ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಜಿಲ್ಲೆಯಾದ್ಯಂತ ಸಹಕಾರಿ ಕ್ಷೇತ್ರವು ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಸುರಪುರ ಹಾಗೂ ಹುಣಸಗಿ ತಾಲೂಕಿನ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಇಂತಹ ತರಬೇತಿ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ವಿಶ್ವನಾಥರಡ್ಡಿ ದರ್ಶನಾಪುರ ಹೇಳಿದರು.
ಪಟ್ಟಣದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಯಾದಗಿರಿ ಹಾಗೂ ಕೃಷ್ಣಾ ಕಾಡಾ (ಸಹಕಾರ ವಿಭಾಗ) ಭೀಮರಾಯನಗುಡಿ ಇವುಗಳ ಸಂಯುಕ್ತಾಶ್ರಯದಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕುಗಳ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶನಿವಾರ ಹಮ್ಮಿಕೊಂಡ ವಿಶೇಷ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುರಪುರ ಮತ್ತು ಹುಣಸಗಿ ವ್ಯಾಪ್ತಿಯಲ್ಲಿ ಸುಮಾರು 250ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘಗಳಿದ್ದವು, ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಕ್ರಿಯವಾಗಿವೆ. ಮುಂಬರುವ ದಿನಗಳಲ್ಲಿ ಹೊಸ ನೀರು ಬಳಕೆದಾರರ ಸಂಘಗಳ ರಚನೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ರಾಮಚಂದ್ರ ಹಾಗೂ ಶಂಕರ ಅವರು ಸಹಕಾರ ಕ್ಷೇತ್ರದಲ್ಲಿ ಸುಮಾರು 150ಕ್ಕೂ ಹೆಚ್ಚು ವಿಧದ ಸಂಘಗಳ ನೊಂದಣಿಗೆ ಅವಕಾಶವಿದ್ದು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ಚಿಂಚೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ನಿರ್ದೇಶಕ ಬಾಪುಗೌಡ ಪಾಟೀಲ್ ಹುಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃಷ್ಣಾ ಕಾಡಾ ಭೂ ಅಭಿವೃದ್ಧಿ ಅಧಿಕಾರಿ ಸರಸ್ವತಿ ಎನ್., ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ ಹಾಗೂ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುದಿಗೌಡ ಮಾಲಿ ಪಾಟೀಲ್, ಆದಿತ್ಯಗೌಡ ಪೋಲಿಸ್ ಪಾಟೀಲ್, ಮಹಿಪಾಲರಡ್ಡಿ ಡಿಗ್ಗಾವಿ, ಶಾಂತಗೌಡ ಚೌಧರಿ ರವಿ ಸೊನ್ನದ್, ಸುಜಾತಾ ಮಠ, ಅನ್ನಪೂರ್ಣ, ಶರಣಬಸವ ಮಾಡೋಳೆ, ವಿರುಪಣ್ಣಗೌಡ ಹಲವರು ಉಪಸ್ಥಿತರಿದ್ದರು. ವಿವಿಧ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.
“ಯಾದಗಿರಿ ಜಿಲ್ಲೆಗೆ ಶೀಘ್ರದಲ್ಲೇ ಪ್ರತ್ಯೇಕ ಜಿಲ್ಲಾ ಸಹಕಾರ (ಡಿಸಿಸಿ) ಬ್ಯಾಂಕ್ ಮಂಜೂರಾಗಲಿದ್ದು, ಕೆಂಭಾವಿ, ಹುಣಸಗಿ, ಸೈದಾಪುರ ಹಾಗೂ ಗುರುಮಠಕಲ್ನಲ್ಲಿ ಡಿಸಿಸಿ ಬ್ಯಾಂಕಿನ ಉಪ ಶಾಖೆಗಳು ಆರಂಭವಾಗಲಿವೆ. ಯಾದಗಿರಿ ಹಿಂದುಳಿದ ಜಿಲ್ಲೆಯಾಗಿರುವುದರಿಂದ ಶೇರು ಬಂಡವಾಳವಾಗಿ 50 ಕೋಟಿ ರೂಪಾಯಿ ಧನಸಹಾಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ.”
– ಸುರೇಶ ಆರ್. ಸಜ್ಜನ
ನಿರ್ದೇಶಕರು, ಕೆವೈಡಿಸಿಸಿ ಬ್ಯಾಂಕ್

