-ಸಂತೋಷ ಎಸ್ ಬಂಡೆ ಶಿಕ್ಷಕರು, ನಾಗಠಾಣ
ಕನ್ನಡ ಚಿತ್ರರಂಗಕ್ಕೆ ತನ್ನದೆ ಆದ ಇತಿಹಾಸವಿದೆ. ಅದು ಇತ್ತೀಚಿನ ದಿನಗಳಲ್ಲಿ ಸಾಧಿಸಿರುವ ಸಾಧನೆ ಕಡಿಮೆಯದೇನಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಸಾಧಾರಣ ಪ್ರತಿಭೆ ತೋರಿದ ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಚಿತ್ರಸಾಹಿತಿಗಳು ಆಗಿಹೋಗಿದ್ದಾರೆ. ಅವರಲ್ಲಿ ದ್ವಾರಕೀಶ ಕೂಡ ಒಬ್ಬರಾಗಿ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ,ನಿರ್ಮಾಪಕ ದ್ವಾರಕೀಶ ಅವರು 1942 ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದರು. ಬಂಗ್ಲೆ ಶಾಮರಾವ ದ್ವಾರಕಾನಾಥ ಎಂಬುದು ದ್ವಾರಕೀಶ ಅವರ ನಿಜನಾಮ. ಇವರ ತಂದೆ ಶಾಮರಾವ ಮತ್ತು ತಾಯಿ ಜಯಮ್ಮ.
ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಾರದ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ಮುಗಿಸಿ, ನಂತರ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು.1963ರಲ್ಲಿ ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು.
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.1966ರಲ್ಲಿ ತುಂಗಾ ಬ್ಯಾನರ್ಸ್‌ನಡಿ ಮಮತೆಯ ಬಂಧನ ಎಂಬ ಸಿನಿಮಾದ ಸಹ ನಿರ್ಮಾಪಕರಾದರು. 1969ರಲ್ಲಿ ಮೇಯರ್ ಮುತ್ತಣ್ಣ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ಮಾಪಕರಾದರು. ಇದು ಡಾ. ರಾಜಕುಮಾರ ಮತ್ತು ಭಾರತಿ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಅತ್ಯುತ್ತಮ ಸಿನಿಮಾ. ಮೇಯರ್ ಮುತ್ತಣ್ಣದ ಬಳಿಕ ಸ್ಯಾಂಡಲ್‌ವುಡ್‌ಗೆ ಹಲವು ಯಶಸ್ವಿ ಚಲನಚಿತ್ರಗಳನ್ನು ನೀಡಿದ ಅವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, 53 ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ದ್ವಾರಕೀಶಗೆ ಸಲ್ಲುತ್ತದೆ.
ನಟ, ನಿರ್ದೇಶಕ, ನಿರ್ಮಾಪಕರಾಗಿ ಹಲವಾರು ಚಿತ್ರಗಳ ಕೊಡುಗೆ ನೀಡಿರುವ ಅವರು ಕನ್ನಡ ಚಿತ್ರರಂಗಕ್ಕೆ ಕಲಾಸೇವೆ ಸಲ್ಲಿಸಿದ್ದಾರೆ. ಅವರು ಕನ್ನಡ ಜನತೆಗೆ ಜನಪ್ರಿಯ ರಾಜಕುಳ್ಳ ಎಂದೇ ಜನಪ್ರಿಯರು.
ದ್ವಾರಕೀಶ ಅವರು ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟರಾಗಿ ಕನ್ನಡ ಸಿನಿ ಅಭಿಮಾನಿಗಳ ಹೃದಯದಲ್ಲಿ ಕುಳ್ಳನಾಗಿ, ಕಿಟ್ಟಿಯಾಗಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದರು. ದಿವಂಗತ ನಟ ವಿಷ್ಣುವರ್ಧನ ಮತ್ತು ದ್ವಾರಕೀಶ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರೂ ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ-ವಿಷ್ಣು ಅಭಿನಯದ ಬಹುತೇಕ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು.
ಜನ್ಮರಹಸ್ಯ, ಮಂಕುತಿಮ್ಮ, ಪೆದ್ದ ಗೆದ್ದ, ಕಿಟ್ಟು ಪುಟ್ಟು,
ಸಿಂಗಾಪುರದಲ್ಲಿ ರಾಜಾಕುಳ್ಳ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶೀಲಾ, ಆಪ್ತಮಿತ್ರ, ಭಲೇ ಹುಡುಗ, ಬಂಗಾರದ ಮನುಷ್ಯ,
ಗಲಾಟೆ ಸಂಸಾರ,ಪ್ರಚಂಡಕುಳ್ಳ, ಆಪ್ತಮಿತ್ರ, ಗುರುಶಿಷ್ಯರು,
ಕಳ್ಳ ಕುಳ್ಳ, ಮುದ್ದಿನ ಮಾವ, ರಾಯರು ಬಂದರು ಮಾವನ ಮನೆಗೆ, ಆಟಗಾರ, ಚೌಕ, ಪ್ರೀತಿ ಮಾಡು ತಮಾಷೆ ನೋಡು ಮುಂತಾದ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಅದರಲ್ಲಿಯೂ ಗುರು ಶಿಷ್ಯರು ಚಿತ್ರದಲ್ಲಿ ಇವರ ಅಭಿನಯ ಇಂದಿಗೂ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿದ್ದು, ಚಿತ್ರದ ಕೆಲವು ದೃಶ್ಯಗಳನ್ನು ನೆನಪಿಸಿಕೊಂಡು ಬಿದ್ದು ಬಿದ್ದು ನಗುವವರಿದ್ದಾರೆ.
ಏಪ್ರಿಲ್ 26, 1967 ರಂದು ದ್ವಾರಕೀಶ ತಮ್ಮ ಸಂಬಂಧಿಯೇ ಆದ ಅಂಬುಜಾ ಅವರನ್ನು ಮದುವೆಯಾಗಿ ನಾಲ್ಕು ಗಂಡು ಮಕ್ಕಳಿಗೆ ತಂದೆಯಾದರು. ಮೊದಲನೇ ಮಗ ತಂದೆಯೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರೆ, ಉಳಿದವರು ಒಂದೆರಡು ಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ಈಗ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಶೈಲಜಾ ಎಂಬುವರನ್ನೂ ಕೂಡ ಎರಡನೇ ಮದುವೆ ಮಾಡಿಕೊಂಡಿದ್ದರು.
ನಟ ದ್ವಾರಕೀಶ ಅವರು ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅವರನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿದೆ.
ಡಾ.ರಾಜಕುಮಾರ, ವಿಷ್ಣುವರ್ಧನ, ಅಂಬರೀಶ, ಬಾಲಕೃಷ್ಣ, ಅಶ್ವಥ ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರುಗಳ ಜೊತೆ ಅಭಿನಯಿಸಿದ ಕೀರ್ತಿ ದ್ವಾರಕೀಶ ಅವರಿಗೆ ಸಲ್ಲುತ್ತದೆ.
ಅವರು 16 ಏಪ್ರಿಲ್ 2024 ರಂದು ತಮ್ಮ 81 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅವರು ಇನ್ನು ನೆನಪು ಮಾತ್ರ..
– ಸಂತೋಷ ಎಸ್ ಬಂಡೆ
ಶಿಕ್ಷಕರು, ನಾಗಠಾಣ

