ವಿಜಯಪುರದಲ್ಲಿ ಕಾಂಗ್ರೆಸ್ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಒತ್ತಾಯಿಸಿದರು.
ಶನಿವಾರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೇಟ್ ನೀಡಬೇಕು, ಗ್ರಾಮೀಣ ಭಾಗದಲ್ಲಿ ಅಲ್ಪಸಂಖ್ಯಾತ ನೆಲೆಯೂರಿದೆ, ಕಾಂಗ್ರೆಸ್ ಪಕ್ಷ ಪುರಸಭೆ, ನಗರಸಭೆಗಳಿಗೆ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿ ಗ್ರಾಮೀಣ ಭಾಗದಲ್ಲಿ ಯೂ ಈ ಆದ್ಯತೆ ನೀಡಬೇಕಿದೆ ಎಂದರು
ಕಳೆದ ೪೦ ವರುಷಗಳ ಇತಿಹಾಸದಲ್ಲಿ ಕೇವಲ ನಾಲ್ಕು ಜನ ಮಾತ್ರ ಜಿಲ್ಲಾ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಅದರಲ್ಲಿ ಮೂವರು ಆಯ್ಕೆಯಾಗಿದ್ದು ಜನತಾ ದಳದಿಂದ, ಓರ್ವ ಸದಸ್ಯರು ಮಾತ್ರ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ, ಜಿಲ್ಲಾ ಪಂಚಾಯತ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಬೇಕು ಎಂದರು.
ಮುಸ್ಲಿಂರಿಗೆ ಟಿಕೇಟ್ ನೀಡಿದರೆ ಉಳಿದ ಸಮುದಾಯದವರು ಮತ ಹಾಕಲ್ಲ ಎನ್ನುವುದು ಕೆಲವು ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಬೇರೂರಿದೆ, ನೀವು ಮನವೊಲಿಸಿ ವೋಟು ಹಾಕಿಸಬೇಕಲ್ಲವೇ? ಈಗ
ರಾಜಕೀಯ ಕಾಲಘಟ್ಟ ಬದಲಾಗಿದೆ, ಅಧಿಕಾರ ಹಾಗೂ ಅವಕಾಶ ದೊರಕದೇ ಹೋದರೆ ಪರ್ಯಾಯ ಪಕ್ಷಗಳತ್ತ ಯುವಜನತೆ ಮುಖ ಮಾಡುತ್ತಿದ್ದಾರೆ, ಇದಕ್ಕೆ ಅವಕಾಶ ಕೊಡಬೇಡಿ ಎಂದರು.
ಮುಸ್ಲಿಂರು ಕಾಂಗ್ರೆಸ್ ಪಕ್ಷವನ್ನು ಅವಕಾಶವಾದಿತನಕ್ಕೆ ಬೆಂಬಲಿಸುತ್ತಿಲ್ಲ, ಸಂವಿಧಾನ ರಕ್ಷಣೆ, ಏಕತೆ ರಕ್ಷಣೆಗಾಗಿ ಕಾಂಗ್ರೆಸ್ ಮುಸ್ಲಿಂರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಸಂಭವನೀಯ ಹಾಗೂ ಗೆಲುವು ಸಾಧಿಸುವ ಕ್ಷೇತ್ರಗಳ ಕುರಿತು ಅವಲೋಕಿಸಲು ಕೆಪಿಸಿಸಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದರು.
ವಿಜಯಪುರ ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಕನಿಷ್ಠ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕ್ಷೇತ್ರದಲ್ಲಾದರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೇಟ್ ನೀಡಬೇಕು ಎಂದರು.

