟೇ ಸೀಮಿತ, ಆತನ ಮನೆಯೊಳಗೆ ಹಾಗೂ ಆತನ ಕಂಪೌಂಡ್ ವ್ಯಾಪ್ತಿಗಷ್ಟೇ ಸೀಮಿತವಾಗಿರುತ್ತದೆ. ಅದಕ್ಕಾಗಿ ವ್ಯಕ್ತಿಯೊಬ್ಬನು ಹೆಚ್ಚು ಪ್ರಚಲಿತಕ್ಕೆ ಬರಬೇಕೆಂದಾದರೆ ಊರಿನ ದೇವಸ್ಥಾನದ ಕಾರ್ಯಕ್ರಮಗಳಲ್ಲಿ, ಊರಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅಥವಾ ವ್ಯಾವಹಾರಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ವ್ಯಕ್ತಿಯು ಎಲ್ಲರ ಸಂಪರ್ಕಕ್ಕೆ ಬಂದು ಆತ ಏನೆಂದು ಎಲ್ಲರಿಗೂ ತಿಳಿದು ಆತನ ಮೌಲ್ಯವೂ ಹೆಚ್ಚುತ್ತಾ ಹೋಗುತ್ತದೆ. ವ್ಯಕ್ತಿಯು ಪ್ರಪಂಚದ ಅಥವಾ ಸಮಾಜದ ಸಂಪರ್ಕಕ್ಕೆ ಬಂದಾಗ ಆತನ ಕುರಿತು ಎಲ್ಲರಿಗೂ ತಿಳಿಯುತ್ತಾ ಹೋಗುತ್ತದೆ ವ್ಯಕ್ತಿಯೊಬ್ಬ ಮನೆಯೊಳಗಷ್ಟೇ ಇದ್ದಾಗ ಆತ ತಂದೆ ತಾಯಿಗೆ ಕೇವಲ ಮಗನಾಗಿ ಅಷ್ಟೇ ಇರುತ್ತಾನೆ. ಊರಿನ ಬಸ್ ನಿಲ್ದಾಣದಲ್ಲಿ ನಿಂತಾಗ ಬಸ್‌ಗೆ ಕಾಯುತ್ತಿರುವ ಹತ್ತು ಮಂದಿಯಲ್ಲಿ ಈತನೂ ಒಬ್ಬರಾಗಿರುತ್ತಾನೆ. ಅದೇ ಪಟ್ಟಣದ ಬಸ್ ನಿಲ್ದಾಣದ ನೂರು ಮಂದಿಯಲ್ಲಿ ಈತನೂ ಒಬ್ಬ, ಜಿಲ್ಲೆಯ ಬಸ್ ನಿಲ್ದಾಣದ ಸಾವಿರ ಮಂದಿಯಲ್ಲಿ ಈತನೂ ಒಬ್ಬನಾಗಿರುತ್ತಾನೆ. ವ್ಯಕ್ತಿತ್ವದಲ್ಲಿ ಎತ್ತರಕ್ಕೆ ಏರುತ್ತಾ ಹೋದಂತೆ ನಾವೇನೆಂದು ಎಲ್ಲರಿಗೂ ತಿಳಿಯುತ್ತದೆ. ಜನರೊಂದಿಗೆ, ಸಮಾಜದೊಂದಿಗೆ ಬಾಳಿ ಬದುಕಿದಾಗ ನಮ್ಮಲ್ಲಿರುವ ನ್ಯೂನತೆಗಳು, ದೌರ್ಬಲ್ಯಗಳು ಅರಿವಾಗಿ ಅವುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಯಾರು ಕೇವಲ ಮನೆಗಷ್ಟೇ ಸೀಮಿತವಾಗಿರುತ್ತಾರೋ ಅವರು ಅವರವರ ಮಕ್ಕಳಿಗೆ ಮತ್ತು ಹೆಂಡತಿಗೆ ಅಷ್ಟೇ ಮೌಲ್ಯಯುತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಸಮಾಜದ ಮಧ್ಯೆ ಬೆರೆತಾಗ ಯಾವಾಗ ಮೌಲ್ಯವನ್ನು ಗಳಿಸಿಕೊಳ್ಳುತ್ತೇವೋ ಅದುವೇ ಜೀವನದ ನಿಜವಾದ ಸಾರ್ಥಕ್ಯವಾಗುತ್ತದೆ. ಸಮಾಜದಲ್ಲಿ ಪಾರದರ್ಶಕವಾಗಿ ಬದುಕುವವರಿಗೆ, ಪ್ರಾಮಾಣಿಕತೆಯಿಂದ ಜೀವಿಸುವವರಿಗೆ, ಪರಿಶುದ್ಧವಾದ ಮನಸ್ಸು ಉಳ್ಳವರಿಗೆ, ನಿಸ್ವಾರ್ಥವಾಗಿ ತ್ಯಾಗ ಮತ್ತು ಸಹನೆಯಿಂದ ಬದುಕಲು ಕಲಿತವರಿಗೆ, ಬೇರೆಯವರಿಗೂ ಮಾನ್ಯತೆಯನ್ನು ನೀಡುತ್ತಾ ಬದುಕುವವರಿಗೆ ಸಮಾಜವು ಮಾನ್ಯತೆಯನ್ನು ನೀಡುತ್ತದೆ. ಇದಕ್ಕಾಗಿ ನಾವುಗಳು ಕೇವಲ ಮನೆಗಷ್ಟೇ ಸೀಮಿತವಾಗಿರದೆ ಸಮಾಜದಲ್ಲಿ ಬೆರೆತಾಗ ಮಾತ್ರ ವ್ಯಕ್ತಿಯ ಮೌಲ್ಯ ಮತ್ತು ಮಾನ್ಯತೆಯ ಹೆಚ್ಚಾಗುತ್ತಾ ಹೋಗುತ್ತದೆ.
ಲೋಟದಲ್ಲಿರುವ ನೀರಿಗೆ ಒಂದು ಹಿಡಿ ಸಕ್ಕರೆಯನ್ನು ಹಾಕಿದಾಗ ಹೇಗೆ ಅದು ತನ್ನ ಭೌತಿಕ ಅಸ್ಥಿತ್ವದ ಛಾಯೆಯೂ ಕಾಣಿಸದಂತೆ ತಿಳಿ ನೀರಿನಲ್ಲಿ ಕರಗಿ ನೀರನ್ನೆಲ್ಲ ಸಿಹಿಯಾಗಿ ಮಾಡುತ್ತದೆಯೋ ಅದೇ ರೀತಿಯಲ್ಲಿ ನಾವುಗಳೂ ಗುಣದಲ್ಲಿ ಸಕ್ಕರೆಯಂತಾಗಿ ಸಮಾಜವೆಂಬ ನೀರಿನಲ್ಲಿ ಕರಗಿ ಸಿಹಿಯಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಬಾಳೆಗೊನೆಯಲ್ಲಿ ಜೊತೆಯಾಗಿ ಇದ್ದ ಬಾಳೆಹಣ್ಣಿಗೆ ಹೇಗೆ ಹೆಚ್ಚಿನ ಮೌಲ್ಯವಿದೆಯೋ, ಬಿಡಿ ಬಿಡಿಯಾಗಿರುವ ಬಾಳೆಹಣ್ಣಿಗೆ ಹೇಗೆ ಮೌಲ್ಯ ಕಡಿಮೆಯೋ ಅದೇ ರೀತಿ ನಮ್ಮ ಜೀವನವೂ ಆಗುತ್ತದೆ. ಅದ್ದರಿಂದ ಬದುಕಲ್ಲಿ ಎಷ್ಟೇ ಹಣ, ಜ್ಞಾನ, ಕೌಶಲ ಇದ್ದರೂ ಸಮಾಜದೊಂದಿಗೆ, ಜನರೊಂದಿಗೆ ಬೆರೆತು ಬದುಕದಿದ್ದಲ್ಲಿ ಅದೆಲ್ಲವೂ ಕೇವಲ ಆತನಿಗಷ್ಟೇ ಸೀಮೀತ ಆಗಿ ಉಳಿದುಬಿಡುತ್ತದೆ. ಬದುಕಲ್ಲಿ ಎಷ್ಟು ಹಣ, ಆಸ್ತಿ ಮತ್ತು ಅಂತಸ್ತು ಗಳಿಸಿದ್ದೇವೆ ಎನ್ನುವುದಕ್ಕಿಂತ, ನಮ್ಮ ಕೊನೆಯ ದಿನದಲ್ಲಿ ನಮ್ಮೊಂದಿಗೆ ಎಷ್ಟು ಜನರು ನಮ್ಮೊಂದಿಗಿರುತ್ತಾರೆ ಎನ್ನುವುದಷ್ಟೇ ಗಣನೆಗೆ ಬರುತ್ತದೆ. ಹಾಗಾಗಿ ಸಮಾಜದಲ್ಲಿ ಕೂಡಿ ಬಾಳೋಣ.
ಲೇಖನ:
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

