ರೂ.25 ಕೋಟಿ ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ | ಡಾ.ಅಂಬೇಡ್ಕರ್ ಸೇರಿ ಹಲವು ವೃತ್ತಗಳ ಉದ್ಘಾಟನೆ
ವಿಜಯಪುರ: ನಗರದಲ್ಲಿ ಬುಧವಾರ ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು, ರೂ.25 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ನೂತನವಾಗಿ ನಿರ್ಮಿಸಲಾದ ವೃತ್ತಗಳನ್ನು ಉದ್ಘಾಟಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸ್ವಾತಂತ್ರ್ಯ ಹೋರಾಟಗಾರರಾದ ಮಹಾರಾಣಾ ಪ್ರತಾಪ್ ಸಿಂಗ್, ವೀರ ಸಾವರ್ಕರ್, ಸರ್ದಾರ ವಲ್ಲಭ ಬಾಯಿ ಪಟೇಲ್, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಸಂತ ವೀರ ಕೇಸರಿ ಸ್ವಾಮಿ ವಿವೇಕಾನಂದ, ಅಹಿಲ್ಯಾಬಾಯಿ ಹೋಳ್ಕರ್, ಡಾ.ಬಾಬು ಜಗಜೀವನ ರಾಂ ಅವರ ವೃತ್ತಗಳನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಐದು ವರ್ಷದ ಅವಧಿಯಲ್ಲಿ ಎರಡು ವರ್ಷ ಕೊರೊನಾದ ಕಾಟದಲ್ಲೂ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ. ಜಿಲ್ಲೆಗೆ ಹಲವಾರು ಯೋಜನೆಗಳನ್ನು ತರಲು ಪ್ರಯತ್ನಿಸಿ, ಯಶಸ್ವಿಯಾಗಿರುವೆ. ಸುರಕ್ಷತೆಯ ನಗರವನ್ನಾಗಿ ಪರಿವರ್ತಿಸಿರುವೆ. ಇದರಿಂದ ಜನ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದರು.
ಮಹಾನ್ ನಾಯಕರಿಗೆ ಗೌರವ ಸಲ್ಲಿಸಲು, ನಗರದಲ್ಲಿ ಸಾಕಷ್ಟು ಮಾರ್ಗಗಳನ್ನು ಮಾಡಿರುವೆ. ಅಲ್ಲದೇ, ನನ್ನ ಅವಧಿಯಲ್ಲಿ ಭೂಮಿಪೂಜೆ ಮಾಡಿರುವ ವೃತ್ತಗಳ ನಿರ್ಮಾಣ ಕಾರ್ಯ ಮುಗಿಸಿ, ನಾನೇ ಉದ್ಘಾಟಿಸಿರುವ ಹೆಮ್ಮೆ ಇದೆ ಎಂದು ತಿಳಿಸಿದರು.
ಎಲ್ಲ ಸಮುದಾಯಗಳ ಮುಖಂಡರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಇದ್ದರು.