ಬಸವನಬಾಗೇವಾಡಿ: ಇಲ್ಲಿಯ ವಿಧಾನಸಭೆ ಚುನಾವಣೆಯಲ್ಲಿ ಎಸ್.ಕೆ.ಬೆಳ್ಳುಬ್ಬಿ, ಸೋಮನಗೌಡ ಪಾಟೀಲರು ಸೇರಿ 83 ಸಾವಿರ ಮತ ಪಡೆದಿದ್ದಾರೆ. ಬಿಜೆಪಿ, ಜೆಡಿಎಸ್ ಎರಡು ಪಕ್ಷದ ಮತಗಳು ಸೇರಿದರೆ ಇದೇ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳು ಲೀಡ್ ಪಡೆಯಬಹುದು. ಎರಡು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಮತಯಾಚನೆ ಮಾಡುವ ಮೂಲಕ ಹೆಚ್ಚಿನ ಮತಗಳು ರಮೇಶ ಜಿಗಜಿಣಗಿ ಅವರಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸಚಿವೆ ಶೊಭಾ ಕರಂದ್ಲಾಜೆ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ರೋಡ್ ಶೋ ಮೂಲಕ ಮತಯಾಚಿಸಿದ ನಂತರ ಮಾತನಾಡಿದ ಅವರು,
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಬಸವಣ್ಣನವರ ವಚನಗಳ ಪುಸ್ತಕಗಳನ್ನು ವಿವಿಧ ಭಾಷೆಗಳಲ್ಲಿ ಭಾಷಾಂತರಿಸುವುದರೊಂದಿಗೆ ಅವರ ಕಾಯಕ ದಾಸೋಹ ಸಿದ್ದಾಂತವನ್ನು ದೇಶ ಸೇರಿದಂತೆ ವಿವಿಧ ದೇಶಗಳಿಗೆ ಹರಡುವಂತೆ ಮಾಡಿದ್ದಾರೆ ಎಂದರು.
ಯುಪಿಎ ಸರ್ಕಾರದಲ್ಲಿ ಸೈನಿಕರ ಕೈಯಲ್ಲಿ ಗನ್ ಗಳಿದ್ದವು. ಆದರೆ ಚಲಾಯಿಸುವಂತಿರಲಿಲ್ಲ. ಮೋದಿ ಅವರು ಅಧಿಕಾರಕ್ಕೆ ಒಂದು ಗುಂಡಿಗೆ ಹತ್ತು ಗುಂಡುಗಳಿಂದ ಉತ್ತರ ಕೊಡಿ ಎಂದು ಹೇಳುವ ಮೂಲಕ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಬಸವಣ್ಣನವರ ತತ್ವದ ಆಧಾರದ ಮೇಲೆ ನಡೆಯಬೇಕು. ಜಾತಿ ವ್ಯವಸ್ಥೆ ಇರಬಾರದು. ಮಹಿಳೆಯರು, ಬಡವರು, ಯುವಕರು, ರೈತರು ಎಂಬ ನಾಲ್ಕು ಜಾತಿಗಳಿರಬೇಕು ಎಂದು ಮೋದಿ ಅವರು ಹೇಳಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಐದು ಕೆ.ಜಿ ಅಕ್ಕಿ, ಆಯುಷ್ಮಾನ್ ಕಾರ್ಡ್, ಶೌಚಾಲಯ, ವಿದ್ಯುತ್, ಗ್ಯಾಸ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜನರ ವಿಕಾಸಕ್ಕಾಗಿ, ದೇಶದ ರಕ್ಷಣೆಗಾಗಿ, ಬಡವರಿಗಾಗಿ, ವಿದೇಶದಲ್ಲಿ ಭಾರತಕ್ಕೆ ಗೌರವ ಸಿಗುವುದಕ್ಕಾಗಿ ಮೋದಿ ಅವರು ಬೇಕಾಗಿದ್ದಾರೆ. ಬಲಿಷ್ಟ ಭಾರತಕ್ಕಾಗಿ ಮೋದಿ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶ ಸಾಕಷ್ಡು ಅಭಿವೃದ್ಧಿ ಕಂಡಿದೆ. ಕಾಶ್ಮೀರದಲ್ಲಿನ 370ನೇ ವಿಧಿ ರದ್ದುಪಡಿಸುವ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ರಾಮ ಮಂದಿರ ನಿರ್ಮಿಸುವ ಮೂಲಕ ದೇಶದ ಜನರ ಕನಸನ್ನು ಸಾಕಾರಗೊಳಿಸಿದ್ದಾರೆ.
ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ನಾನು ಸಂಸದನಾದ ಮೇಲೆ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಇನ್ನು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಮಾಡಬೇಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದಕ್ಕಾಗಿ ಜಿಲ್ಲೆಯ ಜನರು ನನ್ನನ್ನು ಬೆಂಬಲಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜೆಡಿಎಸ್ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ (ಮನಗೂಳಿ), ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಆರ್.ಎಸ್.ಕುಚಬಾಳ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಅಶ್ವಿನಿ ಪಟ್ಟಣಶೆಟ್ಟಿ, ಸಾವಿತ್ರಿ ಕಲ್ಯಾಣಶೆಟ್ಟಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಸಂಗನಗೌಡ ಚಿಕ್ಕೊಂಡ, ನೀಲಪ್ಪ ನಾಯಕ,, ಕಲ್ಲು ಸೊನ್ನದ, ಮುಳವಾಡ, ಬಸವರಾಜ ಬಿಜಾಪುರ, ಬಂದೇನವಾಜ ವಾಲೀಕಾರ, ಅನಿಲ ಮುಳವಾಡ,, ಇದ್ದರು.
ರೋಡ್ ಶೋ: ಪ್ರಚಾರ ಭಾಷಣಕ್ಕೂ ಮುನ್ನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತೆಲಗಿ ರಸ್ತೆಯ ಗಣಪತಿ ವರತ್ತದಿಂದ ರೋಡ್ ಶೋ ಆರಂಭಿಸಿ, ವಿರಕ್ತಮಠ, ಬಸವಜನ್ಮ ಸ್ಮಾರಕ, ಅಗಸಿ ಮಾರ್ಗವಾಗಿ ಬಸವೇಶ್ವರ ತಲುಪಿತು. ರೋಡ್ ಶೋ ದಲ್ಲಿ ಬಿಜೆಪಿ, ಜೆಡಿಎಸ್ ಧ್ವಜಗಳು ರಾರಾಜಿಸಿದವವು ಕಾರ್ಯಕರ್ತರು ಮೋದಿ, ಮೋದಿ, ಜೈಶ್ರೀರಾಮ ಘೋಷಣೆ ಮೊಳಗಿದವು. ಕಾರ್ಯಕರ್ತರು ಪಟಾಕ್ಷಿ ಸಿಡಿಸಿ ಮೋದಿ ಮೋದಿ ಎಂದು ಘೋಷಣೆ ಕೂಗಿದರು.

