ಮಾ.31ರಿಂದ ಏ.15 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ | 147 ಪರೀಕ್ಷಾ ಕೇಂದ್ರಗಳು | 40446 ಪರೀಕ್ಷಾರ್ಥಿಗಳು
ವಿಜಯಪುರ: ಜಿಲ್ಲೆಯಲ್ಲಿ ಇದೇ ಮಾ.31 ರಿಂದ ಏಪ್ರಿಲ್ 15ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆ ಪಾರದರ್ಶಕ ಹಾಗೂ ಸುಸೂತ್ರವಾಗಿ ನಡೆಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಒಟ್ಟು 147 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಯಾವುದೇ ರೀತಿಯ ಅನಾನೂಕೂಲವಾಗದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಪಾರದರ್ಶಕ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮಹತ್ವದ ಘಟ್ಟವಾಗಿದೆ. ಅವರ ಜೀವನ ಅಭ್ಯುದಯ, ಏಳಿಗೆಗೆ ಹೆಜ್ಜೆಯಾಗಿದೆ. ನಕಲುಮುಕ್ತವಾಗಿ ಪರೀಕ್ಷೆಗಳನ್ನು ನಡೆಸಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಈ ಪರೀಕ್ಷೆಗಳು ಅತ್ಯಂತ ಮಹತ್ವವಾಗಿರುವುದರಿಂದ ಯಾವುದೇ ರೀತಿಯ ಲೋಪಗಳಿಗೆ ಅವಕಾಶ ನೀಡಬಾರದು. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ವ್ಯವಸ್ಥಿತವಾಗಿ ವಿತರಣೆಯಾಗಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಪರೀಕ್ಷೆಗೆ ನಿಯೋಜಿಸಿದ ಸಿಬ್ಬಂದಿಗಳು ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರದ ಅಧೀಕ್ಷಕರು ಪರೀಕ್ಷೆಗೆ ಅಚ್ಚುಕಟ್ಟಾಗಿ ನಡೆಯುವ ಬಗ್ಗೆ, ಪ್ರಶ್ನೆ ಪತ್ರಿಕೆ ವಿತರಣೆ, ಉತ್ತರ ಪತ್ರಿಕೆ ಅಚ್ಚುಕಟ್ಟಾಗಿ ಸಂಗ್ರಹ ಮಾಡುವುದರ ಸೂಕ್ತ ತಂಡಕ್ಕೆ ಒಪ್ಪಿಸಬೇಕು ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳಿಗೆ ನೀಡಲಾದ ಸೂಚನೆ-ನಿರ್ದೇಶನಗಳನ್ನು ಪಾಲಿಸಬೇಕು ಎಂದು ಹೇಳಿದರು.
ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಕಂಡು ಬಂದಲ್ಲಿ ಪರೀಕ್ಷಾ ಕೇಂದ್ರದ ನಿಯೋಜಿತ ಅಧಿಕಾರಿ ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.