ವಿಜಯಪುರ ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಆಮ್ ಆದ್ಮಿ ಪಾರ್ಟಿ ಆಕ್ರೋಶ – ಒಂದು ವಾರ ಗಡುವು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಬಲೇಶ್ವರ ನಾಕಾದಿಂದ ನಾಯರಾ ಪೆಟ್ರೋಲ್ ಪಂಪ್ವರೆಗಿನ ರಸ್ತೆಯ ಒಂದು ಬದಿಯನ್ನು ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಗುಂಡಿ ತೋಡಿ ಸಂಪೂರ್ಣ ಬಂದ್ ಮಾಡಿ ಸುಮಾರು ಮೂರು ತಿಂಗಳು ಕಳೆದಿದ್ದರೂ, ಸಮಸ್ಯೆಗೆ ಪರಿಹಾರ ಕಲ್ಪಿಸದ ವಿಜಯಪುರ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಆಮ್ ಆದ್ಮಿ ಪಾರ್ಟಿ ವಿಜಯಪುರ ತೀವ್ರವಾಗಿ ಖಂಡಿಸಿದೆ.
ಆಮ್ ಆದ್ಮಿ ಪಾರ್ಟಿ ವಿಜಯಪುರದ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆಯ ಒಂದು ಬದಿ ದೀರ್ಘಕಾಲದಿಂದ ಬಂದ ಆಗಿರುವುದರಿಂದ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಅಭಿವೃದ್ಧಿ ಕಾಮಗಾರಿ ಆರಂಭಿಸಿದ ನಂತರ ಅದನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ಜವಾಬ್ದಾರಿ ಬೇಡವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಮಹಾನಗರ ಪಾಲಿಕೆ ಸ್ಪಂದಿಸುತ್ತಿಲ್ಲ, ಸಾರ್ವಜನಿಕರ ಹಿತದೃಷ್ಟಿಯಿಂದ ಆಮ್ ಆದ್ಮಿ ಪಾರ್ಟಿ ಸಾರ್ವಜನಿಕರನ್ನು ಒಳಗೊಂಡು ರಸ್ತೆ ರೋಕೋ ಆಂದೋಲನ ಮಾಡಬೇಕಾಗುತ್ತೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಯುವ ಮುಖಂಡರಾದ ನರೇಂದ್ರ ನಂದಿಕೋಲ, ಬಸಯ್ಯ ಸ್ಥಾವರಮಠ ಉಪಸ್ಥಿತರಿದ್ದರು.

