ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಿಂದಿ ಭಾಷಾ ಅನ್ ಬಾನ್ ಶಾನ್ ಎಂಬ ಒಂದು ವಿಶಿಷ್ಟವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರದ ಅಂಜುಮನ ಕಾಲೇಜಿನ ಪ್ರಾಧ್ಯಾಪಕ ಎಮ್.ಎ. ಪೀರಾ ಮಾತನಾಡಿ, ಕಬೀರ, ಸೂರದಾಸ, ತುಳಸಿದಾಸ, ಮೀರಾಬಾಯಿ ಹೀಗೆ ಹತ್ತು ಹಲವು ಕವಿಗಳು ಹಿಂದಿ ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಪ್ರೇಮಚಂದ್ ಅವರ “ಗೋದಾನ್, “ಗಬನ್” ಮುಂತಾದ ಕಾದಂಬರಿಗಳು ಸಾಮಾಜಿಕ ಜೀವನದ ನಿಜವಾದ ವಾಸ್ತವದ ಚಿತ್ರಣದ ಬಗ್ಗೆ ಹೇಳಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ. ಮಂಜುಳಾ ಚೌವ್ಹಾಣ ಮಾತನಾಡಿ, ಹಿಂದಿ ಭಾಷೆಯಲ್ಲಿ ಶಾಯರಿ ಅತ್ಯಂತ ಪ್ರಮುಖವಾಗಿದೆ, ಏಕೆಂದರೆ ಇದು ಕವಿಗಳ ಭಾವನೆಗಳನ್ನು ವ್ಯಕ್ತಪಡಿಸಲು, ಕಾವ್ಯವನ್ನು ಸಂಕ್ಷಿಪ್ತ ರೂಪದಲ್ಲಿ ಪ್ರಸ್ತುತಪಡಿಸಲು ಮತ್ತು ಪ್ರೀತಿ, ದುಃಖ, ಸಂತೋಷ ಮತ್ತು ನೋವಿನಂತಹ ಮಾನವ ಭಾವನೆಗಳನ್ನು ಆಳವಾಗಿ ವಿವರಿಸಲು ಒಂದು ಪರಿಣಾಮಕಾರಿ ಮಾರ್ಗವಾಗಿದೆ ಎಂದರು.
ಸಂಗಮೇಶ್ವರ ಸಂಸ್ಥೆಯ ನೀರ್ದೆಶಕ ಅಶೋಕ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿಯಲ್ಲಿ ಘನತೆ, ಹೆಮ್ಮೆ ಮತ್ತು ಗೌರವವನ್ನು ಸೂಚಿಸಲು ಆನ್ – ಬಾನ್ – ಶಾನ್ ಎಂಬ ಪದಗುಚ್ಛವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ವ್ಯಕ್ತಿ ಅಥವಾ ಸಮುದಾಯಕ್ಕೆ ಸಂಬಂಧಿಸಿದ ಗೌರವ ಮತ್ತು ಭವ್ಯತೆಯ ಭಾವವನ್ನು ಸೂಚಿಸುತ್ತದೆ.
ಹಿಂದಿ ವಿಭಾಗದ ಅಧ್ಯಕ್ಷರು ಹಾಗೂ ಐಕ್ಯುಎಸಿ ಸಂಯೋಜಕರಾದ ಡಾ. ಎಸ್ .ಎಸ್ .ದೇಸಾಯಿ ಹಿಂದಿ ಭಾಷೆಯ ಮಹತ್ವ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಸಂಗಮೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ. ರಾಠೋಡ, ಆಡಳಿತಾಧಿಕಾರಿ ಡಾ .ಎಸ್.ಎಸ್.ಚೋರಗಿ, ಸಮಸ್ತ ಸಿಬ್ಬಂದಿ ವರ್ಗ ಹಾಗೂ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.