ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಒಂದು ತಂಪಾದ ಸಂಜೆಯ ವೇಳೆಯಲ್ಲಿ ಭಗವಂತ ಮತ್ತು ರೋಗ ಈ ಇಬ್ಬರೂ ಪರಸ್ಪರ ಉಭಯ ಕುಶಲೋಪರಿಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಜನರು ಭಗವಂತನನ್ನು ಪ್ರಾರ್ಥಿಸಿದರೆ, ರೋಗವನ್ನು ಜನರು ತಮ್ಮಿಂದ ಬಹಳ ದೂರವಿಡುತ್ತಿದ್ದರು. ಹೀಗೆ ಇಬ್ಬರೂ ಮಾತನಾಡುತ್ತಿರುವಾಗ ಪರಸ್ಪರ ತಮ್ಮ ಕೆಲಸಗಳ ಕುರಿತು ಚರ್ಚಿಸುತ್ತಾ ಭಗವಂತ ಹೇಳುತ್ತಾನೆ, ನಾನು ಈ ಪ್ರಪಂಚದ ಎಲ್ಲಾ ಜೀವರಾಶಿಗಳನ್ನು ಕಾಪಾಡುತ್ತೇನೆ ಎಂದು. ಆಗ ರೋಗವು, ನಾನು ಭೀಕರ ರೋಗವನ್ನು ಪ್ರಪಂಚದ ಎಲ್ಲಾ ಕಡೆಗೂ ಮತ್ತು ಎಲ್ಲರಿಗೂ ಹರಡುತ್ತೇನೆ ಎಂದು ಹೇಳಿತು. ಹೀಗೆ ಮಾತನಾಡುತ್ತಾ ರೋಗವು ನಾನು ಒಂದು ತಿಂಗಳಲ್ಲಿ ಸುಮಾರು ಐನೂರು ಜನಕ್ಕೆ ರೋಗವನ್ನು ಹರಡಿ ಅವರನ್ನು ಸಾಯಿಸುತ್ತೇನೆ ಎಂದು ಭಗವಂತನಿಗೆ ಹೇಳಿತು. ಅಲ್ಲಿಗೆ ರೋಗ ಮತ್ತು ಭಗವಂತರ ಮಾತುಕತೆಗಳು ಮುಗಿದು, ಇಬ್ಬರೂ ತಮ್ಮ ತಮ್ಮ ಕೆಲಸದ ನಿಮಿತ್ತ ಅಲ್ಲಿಂದ ಹೊರಡುತ್ತಾರೆ.
ಸುಮಾರು ಒಂದೆರಡು ತಿಂಗಳು ಕಳೆದ ನಂತರ ಮತ್ತೆ ಭಗವಂತ ಮತ್ತು ರೋಗ ಇಬ್ಬರೂ ಅದೇ ಸ್ಥಳದಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಆಗ ಭಗವಂತನು, ಕಳೆದ ಬಾರಿ ನಾವಿಬ್ಬರು ಚರ್ಚಿಸಿದಾಗ ನೀನು ಒಂದು ತಿಂಗಳಲ್ಲಿ ಒಟ್ಟು ಐನೂರು ಮಂದಿಗೆ ರೋಗವನ್ನು ಹರಡಿ ಸಾಯಿಸುತ್ತೇನೆ ಎಂದು ತಿಳಿಸಿದ್ದೆ. ಆದರೆ ಈಗ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಏಕೆ ನೀನು ನಿನ್ನ ಮಾತನ್ನು ತಪ್ಪಿದೆ? ಎಂದು ರೋಗದಲ್ಲಿ ಕೇಳುತ್ತಾನೆ. ಆಗ ರೋಗವು ನಗುತ್ತಾ, ನಾನು ನಿನಗೆ ಕೊಟ್ಟ ಮಾತನ್ನು ಎಲ್ಲೂ ತಪ್ಪಿಲ್ಲ, ನಾನು ನಿನಗೆ ತಿಳಿಸಿದ್ದಂತೆ ಒಟ್ಟು ಐನೂರು ಮಂದಿಗಷ್ಟೇ ರೋಗವನ್ನು ಹರಡಿದ್ದೇನೆ. ಆದರೆ ಉಳಿದ ನಾಲ್ಕೂವರೆ ಸಾವಿರ ಮಂದಿ ರೋಗದ ಭಯದಿಂದಲೇ ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ, ಅದಕ್ಕೆ ನಾನೇನು ಮಾಡಲಿ ಎಂದು ಭಗವಂತನಿಗೆ ಹೇಳಿತು.
ಸಮಾಜದಲ್ಲಿ ಯಾವುದೇ ಒಂದು ಸಮಸ್ಯೆಯಿಂದ ಕಡಿಮೆ ಮಂದಿ ಹಾನಿಗೆ ಒಳಗಾದರೆ ಭಯದಿಂದ ಹಾನಿಗೆ ಒಳಗಾಗುವವರ ಸಂಖ್ಯೆಯು ಅದರ ದುಪಟ್ಟಿರುತ್ತದೆ. ಯಾರು ಸಮಸ್ಯೆಯ ವಿರುದ್ದ ಸೆಟೆದು ನಿಂತು ಹೋರಾಡುತ್ತಾರೋ ಅವರಿಗೆ ಬದುಕಿನ ಹಾದಿಯು ಗೋಚರಿಸುತ್ತದೆ. ಸಮಸ್ಯೆಗೆ ಭಯಪಟ್ಟು ಕುಳಿತವ ಎಲ್ಲರಿಗಿಂತ ಮೊದಲೇ ಸಮಸ್ಯೆಯ ಸುಳಿಗೆ ಸಿಲುಕಿ ನರಳಾಡಿ ಬದುಕನ್ನು ಅಂತ್ಯ ಮಾಡಿಕೊಳ್ಳುತ್ತಾನೆ. ‘ಧೈರ್ಯಂ ಸರ್ವತ್ರ ಸಾಧನಂ’. ಎಂಬ ಗಾದೆ ಮಾತಿನಂತೆ ಧೈರ್ಯವಿರುವಾತ ಎಂತಹ ಸಮಸ್ಯೆಯನ್ನೂ ಧೈರ್ಯ ಕೆಡದೇ ಎದುರಿಸಿ ಗೆದ್ದು, ಭಯಕ್ಕೇ ಸವಾಲಾಗಿ ಬೆಳೆಯುತ್ತಾನೆ.
ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ