ಲೇಖನ
– ಮಲ್ಲಪ್ಪ ಸಿ. ಖೊದ್ನಾಪೂರ(ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಐನಸ್ಟೀನ್ ಅವರು “ತಾಳ್ಮೆ ದುರ್ಬಲತೆಯಲ್ಲ, ಮನುಷ್ಯನನ್ನು ದೀರ್ಘ ಕಾಲ ಸ್ಥಿರವಾಗಿ ನಿಲ್ಲಿಸುವ ಪ್ರಬಲವಾದ ಶಕ್ತಿ” ಎಂದು ಹೇಳಿದ್ದಾರೆ. ಬದುಕಿನಲ್ಲಿ ಯಶಸ್ಸು ಎನ್ನವುದು ರಾತ್ರಿ ಬೆಳಗಾಗುವುದರೊಳಗೆ ದೊರೆಯುವಂತದಲ್ಲ. ಅದು ಹಲವಾರು ವರ್ಷಗಳ ಅವಿರತ ಪ್ರಯತ್ನ, ಸಾಧನೆಯ ಫಲ ಮತ್ತು ಶ್ರಮ ವಹಿಸುವಿಕೆಯಿಂದ ಲಭಿಸುತ್ತದೆ. ಅದಕ್ಕೆ ಆ ಯಶಸ್ಸು ಪಡೆಯಲು ಆ ವ್ಯಕ್ತಿಯಲ್ಲಿ ಇರಬೇಕಾದದ್ದು ತಾಳ್ಮೆ. ಅದಕ್ಕಂತಲೇ ಹಿರಿಯರು ‘ತಾಳಿದವನು ಬಾಳಿಯಾನು’ ಎಂದು ಹೇಳಿದ್ದಾರೆ. ಬದುಕೆಂಬುದು ಒಂದು ಸಾಗರವಿದ್ದಂತೆ. ಅದರಲ್ಲಿ ಸಮಸ್ಯೆಗಳು, ಸವಾಲುಗಳು ಅಲೆಗಳಂತೆ ಒಂದರ ಮೇಲೊಂದರಂತೆ ಬರುತ್ತಲೇ ಇರುತ್ತವೆ. ಅವೆಲ್ಲವುಗಳನ್ನು ದುರಿಸಿ ಮುಂದೆ ಗುರಿಯತ್ತ ಸಾಗಬೇಕಾದರೆ ತಾಳ್ಮೆ ಅತೀ ಅಗತ್ಯವಾಗಿದೆ. ಗೌತುಮ ಬುದ್ಧ ಅವರು “ತಾಳ್ಮೆ ಎಂದರೆ ನಾವು ಗುರಿಯ ಬೆನ್ನು ಹತ್ತಿ ಹೊರಟಾಗ ಬಂದೆರಗುವ ಸಂಕಷ್ಟಗಳನ್ನು ಹೇಗೆ ಸಮರ್ಥವಾಗಿ ಎದುರಿಸುತ್ತೇವೆ ಎಂಬುದಲ್ಲ, ಹೊರತು ಆ ಸಂದರ್ಭದಲ್ಲಿ ನಾವು ತೋರುವ ಪ್ರತಿಕ್ರಿಯೆ ಮತ್ತು ಶಾಂತ-ಮುಕ್ತ ಮನಸ್ಸಿನಿಂದ ಆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ಕಾಯುವ ಪ್ರತಿಯೊಂದು ಕ್ಷಣ ಮತ್ತು ಅನುಸರಿಸುವ ತಂತ್ರಗಾರಿಕೆಯಾಗಿದೆ” ಎಂದು ಹೇಳಿದ್ದಾರೆ.
ಪ್ರತಿ ಸಮಸ್ಯೆಗೆ ಒಂದಲ್ಲ ಒಂದು ಪರಿಹಾರ ಇದ್ದೇ ಇರುತ್ತದೆ ಎಂದು ಭಾವಿಸಿ ಮುನ್ನಡೆದರೆ ನಮ್ಮಲ್ಲಿ ನಂಬಿಕೆ ನೆಲೆಸುತ್ತದೆ. ಭರವಶೆಯು ಮೂಡುತ್ತದೆ. ಅದುವೇ ಬಾಳಿನ ಯಶಸ್ಸಿಗೆ ಮುನ್ನುಡಿ ಬರೆಯುತ್ತದೆ. ಸೋತಾ ಕುಗ್ಗದೇ ಗೆದ್ದಾಗ ಹಿಗ್ಗದೇ ಎರಡುಗಳನ್ನು ಸಮಭಾವದಿಂದ ಸ್ವೀಕರಿಸಬೇಕು. ಸೋತರೆ ಅಥವಾ ಪರಾಜಯವನ್ನು ಕಂಡರೆ ದೃತಿಗೆಡದೆ, ಸೋಲಿನಿಂದ ಕಲಿತ ಪಾಠ ಮತ್ತು ಮಾಡಿದ ಪ್ರತಿಯೊಂದು ಪ್ರಯತ್ನಗಳೆಲ್ಲವೂ ನನ್ನ ಮುಂದಿನ ಗೆಲುವಿನ ದಾರಿಗೆ ದಿಕ್ಸೂಚಿಯಾಗಬಲ್ಲದು ಎಂಬುದನ್ನು ಅರಿತು ಒಂದು ಕ್ಷಣ ತಾಳ್ಮೆಯಿಂದ ಇರಬೇಕು. ಗುರಿಯ ಸಾಧನೆಯತ್ತ ನಾವು ಕೈಗೊಂಡ ಪ್ರತಿಯೊಂದು ಸಣ್ಣ ಪ್ರಯತ್ನವು ನಮ್ಮನ್ನು ಇನ್ನಷ್ಟು ಕಠಿಣ ಪರಿಶ್ರಮಪಡುವಂತೆ ಮತ್ತು ದೃಢ ಸಂಕಲ್ಪದೊಂದಿಗೆ ಮುನ್ನಗ್ಗುವಂತೆ ಭವಿಷ್ಯದ ದಾರಿ ತೋರುತ್ತವೆ.
ನಮ್ಮ ಜೀವನದಲ್ಲೂ ಕಷ್ಟಗಳು ಎದುರಾಗಬಹುದು. ಅವುಗಳ ನಂತರವೇ ಒಳ್ಳೆಯ ದಿನಗಳು ಬರುತ್ತವೆ ಎಂಬ ಭರವಶೆಯನ್ನು ಹೊಂದಿರಬೇಕು. ಅ ಎಲ್ಲ ಸಂಕಷ್ಟಗಳನ್ನು ಸತತ ಪ್ರಯತ್ನ, ದೃಢ ಸಂಕಲ್ಪ ಮತ್ತು ಸಾಧಿಸಿಯೇ ತೀರುತ್ತೇನೆಂಬ ಅಚಲ ವಿಶ್ವಾಸದೊಂದಿಗೆ ಮುನ್ನಡೆದರೆ ಖಂಡಿತವಾಗಿ ಕೊನೆಗೆ ನಮಗೆ ಐಶಸ್ಸು ಲಭಿಸುತ್ತದೆ. ಅಲ್ಲಿಯವರೆಗೆ ಬೇಕಾಗಿರೋದು ‘ತಾಳ್ಮೆ’. ಅದಕ್ಕೆ ಹಿರಿಯರು ಹೇಳುವಂತೆ ‘ಸೋಲು ಕಣ್ಮುಂದೆ ಇದ್ರೆ ಗೆಲುವು ಆ ಸೋಲಿನ ಬೆನ್ನ ಹಿಂದೆಯೇ ಇರುತ್ತದೆ. ಅಲ್ಲಿಯವರೆಗೆ ನಮ್ಮಲ್ಲಿ ತಾಳ್ಮೆ ಇರಬೇಕಷ್ಟೇ’. ಈ ಎಲ್ಲದಕ್ಕೂ ನಮ್ಮ ಮನೋಭಾವವೇ ಮೂಲ. ನಾವು ಇಂದು ಏನು ಅಂದುಕೊಳ್ಳುತ್ತೇವೆಯೋ ನಾಳೆ ಅದನ್ನೇ ಆಗುತ್ತೇವೆ. ಹೀಗೆ ಮನೋಭಾವದಂತೆ ನಮ್ಮಲ್ಲಿರುವ ಶಕ್ತಿ-ಸಾಮರ್ಥ್ಯಗಳು ಬಲಗೊಳ್ಳುತ್ತೇವೆ. ನಾನು ಸಮರ್ಥ, ನನ್ನಲ್ಲಿ ಶಕ್ತಿ-ಸಾಮರ್ಥ್ಯವಿದೆ, ನಾನು ಹಿಡಿದ ಕಾರ್ಯವನ್ನು ಮಾಡಬಲ್ಲೆ, ಇದು ನನಗೆ ಮತ್ತು ನನ್ನಿಂದಲೇ ಮಾತ್ರ ಸಾಧ್ಯ ಎಂಬಂತಹ ಧನಾತ್ಮಕ ಅಲೋಚನೆ ಮತ್ತು ಆತ್ಮಬಲಗಳೇ ನಮ್ಮನ್ನು ಯಶಸ್ಸಿನತ್ತ ಸಾಗಲು ಸಹಕಾರಿಯಾಗಬಲ್ಲವು.
ಕೊನೆಯ ನುಡಿ

“ಕಾಲಾಯ ತಸ್ಮೈನಮಃ” ಸಮಯನೇ ಎಲ್ಲದಕ್ಕೂ ಉತ್ತರ ಕೊಡುತ್ತೆ. ಅಲ್ಲಿಯವರೆಗೆ ಕಾಯುವ ತಾಳ್ಮೆ ಇರಬೇಕಷ್ಟೆ. ಪ್ರತಿಯೊಂದು ತಪ್ಪು-ಸೋಲು ನಮಗೆ ಒಳ್ಳೆಯ ಅನುಭವವನ್ನು ನೀಡುತ್ತದೆ. ಆ ಸೋಲಿತ ಕಲಿತ ಪಾಠವು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಮುಂದಿನ ಸಾಧನೆಯ ಪಥದಲ್ಲಿ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ರಹದಾರಿಯಾಗುತ್ತದೆ. ಅಮೇರಿಕಾದ ಮಾಜಿ ಅಧ್ಯಕ್ಷ ವಿನಸ್ಟಂಟ್ ಚರ್ಚಿಲ್ ಅವರು “ಯಶಸ್ಸು ಎಂಬುದು ಅಂತಿಮವಲ್ಲ, ಸೋಲೆಂಬುದು ಯಾರ ಹಣೆಬರಹವೇನಲ್ಲ. ಪ್ರತಿ ಸೋಲಿನಿಂದ ಕಲಿತ ಪಾಠ ಮತ್ತು ಪಡೆದ ಅನುಭವಗಳು ಸೋಲನ್ನು ಗೆಲುವನ್ನಾಗಿ ಪರಿವರ್ತಿಸಲು ಸಹಕಾರಿ. ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ.
ಆದ್ದರಿಂದ ಜೀವನದಲ್ಲಿ ಎಂತಹ ತೊಂದರೆ, ಸಂಕಷ್ಟ, ನೋವು-ನಲಿವು, ಸಮಸ್ಯೆ ಎದುರಾದರೂ ನಾವು ಧೃತಿಗೆಡದೇ, ಎದೆಗುಂದದೆ ತಾಳ್ಮೆಯಿಂದ ಇದ್ದರೆ ಅದು ತನ್ನಷ್ಟಕ್ಕೆ ತಾನೇ ಪರಿಹಾರಗೊಳ್ಳುವುದು. ಆ ಸಂದರ್ಭದಲ್ಲಿ ತಾಳ್ಮೆಯಿಂದ ದೃಢವಾದ ಹೆಜ್ಜೆಗಳನ್ನಿಟ್ಟರೆ ಮುಂದಿನ ಆ ಒಂದು ಹೆಜ್ಜೆಯು ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆಯಾಗಿರಬಹುದು. ಅದಕ್ಕಾಗಿ ನಾವು ಜೀವನದಲ್ಲಿ ಎನೇ ಬರಲಿ ನನ್ನ ಹೋರಾಟ ನಿಲ್ಲದು ಎಂಬ ಸದೃಢ ಮನೋಭಾವ ಮತ್ತು ತಾಳ್ಮೆಯೊಂದಿಗೆ ಮುನ್ನಡೆದಾಗ ಅದು ಯಶಸ್ಸಿನ ಮೂಲಮಂತ್ರವಾಗವುದರಲ್ಲಿ ಯಾವುದೇ ಸಂದೇಹವಿಲ್ಲ.
