ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ
ಸಹ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ.
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯನ್ನು ಕಡೆಗಣಿಸುತ್ತಿರುವುದು ಅತ್ಯಂತ ನೊವಿನ ಸಂಗತಿ ಎಂದು ಯುಗದರ್ಶಿನಿ ಫೌಂಡೇಶನ್ ಅಧ್ಯಕ್ಷೆ, ಹಿರಿಯ ಸಾಹಿತಿ ಸರಸ್ವತಿ ಚಿಮ್ಮಲಗಿ ವಿಷಾದಿಸಿದರು.
ಮಂಗಳವಾರ ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು. ದೇಶವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಸಮಾನ ಅವಕಾಶ ಸಿಗುವುದು ಒತ್ತಟ್ಟಿಗಿರಲಿ, ಈಗ ಆಯಾ ಪಕ್ಷಗಳು ಬಿಡುಗಡೆ ಮಾಡಿದ ಮೊದಲ ಹಂತದ ಪಟ್ಟಿ ನೋಡಿದರೆ ಮಹಿಳಾ ಅಭ್ಯರ್ಥಿಗಳೇ ಕಾಣುತ್ತಿಲ್ಲ. ಎಲ್ಲೋ ಅಲ್ಲೊಂದು – ಇಲ್ಲೊಂದು ಎನ್ನುವಂತಿದೆ ಎಂದರು.
ಮೀಸಲಾತಿ ಕಸದ ಬುಟ್ಟಿ ಸೇರಿದೆ. ಮಹಿಳೆಯರಿಗೆ ಸಮಾನ ಹಕ್ಕುಗಳನ್ನು, ಸಮಾನ ಅವಕಾಶಗಳನ್ನು ನೀಡಲು
ಪುರುಷವರ್ಗ ಹಿಂದೇಟು ಹಾಕುತ್ತಿದೆ.
ನಾಯಕರಾದವರು “ಮಹಿಳೆಯರಿಗೆ ಸ್ಥಾನಮಾನ ನೀಡಲಾಗುವುದು, ಮಹಿಳೆಯರನ್ನು ಮುಂದೆ ತರಲಾಗುವುದು, ಮಹಿಳಾ ಸಬಲೀಕರಣ ಮಾಡಲಾಗುವುದು” ಎಂದು ಹೇಳುವ ಹಲವಾರು ವಿಚಾರಗಳು ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ. ಎಲ್ಲ ರಾಜಕೀಯ ಪಕ್ಷಗಳು ಇಂಥ ಮಾತುಗಳನ್ನು ಹೇಳುವ ಮೂಲಕ ಮಹಿಳಾ ಮತದಾರರನ್ನು
ಸೆಳಯಲು ನೋಡುತ್ತಾರೆ. ನಿಜವಾಗಿಯೂ ಮಹಿಳೆಯ ಬಗ್ಗೆ ಕಾಳಜಿ ಇದ್ದು, ಅವಳ ಸಬಲೀಕರಣ ಮಾಡುವುದೇ ಆಗಿದ್ದಲ್ಲಿ ಸರ್ವ ಪಕ್ಷಗಳು ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೂ ಟಿಕೆಟ್ ನೀಡಿ ರಾಜಕೀಯರಂಗದಲ್ಲೂ ಮಹಿಳೆಗೆ ಸಮಾನ ಅವಕಾಶ ನೀಡಲಿ. ಅಂದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂದರು.
ಸರ್ವ ರಂಗದಲ್ಲಿ ಪುರುಷರಿಗಿಂತ ಮಿಗಿಲಾದ ಸಾಧನೆ ಮಹಿಳೆ ಮಾಡುತ್ತಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಗೆ ಈಗಲೂ ಪುರುಷ ಸಮಾನ ಅವಕಾಶಗಳು ಸಿಗದೆ ಇರುವುದು ಖಂಡನೀಯ ಎಂದು ಸಾಹಿತಿ ಸರಸ್ವತಿ ಚಿಮ್ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಜ್ಞಾನದೀಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ದೀಪಾ ತಟ್ಟೀಮನಿ ಮಾತನಾಡಿ, ಜನಸಂಖ್ಯೆಯ ಶೇ. ಅರ್ಧದಷ್ಟಿರುವ ಮಹಿಳೆಯರು ಸಮಾನ ಹಕ್ಕುಗಳನ್ನು ಪಡೆಯಲು ಅರ್ಹರಿದ್ದಾರೆ. ಹೀಗಾಗಿ ಮಹಿಳೆಯರಿಗೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಸಮನಾದ ಅವಕಾಶಗಳನ್ನು ನೀಡಬೇಕಿದೆ.
ಚುನಾವಣಾ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕೆಂಬ ಆಗ್ರಹಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ. ಮಹಿಳಾ ಮೀಸಲಾತಿ ಬಿಲ್ಲಿಗೆ ಕಲ್ಲು ಹೊಡೆಯುವ ಪುರುಷ ವರ್ಗಕ್ಕೆ ತಮ್ಮ ಪಕ್ಷಗಳಲ್ಲಿ ಮೀಸಲಾತಿ ನೀಡುವಷ್ಟು ದೊಡ್ಡ ಮನಸ್ಸಿದ್ದರೆ ದೇಶದ ಪ್ರಗತಿ ಇನ್ನೂ ಉತ್ತುಂಗಕ್ಕೆ ಏರುತ್ತದೆ ಎಂದರು.
ಇಂದಿನ ಯಾವುದೇ ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಬೆಂಬಲಿಸಿ, ಆಯ್ಕೆ ಮಾಡಲು
ಹಿಂದೇಟು ಹಾಕುತ್ತವೆ. ರಾಜಕೀಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಬರೀ ಬೆರಳೆಣಿಕೆಯಲ್ಲಿ
ಮಾತ್ರ. ಮಹಿಳೆ ಕೇವಲ ಮತಬ್ಯಾಂಕ್ ಮಾತ್ರವೆಂದು ಪರಿಗಣಿಸಿರುವುದು ಅಕ್ಷಮ್ಯ ಅಪರಾಧವೆಂಬುವುದನ್ನು ನಮ್ಮ ಸೋದರವರ್ಗ ಅರಿತು ಮಹಿಳೆಗೆ ಸಂವಿಧಾನದತ್ತ ಸಮಾನ ಹಕ್ಕುಗಳನ್ನು ನೀಡಲು ಬದ್ಧತೆಯನ್ನು ತೋರಬೇಕಿದೆ. ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಹೊಸ ರಾಜಕೀಯ ಸಂಸ್ಕೃತಿಗೆ ಎಲ್ಲ ಪಕ್ಷಗಳು ಬೆಂಬಲಿಸಬೇಕಿದೆ ಎಂದರು.
ಮಹಿಳೆಯರು ರಾಜಕೀಯದಲ್ಲಿ ಹೆಚ್ಚೆಚ್ಚು ಅರ್ಹರಾಗಿರುವದರಿಂದ ಅವರಿಗೂ ಎಲ್ಲ ಚುನಾವಣೆಗಳಲ್ಲಿ ಶೇ. 50 ಪ್ರತಿಶತ ಅವಕಾಶ ನೀಡಬೇಕು. ಆಗ ಮಾತ್ರ ಬದಲಾವಣೆಯ ಗಾಳಿ ಬೀಸಲು ಸಾಧ್ಯ. ಇನ್ನಾದರೂ ಮಹಿಳಾ ಮುಖಂಡರು, ಮಹಿಳಾ ಮತದಾರರು ಎಚ್ಚೆತ್ತುಕೊಳ್ಳಬೇಕಿರುವುದು ಇಂದಿನ ತುರ್ತು ಅಗತ್ಯವೆಂಬುವುದನ್ನು ಅರಿಯಬೇಕಿದೆ ಎಂದು ದೀಪಾ ತಟ್ಟಿಮನಿ ಹೇಳಿದರು.
ಸದಸ್ಯರಾದ ಗೌರಾಬಾಯಿ ಕುಬಕಡ್ಡಿ, ಸಾವಿತ್ರಿ ಮುಂಡಾಸ್, ಶಾಂತಾ ಬಿರಾದಾರ, ಕಮಲಾ ಹಳಗುಣಕಿ,ಲಕ್ಷ್ಮೀ ಚಿಮ್ಮಲಗಿ, ನಂದಿನಿ ಹಜೇರಿ ಮತ್ತು ಕವಿತಾ ಚರಮಗೋಳ ಇದ್ದರು.
Related Posts
Add A Comment