ಸಿಜೆಐ ಮೇಲೆ ಷೂ ಎಸೆದ ಪ್ರಕರಣಕ್ಕೆ ಖಂಡನೆ – ಪ್ರತಿಭಟನೆ | ಅಂಗಡಿ ಮುಗಟ್ಟುಗಳು ಬಂದ್ | ಬಸ್ ಸಂಚಾರ ಸಂಪೂರ್ಣ ಸ್ಥಗಿತ ಟೈರ್‌ಗಳಿಗೆ ಬೆಂಕಿ ಕಾವು ಜೋರು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಗಳ ಮೇಲೆ ಷೂ ಎಸೆದ ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ವಿವಿಧ ದಲಿತ, ಪ್ರಗತಿಪರ, ಅಲ್ಪಸಂಖ್ಯಾತ ಸಂಘಟನೆಗಳು ಗುರುವಾರ ಕರೆ ನೀಡಿದ್ದ ವಿಜಯಪುರ ಬಂದ್‌ಗೆ ಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಬಂದ್ ಯಶಸ್ವಿಯಾಗಿದೆ.
ವಿಜಯಪುರದ ಬಹುತೇಕ ಅಂಗಡಿ-ಮುಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಪೆಟ್ರೋಲ್, ಔಷಧಿ, ಆಸ್ಪತ್ರೆ, ಬ್ಯಾಂಕ್ ವ್ಯವಹಾರ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗಿದ್ದವು.
ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಸಂಕೀರ್ಣ, ಕೆ.ಸಿ. ಮಾರುಕಟ್ಟೆ ಸಂಕೀರ್ಣ, ಶ್ರೀ ಸಿದ್ದೇಶ್ವರ ಗುಡಿ, ಕಿರಾಣ ಬಜಾರ್, ತರಕಾರಿ ಮಾರುಕಟ್ಟೆ ಹೀಗೆ ಎಲ್ಲ ಕಡೆ ಬಂದ್ ಜೋರಾಗಿತ್ತು.
ಪ್ರತಿಭಟನೆ ಕಾವು ಜೋರಾಗುವ ಹಿನ್ನೆಲೆಯಲ್ಲಿ ನಗರ ಸಾರಿಗೆ ಅಷ್ಟೇ ಅಲ್ಲದೇ ಗ್ರಾಮೀಣ ಭಾಗದ ಸಾರಿಗೆ ಸಂಚಾರ ಸಹ ಸಂಪೂರ್ಣ ಸ್ತಬ್ದವಾಗಿತ್ತು. ಸಾರಿಗೆ ಇಲಾಖೆಯ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ. ಆಟೋ ಸಂಚಾರ ಬೆರಳಣಿಕೆಯಷ್ಟಿತ್ತು.
ಜನಸಂದಣಿಯಿಂದ ಕೂಡಿರುತ್ತಿದ್ದ ಕೇಂದ್ರ ಬಸ್ ನಿಲ್ದಾಣ, ಕೆ.ಸಿ. ಮಾರುಕಟ್ಟೆ, ಗಾಂಧೀ ವೃತ್ತ ಹೀಗೆ ಅನೇಕ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುವಂತಾಯಿತು. ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ಹೋರಾಟ ಸ್ಥಳಗಳಿಗೆ ಹೋಗುತ್ತಿರುವ ದೃಶ್ಯ ಕಂಡು ಬಂದಿತು.
ಸಾವಿರಾರು ಯುವಕರು ತಂಡೋಪತಂಡವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಘಟನೆಯ ಕುರಿತು ವ್ಯಾಪಕವಾಗಿ ಖಂಡಿಸಿದರು. ಅಲ್ಲಿಂದ ಸಾಗಿದ ಪ್ರತಿಭಟನಾ ರ‍್ಯಾಲಿಯುದ್ದಕ್ಕೂ ಘಟನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಗಾಂಧೀವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಗಿದ ಪ್ರತಿಭಟನಾ ರ‍್ಯಾಲಿ ಡಾ.ಬಿ.ಆರ್. ಅಂಬೇಡ್ಕರ ವೃತ್ತಕ್ಕೆ ತಲುಪಿ ಸಂಪನ್ನಗೊಂಡು ಅಲ್ಲಿ ಪ್ರತಿಭಟನಾ ಸಭೆಯಾಗಿ ಮಾರ್ಪಾಡಾಯಿತು. ಬೃಹತ್ ವೇದಿಕೆಯಲ್ಲಿ ಈ ಘಟನೆಯನ್ನು ವಿವಿಧ ಸಂಘಟನೆಯ ಮುಖಂಡರು ಖಂಡಿಸಿದರು.
ಅಲ್ಲಲ್ಲಿ ಸ್ವಯಂ ಸೇವಕರು ಪ್ರತಿಭಟನಾಕಾರರಿಗೆ ಕುಡಿಯುವ ನೀರಿನ ಸೇವೆ ಒದಗಿಸಿದರು.

ಪ್ರತಿಭಟನೆ ಕಾವು ಜೋರು
ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಷೂ ಎಸೆದ ಘಟನೆಯನ್ನು ಖಂಡಿಸಿ ಪ್ರತಿಭಟನೆ ಕಾವು ಜೋರಾಗಿತ್ತು. ಹತ್ತಾರು ದಿಕ್ಕಿನಿಂದ ಪ್ರತಿಭಟನಾಕಾರರು ಘೊಷಣೆ ಕೂಗುತ್ತಾ ಶ್ರೀ ಸಿದ್ದೇಶ್ವರ ದೇವಾಲಯ ಎದುರು ಜಮಾಯಿಸಿದರು.
ಇಟಗಿ ಪೆಟ್ರೋಲ್ ಪಂಪ್ ಅಥಣಿ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ ಘಟನೆಯೂ ನಡೆಯಿತು.

“ವಿ ಸ್ಟ್ಯಾಂಡ್ ವಿತ್ ಪ್ರಿಯಾಂಕ್” ಖರ್ಗೆ
ಇದೇ ವೇಳೆ ಅನೇಕ ಯುವಕರು ಸಂಘ ಪರಿವಾರ ನಿಷೇಧ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ “ವಿ ಸ್ಟ್ಯಾಂಡ್ ವಿತ್ ಪ್ರಿಯಾಂಕ್” ಖರ್ಗೆ’ ಎಂಬ ಪ್ಲೇ ಕಾರ್ಡ್ ಪ್ರದರ್ಶಿಸಿದ ಪ್ರಸಂಗ ನಡೆಯಿತು.