“ಆರೋಗ್ಯ ಅಂಗಳ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ನಾವು ಚಿಕ್ಕವರಿದ್ದಾಗ ತಾಲೂಕು ಕೇಂದ್ರವಾದ ನನ್ನೂರು ಕೊಪ್ಪಳದಿಂದ ಕೇವಲ ಐವತ್ತು ಕಿಲೋಮೀಟರ್ ದೂರದಲ್ಲಿರುವ ನಮ್ಮದೇ ಜಿಲ್ಲೆಯ ಮತ್ತೊಂದು ತಾಲೂಕು ಕೇಂದ್ರ ಕುಷ್ಟಗಿಯಲ್ಲಿ ಕಾಲರಾ ವಿಪರೀತವಾಗಿ ಹರಡಿತ್ತು. ಪಕ್ಕದ ತಾಲೂಕುಗಳಲ್ಲಿ ಕೂಡ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆಯವರು ಕೈಗೊಂಡಿದ್ದರು. ಆಗ ಕಾಲರಾ ಎಂದರೆ ಮಾರಣಾಂತಿಕ ಕಾಯಿಲೆ ಎಂಬ ಭಯ. ಈಗ ಮತ್ತೊಮ್ಮೆ ಕಾಲರ ಮತ್ತೆ ರಾಜ್ಯದೆಲ್ಲೆಡೆ ತಲೆದೋರುತ್ತಿದೆ ಅದರಲ್ಲೂ ಪ್ರಮುಖವಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಕಾಲರಾ ಕಾಣಿಸಿಕೊಂಡಿದೆ ಎಂಬುದು ಗಮನಾರ್ಹ.
ವಿಬ್ರಿಯೋ ಕಾಲರೆ ಎಂಬ ಬ್ಯಾಕ್ಟೀರಿಯಾದಿಂದ ಬರುವ ಈ ರೋಗವು 1817 ರಲ್ಲಿ ಮೊದಲ ಬಾರಿ ರಷ್ಯಾ ದೇಶದಲ್ಲಿ ಕಾಣಿಸಿಕೊಂಡು ನಂತರ ವ್ಯಾಪಾರ ಮಾರ್ಗವಾಗಿ ಯುರೋಪಿನ ಹಲವಾರು ದೇಶಗಳಲ್ಲಿ ಕಾಣಿಸಿಕೊಂಡಿತು. ನಂತರ ಉತ್ತರ ಅಮೆರಿಕ ಮತ್ತು ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿತು.
ಕಾಲರಾ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ಮೂಲ ಅಶುದ್ಧವಾದ ವಾತಾವರಣ.ಇನ್ನೂ ಹೇಳಬೇಕೆಂದರೆ ಕಲುಷಿತ ನೀರಿನ ಜಲಮೂಲಗಳ ವಾತಾವರಣದಲ್ಲಿ ಬೆಳೆಯುವ ಚಿಪ್ಪು ಮೀನುಗಳನ್ನು ಸೇವಿಸುವವರಲ್ಲಿ ಈ ಬ್ಯಾಕ್ಟೀರಿಯಾ ಪ್ರಸರಣಗೊಂಡು ವಾಂತಿ ಮತ್ತು ವಿಸರ್ಜನೆಗಳ ಮೂಲಕ ಇತರರಿಗೆ ಸಾಂಕ್ರಾಮಿಕವಾಗಿ ಹರಡುತ್ತಾ ಹೋಗುತ್ತದೆ. ಸ್ವಚ್ಛತೆ ಇಲ್ಲದ ರಾಷ್ಟ್ರಗಳಲ್ಲಿ ಅಶುದ್ಧ ಆಹಾರ ಸೇವನೆಯಿಂದಲೂ ಕಾಲರಾ ರೋಗ ಉಂಟಾಗಬಹುದು.
ಈ ಬ್ಯಾಕ್ಟೀರಿಯಾ ಹೊಂದಿರುವ ಕಲುಷಿತ ವಸ್ತುಗಳ ಮೇಲೆ ನೊಣಗಳು ಕುಳಿತುಕೊಂಡು ಅಲ್ಲಿಂದ ಬೇರೆ ಪದಾರ್ಥಗಳ ಮೇಲೆ ಹಾರಾಡುತ್ತ ಕುಳಿತುಕೊಳ್ಳುವುದರಿಂದ ನೊಣಗಳ ಮೂಲಕ ಈ ಕಾಲರಾ ರೋಗವು ಹರಡುತ್ತದೆ. ತೆರೆದ ಸ್ಥಳದಲ್ಲಿ ಮಾರಾಟ ಮಾಡುವ ತಿಂಡಿ ತೀರ್ಥಗಳು, ಹಣ್ಣು ಹಂಪಲುಗಳನ್ನು ಸೇವಿಸದೇ ಇರುವಂತೆ ಆರೋಗ್ಯ ಇಲಾಖೆಯು ಆಗಾಗ ತಾಕೀತು ಮಾಡುತ್ತಲೇ ಇರುತ್ತದೆ. ಆದರೆ ನಾವು ಅವಜ್ಞರು. ಪೆಟ್ಟು ಬೀಳುವವರೆಗೆ ಪಾಠ ಕಲಿಯದವರು. ದಂಡಂ ದಶಗುಣಂ ಭವೇತ್ ಎಂದು ಹೇಳುವಂತೆ ಬೆಂಕಿ ನಮ್ಮ ಮನೆಯನ್ನು ಸುಡುವವರೆಗೆ ಆರಿಸಲು ಬಾರದವರು.
ಕಾಲರಾ ರೋಗದ ಲಕ್ಷಣಗಳು
ವಿಪರೀತ ವಾಂತಿ ಮತ್ತು ಬೇಧಿಯಿಂದ ಆರಂಭವಾಗುವ ಈ ರೋಗದ ಲಕ್ಷಣಗಳಲ್ಲಿ ಅತಿಯಾದ ನೀರಿನಂತಹ ವಾಂತಿ ಮತ್ತು ಭೇದಿಯಿಂದಾಗಿ ಪೀಡಿತನೋರ್ವ ಒಂದೇ ದಿನದಲ್ಲಿ ಸುಮಾರು 20 ಲೀಟರ್ ನಷ್ಟು ದೇಹದಲ್ಲಿರುವ ಜಲವನ್ನು ಕಳೆದುಕೊಳ್ಳುತ್ತಾನೆ. ಇದರಿಂದ ಸಂಪೂರ್ಣ ದೇಹವು ನಿರ್ಜಲೀಕರಣಗೊಂಡು ದೇಹಕ್ಕೆ ಅಗತ್ಯವಾದ ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಲವಣಾಂಶಗಳ ಕೊರತೆಯಿಂದ ಬಳಲುತ್ತದೆ. ನಿರ್ಜಲೀಕರಣದಿಂದಾಗಿ ಕಣ್ಣು ಮತ್ತು ಗಲ್ಲಗಳು ಗುಳಿ ಬಿದ್ದಂತೆ ಕಾಣಬಹುದು. ಚರ್ಮದಲ್ಲಿ ಸಡಿಲತೆ ಕಾಣಿಸಿಕೊಂಡು ಕೈಕಾಲುಗಳು ಸುಕ್ಕುಗಟ್ಟಿದಂತೆ ಕಾಣುತ್ತವೆ. ಸ್ವಲ್ಪ ಜ್ವರದ ಲಕ್ಷಣವೂ ಇದ್ದು ಶೀತ ಬಾಧೆಯು ಉಂಟಾಗಬಹುದು. ಎಲೆಕ್ಟ್ರೋಲೈಟ್ ಗಳ ವಿಪರೀತ ಅಸಮತೋಲನದಿಂದಾಗಿ ಸಂಪೂರ್ಣ ದೇಹ ನೀಲಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದಲೇ ಇದನ್ನು ಬ್ಲೂ ಡೆತ್ ಎಂದು ಕೂಡ ಕರೆಯುತ್ತಾರೆ. ನೀರಿನಂತಹ ಮಲದ ಪರೀಕ್ಷೆಯ ಮೂಲಕವೇ ಕಾಲರ ಪತ್ತೆಯಾಗುವುದು. ಇಂತಹ ವ್ಯಕ್ತಿಯು ವಾಂತಿ ಮಾಡಿಕೊಳ್ಳುವುದಾಗಲಿ ಇಲ್ಲವೇ ವಿಸರ್ಜಿಸುವುದಾಗಲಿ ಮಾಡಿದಾಗ ಈ ಬ್ಯಾಕ್ಟೀರಿಯಾಗಳು ಬೇರೆಡೆ ಹರಡುವ ಸಂಭವ ಇರುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಿಸುಮಾರು ನೂರು ಮಿಲಿಯನ್ ಬ್ಯಾಕ್ಟೀರಿಯಾ ಗಳು ದೇಹದಲ್ಲಿ ಹೊಕ್ಕಾಗಲೇ ಕಾಲರ ರೋಗ ಉಂಟಾಗುವುದು. ಅಪೌಷ್ಟಿಕತೆಯಿಂದ ಬಳಲುವವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗಿರುವವರು ಬಲು ಬೇಗನೆ ಈ ರೋಗಕ್ಕೆ ತುತ್ತಾಗುತ್ತಾರೆ. ಓ ರಕ್ತದ ಗುಂಪು ಹೊಂದಿರುವವರು ಕೂಡ ಬಲು ಬೇಗನೆ ಈ ರೋಗಕ್ಕೆ ತುತ್ತಾಗುತ್ತಾರೆ.ಆದ್ದರಿಂದಲೇ ಕಾಲರ ಪತ್ತೆಯಾದ ಕೂಡಲೇ ಆ ರೋಗಿಯ ಹಾಸಿಗೆ ಹೊದಿಕೆಗಳನ್ನು ಬೇರೆಯಾಗಿಯೇ ಕುದಿಯುವ ನೀರಿನಲ್ಲಿ ತೋಯಿಸಿ ನೆನೆಸಿ ಒಗೆದು ಸ್ವಚ್ಛಗೊಳಿಸಿ ಕ್ಲೋರಿನೇಷನ್ ಕ್ರಿಯೆಯ ಮೂಲಕ ಸೋಂಕು ರಹಿತಗೊಳಿಸಬೇಕು. ರೋಗಿಯ ಊಟದ ತಟ್ಟೆ ಮತ್ತು ನೀರಿನ ಗ್ಲಾಸ್ ಗಳನ್ನು ಬೇರೆಯಾಗಿಯೇ ಇಡಬೇಕು. ರೋಗಿಯು ಇತರರ ಜೊತೆ ಸಂಪರ್ಕಕ್ಕೆ ಬರಬಾರದು. ಇದರ ಜೊತೆ ಜೊತೆಗೆ ರೋಗಿಗೆ ವೈದ್ಯರ ಸಲಹೆಯ ಮೇರೆಗೆ ಮಾತ್ರೆ ಮತ್ತು ಔಷಧಿಗಳ ಚಿಕಿತ್ಸೆ ಮಾಡುವುದರ ಜೊತೆ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರವನ್ನು ಒದಗಿಸಬೇಕು.
ನಿರ್ಜಲೀಕರಣದಿಂದ ಉಂಟಾದ ನಷ್ಟವನ್ನು ತಡೆಯಲು ಎಲೆಕ್ಟ್ರೋಲೈಟ್ಗಳನ್ನು ಪೂರಕವಾಗಿ ಮೌಖಿಕವಾಗಿ ಕೊಡಬಹುದು, ಆದರೆ ಹೀಗೆ ಕೊಟ್ಟರೂ ಕೂಡ ದೇಹವು ಮೆಗ್ನೀಷಿಯಂ ಮತ್ತು ಪೊಟ್ಯಾಶಿಯಂಗಳ ಕೊರತೆ ಅನುಭವಿಸುತ್ತದೆ.ಪೊಟ್ಯಾಶಿಯಂ ಅಂಶವನ್ನು ಹೆಚ್ಚಿಸಲು ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಎಳನೀರು ಸೇವನೆ ಮಾಡಬೇಕು.
ಕಾಲರಾ ರೋಗವನ್ನು ತಡೆಗಟ್ಟಲು 1885 ರಲ್ಲಿ ಸ್ಪಾನಿಶ್ ಮೂಲದ ವೈದ್ಯರು ಲಸಿಕೆಯನ್ನು ಕಂಡುಹಿಡಿದಿದ್ದು ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಡ್ಯೂಕೋರೆಲ್ ಎಂಬ ಈ ಲಸಿಕೆಯನ್ನುಎರಡು ಹಂತದಲ್ಲಿ ಮೌಖಿಕವಾಗಿ ನೀಡಲಾಗುತ್ತದೆ. ಕಾಲರಾ ಪೀಡಿತರಾದವರಿಗೆ ಆಂಟಿಬಯೋಟಿಕ್ಗಳನ್ನು, ಮೌಖಿಕವಾಗಿ ಎಲೆಕ್ಟ್ರೋಲೈಟ್ಗಳನ್ನು ಕೂಡ ನೀಡಲಾಗುತ್ತದೆ.
ಕಾಲರಾ ರೋಗವನ್ನು ತಡೆಗಟ್ಟುವ ಮಾರ್ಗೋಪಾಯಗಳು
- ಅಶುದ್ಧ ವಾತಾವರಣದಲ್ಲಿ ತಯಾರಿಸಲಾದ ಆಹಾರವನ್ನು ಸೇವಿಸಬಾರದು.
- ತೆರೆದ ಬಯಲಿನಲ್ಲಿ ಮಾರುವ ತಿಂಡಿ ತಿನಿಸುಗಳನ್ನು, ಕತ್ತರಿಸಿ ಇಟ್ಟ ಹಣ್ಣುಗಳನ್ನು ಸೇವಿಸಬಾರದು.
- ಶೌಚಾಲಯಗಳನ್ನು ಬಳಸಿದ ನಂತರ ಕೈಯನ್ನು ಸೋಪು ಹಚ್ಚಿ ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ಕ್ಲೋರಿನೇಷನ್ ಇಂದಿನ ಮೊದಲ ಆದ್ಯತೆ ಆಗಿರಬೇಕು.
- ಎಲ್ಲಕ್ಕಿಂತಲೂ ಮುಖ್ಯವಾಗಿ ಆರೋಗ್ಯವನ್ನು ಹೆಚ್ಚು ಕಾಯ್ದಿಟ್ಟುಕೊಂಡಿದ್ದರೆ ರೋಗನಿರೋಧಕ ಶಕ್ತಿಯು ಹೆಚ್ಚಾಗಿ ಯಾವುದೇ ರೀತಿಯ ಖಾಯಿಲೆಗಳ ಸೋಂಕನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿರುತ್ತದೆ.
ಪ್ರಿವೆನ್ಷನ್ ಇಸ್ ಬೆಟರ್ ದ್ಯಾನ್ ಕ್ಯೂರ್ ಎಂಬ ಮಾತು ಕಾಲರಾ ರೋಗ ದಂತಹ ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ಅನ್ವಯವಾಗುತ್ತದೆ.
ಕಾಲರ ರೋಗದ ಕುರಿತು ಭಯ ಬೇಡ, ಆದರೆ ಜಾಗರೂಕತೆ ಮುಖ್ಯ ಎಂಬುದನ್ನು ಅರಿತು ನಮ್ಮ ಆರೋಗ್ಯದ ಜೊತೆ ಜೊತೆಗೆ ಸಾಮುದಾಯಿಕ ಆರೋಗ್ಯದ ಕುರಿತು ಕಾಳಜಿ ವಹಿಸೋಣ. – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ