ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜಕ್ಕೆ ಇಂದು ಮಾನವೀಯತೆ, ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಅಗತ್ಯವಿದ್ದು ಭಾವಿ ಶಿಕ್ಷಕರು ಈ ದಿಶೆಯಲ್ಲಿ ಸನ್ನದ್ಧರಾಗಬೇಕು ಎಂದು ಗದಗ- ಹುಲಕೋಟಿ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನದ ಶ್ರೀ ಸ್ವಾಮಿ ಶಿವಪ್ರಿಯಾನಂದಜಿ ಮಹಾರಾಜ ಹೇಳಿದ್ದಾರೆ.
ಬುಧವಾರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 45ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದೀಪದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಸಮಾಜಕ್ಕೆ ಸಮಭಾವದ, ಸಮಸಮಾಜ ಮತ್ತು ದೇಶದ ಐಕ್ಯತೆಯನ್ನು ಉಂಟುಮಾಡುವ ಶಿಕ್ಷಕರು ಬೇಕಾಗಿದ್ದಾರೆ. ಕಾಯಕದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ, ಸಚ್ಚಾರಿತ್ರ್ಯ, ಸದ್ಗುಣ, ಜ್ಞಾನಭರಿತ ಶಿಕ್ಷಕರು ತಾವಾಗಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ. ಎಲ್. ಲಕ್ಕಣ್ಣವರ ಮಾತನಾಡಿ, ಪ್ರಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕು. ನಿರಂತರವಾಗಿ ಓದುವ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಜ್ಞಾನವನ್ನು ಹೊಂದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆದರದೆ ಮೆಟ್ಟಿ ನಿಲ್ಲುವ ಮನೋಭಾವದೊಂದಿಗೆ ನಿರಂತರ ಪ್ರಯತ್ನಶೀಲರಾಗಬೇಕು ಎಂದು ಹೇಳಿದರು.
ಬಿ.ಎಲ್.ಡಿ. ಇ ಸಂಸ್ಥೆಯ ಎಸ್. ಎಸ್. ಆವರಣದ ಆಡಳಿತಾಧಿಕಾರಿ ಪ್ರೊ. ಐ. ಎಸ್. ಕಾಳಪ್ಪನವರ ಮಾತನಾಡಿ, ಮೈತುಂಬ ದುಡಿಯುವ, ಹೊಟ್ಟೆ ತುಂಬ ಉಣ್ಣುವ, ಕಣ್ತುಂಬ ನಿದ್ರಿಸುವ ತ್ರಿಸೂತ್ರಗಳನ್ನು ಅಳವಡಿಸಿಕೊಂಡು ಆರೋಗ್ಯವಂತ ಶಿಕ್ಷಕರಾಗಿ ಸದಾ ಕ್ರಿಯಾಶೀಲ, ಶಿಕ್ಷಣದ ಅಭ್ಯುದಯಕ್ಕೆ ದುಡಿಯುವ ಶಿಕ್ಷಕರು ನೀವಾಗಬೇಕು ಎಂದು ಹೇಳಿದರು.
ಸಹ ಪ್ರಾಧ್ಯಾಪಕ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಹಿರೇಮಠ, ಸಹಪಾಧ್ಯಾಪಕ ಡಾ. ಜೆ. ಎಸ್. ಪಟ್ಟಣಶೆಟ್ಟಿ, ಡಾ. ಬಿ. ಎಸ್. ಹಿರೇಮಠ, ಎಸ್. ಎಸ್. ಪಾಟೀಲ, ಪಿ. ಡಿ. ಮುಲ್ತಾನಿ, ದೈಹಿಕ ಶಿಕ್ಷಣ ನಿರ್ದೇಶಕ ಎಂ. ಪಿ. ಕುಪ್ಪಿ, ಬೋಧಕ, ಬೋಧಕರ ಹೊರತಾದ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಸಹಪ್ರಾಧ್ಯಾಪಕ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದ ಚೇರಮನ್ ಡಾ. ಎಂ. ಬಿ. ಕೋರಿ ವರದಿ ವಾಚಿಸಿದರು.
ಕಾಲೇಜಿನ ಪ್ರಾಚಾರ್ಯೆ ಭಾರತಿ ವೈ. ಖಾಸನೀಸ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ. ಎಸ್. ಪಿ. ಶೇಗುಣಸಿ ಮತ್ತು ಸಂಶೋಧನೆ ವಿದ್ಯಾರ್ಥಿಯಾದ ಸುಜಾತ ಮತ್ತಿವಾಡ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ವೈಷ್ಣವಿ ಹಡಪದ ವಂದಿಸಿದರು.