ಉದಯರಶ್ಮಿ ದಿನಪತ್ರಿಕೆ
ಇಂಡಿ: ಪ್ರತಿಯೊಬ್ಬರೂ ಜ್ಞಾನಿಗಳಾಗಬೇಕೇ ಹೊರತು ಅಜ್ಞಾನಿಗಳಾಗಬಾರದು. ಚನ್ನಬಸವಣ್ಣನವರ ವಚನಗಳನ್ನು ಓದುತ್ತಿದ್ದರೆ ಉತ್ತಮ ಸಂಸ್ಕಾರಗಳು ಒಡಮೂಡಿ,ಉತ್ತಮ ವ್ಯಕ್ತಿತ್ವ ಅರಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಂಶೋಧಕ ಡಿ ಎನ್ ಅಕ್ಕಿ ಹೇಳಿದರು.
ಗುರುವಾರದಂದು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಕದಳಿ ವೇದಿಕೆ ಯುವ ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದಾಚಾರ, ಸದ್ವಿಚಾರಗಳನ್ನು ತಿಳಿಯುವುದು. ಸತ್ಯವನ್ನೇ ನುಡಿಯಬೇಕು, ಹಿಂಸೆಯನ್ನು ಮಾಡಬಾರದು, ಪರೋಪಕಾರ ಬುದ್ಧಿ ಇರಬೇಕು, ಕಾಯಕ ಶ್ರದ್ಧೆ ಬೆಳೆಸಿಕೊಳ್ಳಬೇಕು, ಯಾರಿಗೂ ಕೇಡು ಬಯಸಬಾರದು ಎಂಬ ಚನ್ನಬಸವಣ್ಣನವರ ಜೀವನ ಸಂದೇಶ ಇಂದಿನ ಯುವಪೀಳಿಗೆಗೆ ಪ್ರೇರಕವಾಗಿದೆ ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪನ್ಯಾಸ ನೀಡುತ್ತಾ ಮಾತನಾಡಿ, ಅರಿವು ಮತ್ತು ಆಚಾರದ ಮೂಲಕ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದ ಚನ್ನಬಸವಣ್ಣನವರ ಬದುಕು ಬಹು ವಿಶಿಷ್ಟವಾದುದು. ಎಲ್ಲ ವರ್ಗದ, ಎಲ್ಲ ವಯಸ್ಸಿನ ಜನರಿಗೆ ಚನ್ನಬಸವಣ್ಣನವರ ಬದುಕು ಮತ್ತು ವಚನಗಳು ಹೆಗ್ಗುರುತು ಆಗಬೇಕಿದೆ ಎಂದು ಹೇಳಿದರು.
ಅರಿವು, ಆಚಾರ, ಅನುಭಾವಗಳ ಸಂಗಮವಾಗಿದ್ದರೆ ಹಿರಿಯತನ ತನ್ನಿಂದ ತಾನೇ ಬರುವುದು ಎನ್ನುವ ಚನ್ನಬಸವಣ್ಣನವರು ವ್ಯಕ್ತಿ ಸಂಸ್ಕಾರವಂತನಾಗಿ ತನ್ನಲ್ಲಿರುವ ಅವಗುಣಗಳನ್ನು ಕಳೆದುಕೊಂಡು ಸಾತ್ವಿಕ ಬದುಕು ಸಾಗಿಸಬೇಕೆನ್ನುವದು ಅವರ ಸಂದೇಶವಾಗಿದೆ ಎಂದು ಹೇಳಿದರು.
ಹಿರಿಯ ಉಪನ್ಯಾಸಕ ಜಿ ಎಸ್ ಭಾಗೇಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಎಸ್ ಪಾಟೀಲ ಆಶಯ ನುಡಿಗಳನ್ನಾಡಿದರು.
ಇಂಡಿ ಲಾಯನ್ಸ್ ಕ್ಲಬ್ ಅಧ್ಯಕ್ಷ ಐ ಬಿ ಸುರಪುರ, ಉಪಾಧ್ಯಕ್ಷ ಎಚ್ ಎಸ್ ಎಳೆಗಾಂವ, ಕದಳಿ ವೇದಿಕೆ ಉಪಾಧ್ಯಕ್ಷೆ ರಾಜಶ್ರೀ ಕ್ಷತ್ರಿ, ಡಾ ಸತೀಶ ಈಶ್ವರಗೊಂಡ, ಡಾ ಪ್ರಭು ಭೈರಜಿ, ಎಸ್ ಎಫ್ ಭೈರಜಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ನಿವೃತ್ತ ನೌಕರ ಪರುತಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಉಪನ್ಯಾಸಕ ರಮೇಶ ಮೇತ್ರಿ ನಿರೂಪಿಸಿದರು.
ಬಿ ಕೆ ಶಿವೂರ ಸ್ವಾಗತಿಸಿ, ವಂದಿಸಿದರು. ಸಂತೋಷ ಹಟ್ಟಿ, ಭಾಗ್ಯಜ್ಯೋತಿ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.