ರೂ.5.64 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ
ತಾಳಿಕೋಟಿ: ನಾನು ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಕೆಲವು ಸ್ವಪಕ್ಷೀಯ ಮುಖಂಡರು ಹೊಟ್ಟೆಕಿಚ್ಚಿನಿಂದ ನನ್ನನ್ನು ಟೀಕಿಸುತ್ತಿದ್ದಾರೆ. ಕೇವಲ ಸುದ್ದಿಗೋಷ್ಠಿ ಮಾಡಿ ಇನ್ನೊಬ್ಬರನ್ನು ಟೀಕಿಸುವವರೆಂದೂ ದೊಡ್ಡವರಾಗುವದಿಲ್ಲ. ಕುತಂತ್ರ ರಾಜಕಾರಣ ಮಾಡುವದನ್ನು ನಿಲ್ಲಿಸಿ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಮತಕ್ಷೇತ್ರದ ತಾರನಾಳ ಗ್ರಾಮದಲ್ಲಿ ರೂ. ೨೩೪ ಲಕ್ಷ ಮೊತ್ತದ ತಾರನಾಳದಿಂದ ಮುದ್ದೇಬಿಹಾಳದವರೆಗಿನ ರಸ್ತೆ ಸುಧಾರಣೆ ರೂ. ೨೫೪ ಲಕ್ಷ ಮೊತ್ತದ ಕೆರೆ ಮೇಲಿನ ರಸ್ತೆ ಅಭಿವೃದ್ಧಿ ಹಾಗೂ ರೂ. ೮೨ ಲಕ್ಷ ಮೊತ್ತದ ತಾರನಾಳ ಸಣ್ಣ ನೀರಾವರಿ ಕೆರೆಯ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಇವತ್ತು ಈ ಗ್ರಾಮದಲ್ಲಿ ಸುಮಾರು ೫.೬೪ ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇನೆ. ಯುಗಾದಿಯ ಈ ಸಂಭ್ರಮದ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಇದು ಎಂದೂ ನಿಲ್ಲದು. ಸುಮಾರು ೪೩೦೦ ಕೋಟಿ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. ಎಲ್ಲ ಗ್ರಾಮಗಳಿಗೆ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀಡು, ಉತ್ತಮ ರಸ್ತೆಗಳು, ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆರೋಗ್ಯ ಹಾಗೂ ವಿಶೇಷವಾಗಿ ಶಿಕ್ಷಣಕ್ಕೆ ಒತ್ತುಕೊಟ್ಟು ಕೆಲಸ ಮಾಡಿದ್ದೇನೆ. ಇನ್ನು ಕೇವಲ ಒಂದು ವರ್ಷದಲ್ಲಿ ಈ ಕ್ಷೇತ್ರ ಸಂಪೂರ್ಣ ನೀರಾವರಿಗೆ ಒಳಪಡಲಿದೆ. ಕೇವಲ ರಾಜಕೀಯ ದುರುದ್ದೇಶಕ್ಕಾಗಿ ವಿರೋಧಿಸುವವರ ಮಾತಿಗೆ ಬೆಲೆ ಕೊಡಬೇಡಿ ಅಭಿವೃದ್ಧಿ ನೋಡಿ ತೀರ್ಮಾನಿಸಿ ಹಿಂದಿನ ಶಾಸಕರು ೨೫ ವರ್ಷಗಳಲ್ಲಿ ಏನು ಮಾಡಿದ್ದಾರೆ. ನಾನು ಕೇವಲ ಈ ೫ ವರ್ಷದಲ್ಲಿ ಮಾಡಿದ ಕೆಲಸಗಳೇನು ಎಂಬುದು ಸ್ವತಃ ನೀವೇ ಯೋಚಿಸಿ ನಿರ್ಧಾರ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.