ನಾವು ಎಷ್ಟೋ ಭೇದಗಳನ್ನು ಮಾಡಿಕೊಂಡಿದ್ದೇವೆ. ಆದರೆ ಬದುಕಿನ ಅಂತಿಮ ಸತ್ಯದ ಮುಂದೆ ಇವೆಲ್ಲವೂ ಹೊರಗಿನ ಗುರುತುಗಳಷ್ಟೇ. ಇಂದು ಒಬ್ಬನಿಗೆ ಸಿಕ್ಕಿರುವ ಸ್ಥಾನ ನಾಳೆ ಮತ್ತೊಬ್ಬನಿಗೆ ಸಿಗಬಹುದು. ಇಂದು ಗೆದ್ದವನು ನಾಳೆ ಸೋಲಬಹುದು. ಇಂದು ಮೇಲಿರುವವನು ನಾಳೆ ಕೆಳಗೆ ಬರಬಹುದು. ಬದುಕಿನ ಆಟದಲ್ಲಿ ಕಾಯಿನ್‌ಗಳ ಬಣ್ಣ ಬದಲಾಗಬಹುದು; ಆದರೆ ಬೋರ್ಡ್ ಒಂದೇ.
– ಪ್ರಶಾಂತ ಕುಲಕರ್ಣಿ
ಉಪನ್ಯಾಸಕರು
ಸಿಂದಗಿ – ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಕಾಲೇಜಿನಲ್ಲಿ ದಿನವಿಡೀ ತರಗತಿಗಳು, ವಿದ್ಯಾರ್ಥಿಗಳೊಂದಿಗೆ ಪಾಠ, ಪ್ರಶ್ನೆಗಳು, ಉತ್ತರಗಳು, ದಾಖಲೆಗಳ ಕೆಲಸ… ಹೀಗೆ ಒಂದರ ಹಿಂದೆ ಒಂದರಂತೆ ಕೆಲಸಗಳು ಸಾಗುತ್ತಿರುತ್ತವೆ. ಕೆಲವೊಮ್ಮೆ ಎಷ್ಟೇ ಬ್ಯುಸಿಯಾಗಿದ್ದರೂ, ನಮ್ಮೊಳಗಿನ ಒತ್ತಡವನ್ನು ಒಂದಷ್ಟು ಕಡಿಮೆ ಮಾಡಿಕೊಳ್ಳಲು ಸಹೋದ್ಯೋಗಿಗಳೊಂದಿಗೆ ಕೆಲವು ಕ್ಷಣಗಳನ್ನು ಹಗುರವಾಗಿ ಕಳೆಯುವುದು ಕೂಡ ಅಗತ್ಯವೆನಿಸುತ್ತದೆ. ಅಂತಹ ಒಂದು ದಿನ. ಕೆಲಸದ ನಡುವೆಯೇ ನನ್ನ ಸಹೋದ್ಯೋಗಿ ಆರ್. ಎ. ಹಾಲಕೇರಿ ಸರ್, “ಸರ್, ಕೇರಂ ಆಡೋಣ” ಎಂದರು. “ಸರಿ ಸರ್” ಎಂದು ನಾನೂ ಅವರ ಜೊತೆ ಕೇರಂ ಬೋರ್ಡಿನ ಮುಂದೆ ಕುಳಿತೆ. ಕೇರಂ ಆಡುವುದು ನನಗೆ ಹೊಸ ಅನುಭವವೇನಲ್ಲ. ಆದರೆ ಆ ದಿನದ ಆಟ ಮಾತ್ರ ನನಗೆ ನಂತರ ಇಷ್ಟು ದೊಡ್ಡ ಚಿಂತನೆಯಾಗಿ ಮಾರ್ಪಡುತ್ತದೆ ಎಂದು ಆಗ ನನಗೆ ಗೊತ್ತಿರಲಿಲ್ಲ. ಕೇರಂ ಬೋರ್ಡ್ ಸಿದ್ಧವಾಯಿತು. ಕಾಯಿನ್‌ಗಳನ್ನು ಮಧ್ಯದಲ್ಲಿ ಜೋಡಿಸಲಾಯಿತು. ಯಾರು ಮೊದಲು ಹೊಡೆಯಬೇಕು ಎಂಬ ಸಣ್ಣ ಮಾತುಕತೆ ನಡೆಯಿತು. ನಗುತ್ತಾ, ಮಾತನಾಡುತ್ತಾ ಆಟ ಆರಂಭವಾಯಿತು. ಒಂದು ಹೊಡೆತ, ಒಂದು ಕಾಯಿನ್ ತೂತಿನೊಳಗೆ; ಮತ್ತೊಂದು ಹೊಡೆತ, ಇನ್ನೊಂದು ಕಾಯಿನ್ ಬೋರ್ಡಿನ ಅಂಚಿಗೆ ಬಡಿದು ಮತ್ತೆ ಮಧ್ಯಕ್ಕೆ. “ಸರ್, ಇದು ಹೀಗೆ ಬೀಳಬೇಕಿತ್ತು… ಸ್ವಲ್ಪ ಜೋರಾಗಿ ಹೊಡೆದಿದ್ದರೆ ಹೋಗುತ್ತಿತ್ತು” ಎಂದು ಹಾಲಕೇರಿ ಸರ್ ಹೇಳಿದಾಗ, “ಹೌದು ಸರ್, ಹೊಡೆತ ಸರಿಯಾಗಿದ್ದರೆ ಫಲವೂ ಸರಿಯಾಗಿರುತ್ತದೆ” ಎಂದು ನಾನೂ ನಗುತ್ತಾ ಹೇಳಿದೆ. ಆದರೆ ಆ ಮಾತು ಹೇಳಿದ ಕ್ಷಣವೇ ನನ್ನೊಳಗೆ ಒಂದು ಚಿಂತನೆ ಮೂಡಿತು—ಹೊಡೆತ ಸರಿಯಾಗಿದ್ದರೆ ಫಲವೂ ಸರಿಯಾಗಿರುತ್ತದೆ… ಇದು ಕೇವಲ ಕೇರಂ ಆಟದ ಮಾತೇನಾ? ನಮ್ಮ ಬದುಕಿಗೂ ಇದೇ ನಿಯಮ ಅನ್ವಯಿಸುವುದಿಲ್ಲವೇ? ಆಮೇಲೆ ನಾನು ಕೇರಂ ಬೋರ್ಡನ್ನು ಆಟದ ಕಣ್ಣಿನಿಂದ ನೋಡುವುದನ್ನು ಬಿಟ್ಟು ಬದುಕಿನ ಕಣ್ಣಿನಿಂದ ನೋಡಲು ಆರಂಭಿಸಿದೆ. ಕಪ್ಪು ಕಾಯಿನ್‌ಗಳು ಒಂದು ಕಡೆ, ಬಿಳಿ ಕಾಯಿನ್‌ಗಳು ಮತ್ತೊಂದು ಕಡೆ. ಎರಡು ಬಣ್ಣಗಳು. ಆದರೆ ಎರಡೂ ಒಂದೇ ಗಾತ್ರ, ಒಂದೇ ಆಕಾರ, ಒಂದೇ ಬೋರ್ಡಿನ ಮೇಲೆ, ಒಂದೇ ತೂತಿನೊಳಗೆ ಬೀಳಬೇಕಾದವು. ನಮ್ಮ ಬದುಕೂ ಹೀಗೆಯೇ ಅಲ್ಲವೇ? ಕಪ್ಪು–ಬಿಳಿ, ಗಂಡು–ಹೆಣ್ಣು, ಬಡವ–ಶ್ರೀಮಂತ, ವಿದ್ಯಾವಂತ–ಅವಿದ್ಯಾವಂತ, ದೊಡ್ಡವರು–ಚಿಕ್ಕವರು… ನಾವು ಎಷ್ಟೋ ಭೇದಗಳನ್ನು ಮಾಡಿಕೊಂಡಿದ್ದೇವೆ. ಆದರೆ ಬದುಕಿನ ಅಂತಿಮ ಸತ್ಯದ ಮುಂದೆ ಇವೆಲ್ಲವೂ ಹೊರಗಿನ ಗುರುತುಗಳಷ್ಟೇ. ಇಂದು ಒಬ್ಬನಿಗೆ ಸಿಕ್ಕಿರುವ ಸ್ಥಾನ ನಾಳೆ ಮತ್ತೊಬ್ಬನಿಗೆ ಸಿಗಬಹುದು. ಇಂದು ಗೆದ್ದವನು ನಾಳೆ ಸೋಲಬಹುದು. ಇಂದು ಮೇಲಿರುವವನು ನಾಳೆ ಕೆಳಗೆ ಬರಬಹುದು. ಬದುಕಿನ ಆಟದಲ್ಲಿ ಕಾಯಿನ್‌ಗಳ ಬಣ್ಣ ಬದಲಾಗಬಹುದು; ಆದರೆ ಬೋರ್ಡ್ ಒಂದೇ. ಹಾಲಕೇರಿ ಸರ್ ಮತ್ತೊಂದು ಕಾಯಿನ್ ಹೊಡೆಯುತ್ತಿದ್ದರು. ನಾನು ಮಾತ್ರ ಒಂಬತ್ತು ಕಾಯಿನ್‌ಗಳನ್ನು ಎಣಿಸುತ್ತಿದ್ದೆ. “ಒಂಬತ್ತೇ ಯಾಕೆ?” ಎಂಬ ಪ್ರಶ್ನೆ ನನ್ನೊಳಗೆ ಮೂಡಿತು. ನಮ್ಮ ಭಾರತೀಯ ಚಿಂತನೆಗೆ ದೇಹವನ್ನು ‘ನವದ್ವಾರಪುರಿ’ ಎಂದು ಕರೆಯಲಾಗಿದೆ. ದೇಹಕ್ಕೆ ಒಂಬತ್ತು ದ್ವಾರಗಳಿವೆ ಎಂಬ ಆಧ್ಯಾತ್ಮಿಕ ಕಲ್ಪನೆ ನೆನಪಾಯಿತು. ಹಾಗಾದರೆ ಈ ಒಂಬತ್ತು ಕಾಯಿನ್‌ಗಳಲ್ಲೂ ಒಂದು ಬದುಕಿನ ಸಂಕೇತವನ್ನು ನೋಡಬಹುದಲ್ಲವೇ? ನಮ್ಮ ದೇಹವೆಂಬ ಕೇರಂ ಬೋರ್ಡಿನಲ್ಲಿ ಇಂದ್ರಿಯಗಳೆಂಬ ಕಾಯಿನ್‌ಗಳು. ಅವುಗಳನ್ನು ನಿಯಂತ್ರಿಸುವುದು, ಸರಿಯಾದ ದಿಕ್ಕಿನಲ್ಲಿ ನಡೆಸುವುದು—ಅದೇ ಬದುಕಿನ ದೊಡ್ಡ ಆಟ. ಅಷ್ಟರಲ್ಲಿ ನನ್ನ ಕಣ್ಣು ಕೆಂಪು ಕಾಯಿನ್‌ನ ಮೇಲೆ ಬಿತ್ತು. ಎಲ್ಲ ಕಾಯಿನ್‌ಗಳ ನಡುವೆ ಅದು ಮಾತ್ರ ವಿಭಿನ್ನ. ಒಂದೇ ಒಂದು ಕೆಂಪು ಕಾಯಿನ್. ಅದು ನನಗೆ ಜೀವದ ಸಂಕೇತದಂತೆ ಕಂಡಿತು. ಕಪ್ಪು ಕಾಯಿನ್ ಆಗಿರಲಿ, ಬಿಳಿ ಕಾಯಿನ್ ಆಗಿರಲಿ, ಹೊರಗಿನ ರೂಪ, ಬಣ್ಣ, ಸ್ಥಾನ, ಲಿಂಗ, ಸಂಪತ್ತು, ಅಧಿಕಾರ—ಎಷ್ಟೇ ವ್ಯತ್ಯಾಸಗಳಿರಲಿ, ಎಲ್ಲದರ ಒಳಗಿರುವ ಜೀವ ಒಂದೇ. ಅದಕ್ಕಾಗಿಯೇ ಬಹುಶಃ ಈ ಆಟದಲ್ಲಿ ಕೆಂಪು ಕಾಯಿನ್ ಒಂದೇ. ಎರಡು ಬಣ್ಣಗಳ ಕಾಯಿನ್‌ಗಳು ಅನೇಕ. ಆದರೆ ಜೀವದ ಸಂಕೇತ ಮಾತ್ರ ಒಂದು. ಜೀವವಿಲ್ಲದ ದೇಹಕ್ಕೆ ಎಷ್ಟೇ ಅಲಂಕಾರ ಮಾಡಿದರೂ ಏನು ಪ್ರಯೋಜನ? ಅದೇ ರೀತಿ ಬದುಕಿನಲ್ಲಿ ಎಷ್ಟೇ ಸಂಪಾದನೆ ಮಾಡಿದರೂ, ಒಳಗಿನ ಜೀವದ ನೆಮ್ಮದಿ ಇಲ್ಲದಿದ್ದರೆ ಆ ಸಂಪಾದನೆಯ ಅರ್ಥವೇನು? ನಾವು ಮನೆ ಕಟ್ಟುತ್ತೇವೆ, ಆಸ್ತಿ ಮಾಡುತ್ತೇವೆ, ಹಣ ಸಂಪಾದಿಸುತ್ತೇವೆ, ಹುದ್ದೆ ಪಡೆಯುತ್ತೇವೆ, ಪ್ರಶಸ್ತಿ ಪಡೆಯುತ್ತೇವೆ, ಸಮಾಜದಲ್ಲಿ ಹೆಸರು ಮಾಡುತ್ತೇವೆ. ಆದರೆ ಒಂದು ದಿನ ನಮ್ಮನ್ನೇ ನಾವು ಕೇಳಿಕೊಳ್ಳಬೇಕಾಗುತ್ತದೆ—“ಇವೆಲ್ಲವನ್ನು ಗಳಿಸುವ ಓಟದಲ್ಲಿ ನಾನು ನನ್ನನ್ನೇ ಕಳೆದುಕೊಂಡಿಲ್ಲವೇ?” ಕೇರಂ ಆಟ ಮುಂದುವರಿಯುತ್ತಿತ್ತು. ಹಾಲಕೇರಿ ಸರ್ ಒಂದು ಕಾಯಿನ್‌ಗೆ ಹೊಡೆದರು. ಕಾಯಿನ್ ಅಂಚಿಗೆ ಬಡಿದು ದಿಕ್ಕು ಬದಲಿಸಿತು. ನಮ್ಮ ಬದುಕಿನಲ್ಲೂ ಎಷ್ಟೋ ಬಾರಿ ಹೀಗಾಗುತ್ತದೆ. ನಾವು ಒಂದು ದಾರಿ ಎಂದುಕೊಂಡಿರುತ್ತೇವೆ. ಆದರೆ ಬದುಕು ನಮ್ಮನ್ನು ಇನ್ನೊಂದು ದಿಕ್ಕಿಗೆ ಕೊಂಡೊಯ್ಯುತ್ತದೆ. ನಾವು ಸೋಲು ಎಂದುಕೊಂಡ ಘಟನೆ ಮುಂದೆ ನಮ್ಮ ಬದುಕಿನ ದೊಡ್ಡ ತಿರುವಾಗುತ್ತದೆ. ನಾವು ಕಳೆದುಕೊಂಡ ಅವಕಾಶವೇ ಮತ್ತೊಂದು ದೊಡ್ಡ ಅವಕಾಶಕ್ಕೆ ದಾರಿ ಮಾಡಿಕೊಡುತ್ತದೆ. ಕೆಲವೊಮ್ಮೆ ನಮ್ಮ ಹೊಡೆತ ನೇರವಾಗಿರದಿದ್ದರೂ ಫಲ ನಮ್ಮ ಪರವಾಗಿರುತ್ತದೆ. ಕೇರಂನಲ್ಲಿ ನಾವು ಸ್ಟ್ರೈಕರ್ ಅನ್ನು ಒಂದು ದಿಕ್ಕಿನಲ್ಲಿ ಹೊಡೆಯುತ್ತೇವೆ. ಅದು ಬೋರ್ಡಿನ ಅಂಚಿಗೆ ಬಡಿದು, ಮತ್ತೆ ಹಿಂದಿರುಗಿ ಕಾಯಿನ್‌ಗೆ ತಾಗಿ, ನಿರೀಕ್ಷಿಸದ ತೂತಿನೊಳಗೆ ಕಾಯಿನ್ ಬೀಳಬಹುದು. ಅದು ನನಗೆ ಭಗವತ್ಕೃಪೆಯಂತೆ ಕಾಣುತ್ತದೆ. ನಾವು ಯೋಜನೆ ಮಾಡುತ್ತೇವೆ. ಆದರೆ ಅಂತಿಮ ಫಲವನ್ನು ನಿರ್ಧರಿಸುವ ಶಕ್ತಿ ಸಂಪೂರ್ಣವಾಗಿ ನಮ್ಮ ಕೈಯಲ್ಲಿರುವುದಿಲ್ಲ. ಇಲ್ಲಿ ಸ್ಟ್ರೈಕರ್ ಕೂಡ ನನಗೆ ಒಂದು ದೊಡ್ಡ ಸಂಕೇತವಾಗಿ ಕಾಣಿಸಿತು. ಸ್ಟ್ರೈಕರ್—ಭಗವಂತ. ನಮ್ಮ ಜೀವನದ ಕಾಯಿನ್‌ಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಅವನ ಕೃಪೆ ಬೇಕು. ಆದರೆ ಸ್ಟ್ರೈಕರ್ ನಮ್ಮ ಕೈಯಲ್ಲಿದೆ. ಅಂದರೆ ಪ್ರಯತ್ನ ನಮ್ಮದು, ದಿಕ್ಕು ತೋರಿಸುವ ಶಕ್ತಿ ಅವನದು. ಹೊಡೆಯುವವನು ಅವನೇ… ಹೊಡೆಸುವುದು ನಮ್ಮಿಂದ. ಹಾಲಕೇರಿ ಸರ್ ಆಟದಲ್ಲಿ ತಲ್ಲೀನರಾಗಿದ್ದರು. ನಾನು ಮಾತ್ರ ಈ ಚಿಂತನೆಯೊಳಗೆ ಇನ್ನಷ್ಟು ಆಳಕ್ಕೆ ಹೋಗುತ್ತಿದ್ದೆ. ಕೇರಂ ಬೋರ್ಡಿನ ನಾಲ್ಕು ಮೂಲೆಯ ತೂತುಗಳು ನನ್ನ ಕಣ್ಣಿಗೆ ಬಿದ್ದವು. ನಮ್ಮ ಬದುಕಿನ ನಾಲ್ಕು ಆಶ್ರಮಗಳು ನೆನಪಿಗೆ ಬಂದವು—

ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಬದುಕಿಗೂ ಒಂದು ಕ್ರಮವಿದೆ. ಕೇರಂನಲ್ಲಿ ಕಾಯಿನ್‌ಗಳನ್ನು ಹಿಮ್ಮುಖವಾಗಿ ಹೊಡೆಯಲು ನಿಯಮ ಅವಕಾಶ ಕೊಡುವುದಿಲ್ಲ. ಬದುಕೂ ಹಾಗೆಯೇ. ಕಳೆದ ಕಾಲಕ್ಕೆ ಹಿಂತಿರುಗಿ ಬದುಕಲು ಸಾಧ್ಯವಿಲ್ಲ. ಮಾಡಿದ ತಪ್ಪನ್ನು ಅಳಿಸಲಾಗುವುದಿಲ್ಲ. ಕಳೆದುಹೋದ ಸಮಯವನ್ನು ಮರಳಿ ತರಲಾಗುವುದಿಲ್ಲ. ಹೇಳಿದ ಮಾತನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ. ಆದರೆ ಮುಂದಿನ ಹೊಡೆತವನ್ನು ಸರಿಯಾಗಿ ಹೊಡೆಯಬಹುದು. ಅದೇ ಬದುಕಿನ ಅವಕಾಶ. ಆಟದಲ್ಲಿ ಕೆಲವೊಮ್ಮೆ ಎದುರಾಳಿಯ ಕಾಯಿನ್ ನಮ್ಮ ದಾರಿಗೆ ಅಡ್ಡವಾಗಿ ನಿಂತಿರುತ್ತದೆ. ಅವನನ್ನು ನೇರವಾಗಿ ಹೊಡೆಯಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಪೆನಾಲ್ಟಿ. ಆದರೆ ನಮ್ಮದೇ ಕಾಯಿನ್‌ಗೆ ಹೊಡೆದು, ಅದರ ಮೂಲಕ ಎದುರಾಳಿಯ ಕಾಯಿನ್‌ನ್ನು ಸರಿಸಬಹುದು. ಇದು ಕೂಡ ಬದುಕಿನ ಅದ್ಭುತ ಪಾಠ. ಎದುರಿನವನನ್ನು ಬದಲಾಯಿಸಲು ನಾವು ಯಾವಾಗಲೂ ಸಾಧ್ಯವಿಲ್ಲ. ಆದರೆ ನಮ್ಮನ್ನು ನಾವು ಬದಲಾಯಿಸಿಕೊಂಡರೆ ಪರಿಸ್ಥಿತಿಯೇ ಬದಲಾಗಬಹುದು. ಇತರರನ್ನು ಸರಿಪಡಿಸುವ ಪ್ರಯತ್ನಕ್ಕಿಂತ ಮೊದಲು ನಮ್ಮನ್ನೇ ನಾವು

ಸರಿಪಡಿಸಿಕೊಳ್ಳಬೇಕು. ಕೇರಂನಲ್ಲಿ ನಿಯಮ ಮೀರಿ ಎದುರಾಳಿಯ ಕಾಯಿನ್‌ಗೆ ನೇರವಾಗಿ ಹೊಡೆದರೆ ಪೆನಾಲ್ಟಿ. ಒಂದು ಕಾಯಿನ್ ಮರಳಿ ಬೋರ್ಡಿಗೆ ಬರುತ್ತದೆ. ಬದುಕಿನಲ್ಲೂ ತಪ್ಪಿಗೆ ಬೆಲೆ ಇದೆ. ಒಂದು ತಪ್ಪು ಮಾತು ಸಂಬಂಧವನ್ನು ಕಳೆದುಕೊಳ್ಳಿಸಬಹುದು. ಒಂದು ತಪ್ಪು ನಿರ್ಧಾರ ವರ್ಷಗಳ ಪರಿಶ್ರಮವನ್ನು ಹಾಳುಮಾಡಬಹುದು. ಒಂದು ಕ್ಷಣದ ಅವಸರ ಇಡೀ ಬದುಕಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಮತ್ತೊಂದು ದೊಡ್ಡ ತಪ್ಪು—ಆಟದ ಭರಾಟೆಯಲ್ಲಿ ಸ್ಟ್ರೈಕರ್‌ನ್ನೇ ತೂತಿನೊಳಗೆ ಹಾಕುವುದು. ನಾನು ಹಾಲಕೇರಿ ಸರ್‌ಗೆ ನಗುತ್ತಾ ಹೇಳಿದೆ—“ಸರ್, ಕಾಯಿನ್‌ಗಳನ್ನು ಹೊಡೆಯುವ ಭರಾಟೆಯಲ್ಲಿ ಸ್ಟ್ರೈಕರ್‌ನ್ನೇ ಕಳೆದುಕೊಂಡರೆ ಆಟವೇ ನಮ್ಮ ವಿರುದ್ಧವಾಗುತ್ತದೆ!” ಆ ಮಾತು ಹೇಳಿದ ತಕ್ಷಣ ನನಗೆ ಅನಿಸಿತು—ನಮ್ಮ ಬದುಕಿನಲ್ಲೂ ಇದೇ ಆಗುತ್ತಿಲ್ಲವೇ? ಹಣದ ಹಿಂದೆ ಓಡುತ್ತಾ ಆರೋಗ್ಯ ಕಳೆದುಕೊಳ್ಳುತ್ತೇವೆ. ಹೆಸರಿನ ಹಿಂದೆ ಓಡುತ್ತಾ ನೆಮ್ಮದಿ ಕಳೆದುಕೊಳ್ಳುತ್ತೇವೆ. ಎಲ್ಲರನ್ನೂ ಮೆಚ್ಚಿಸಲು ಹೋಗಿ ನಮ್ಮವರನ್ನೇ ಮರೆಯುತ್ತೇವೆ. ಇತರರನ್ನು ಗೆಲ್ಲುವ ಪ್ರಯತ್ನದಲ್ಲಿ ನಮ್ಮನ್ನೇ ನಾವು ಸೋಲಿಸಿಕೊಳ್ಳುತ್ತೇವೆ. ಕೊನೆಗೆ ಒಂದು ದಿನ ಹಿಂದಿರುಗಿ ನೋಡಿದಾಗ—“ನಾನು ಬಹಳವನ್ನು ಗೆದ್ದಿದ್ದೇನೆ… ಆದರೆ ನನ್ನನ್ನೇ ಕಳೆದುಕೊಂಡಿದ್ದೇನೆ” ಎಂಬ ನೋವು ಉಳಿಯಬಹುದು. ಆ ದಿನದ ಕೇರಂ ಆಟ ಎಷ್ಟು ಹೊತ್ತು ನಡೆಯಿತು ಎಂಬುದು ಈಗ ನೆನಪಿಲ್ಲ. ಯಾರು ಗೆದ್ದರು, ಯಾರು ಸೋತರು ಎಂಬುದೂ ಅಷ್ಟು ಮುಖ್ಯವಾಗಿ ಉಳಿದಿಲ್ಲ. ಆದರೆ ಆ ಆಟ ನನಗೆ ಕಲಿಸಿದ ಪಾಠ ಮಾತ್ರ ಇನ್ನೂ ಮನಸ್ಸಿನಲ್ಲಿ ಉಳಿದಿದೆ. ಬದುಕು ಕೂಡ ಕೇರಂ ಆಟವೇ. ಇಲ್ಲಿ ಕಾಯಿನ್‌ಗಳು ನಮ್ಮ ಇಂದ್ರಿಯಗಳು. ಕೆಂಪು ಕಾಯಿನ್ ನಮ್ಮ ಜೀವ. ಬೋರ್ಡ್ ನಮ್ಮ ಲೋಕ. ಎದುರಾಳಿಗಳು ನಮ್ಮ ಸವಾಲುಗಳು. ಪೆನಾಲ್ಟಿಗಳು ನಮ್ಮ ತಪ್ಪುಗಳ ಪ್ರತಿಫಲ. ನಾಲ್ಕು ತೂತುಗಳು ಬದುಕಿನ ನಾಲ್ಕು ಹಂತಗಳು. ಮತ್ತು ಸ್ಟ್ರೈಕರ್? ಅದು ಭಗವಂತನ ಕೃಪೆ. ನಮ್ಮ ಕೈಯಲ್ಲಿರುವ ಸ್ಟ್ರೈಕರ್‌ನ್ನು ಸರಿಯಾದ ದಿಕ್ಕಿನಲ್ಲಿ ಬಳಸುವ ಜವಾಬ್ದಾರಿ ಮಾತ್ರ ನಮ್ಮದು. ಅವನು ಬುದ್ಧಿ ಕೊಟ್ಟಿದ್ದಾನೆ, ವಿವೇಕ ಕೊಟ್ಟಿದ್ದಾನೆ, ಆಯ್ಕೆ ಮಾಡುವ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಸರಿಯಾದ ಹೊಡೆತ ಕೊಟ್ಟರೆ ಸರಿಯಾದ ಫಲ ಸಿಗುತ್ತದೆ. ತಪ್ಪಾದ ಹೊಡೆತಕ್ಕೆ ಅದರ ಫಲವನ್ನೂ ನಾವೇ ಅನುಭವಿಸಬೇಕು. ಕೊನೆಗೆ ಆಟ ಮುಗಿಯುತ್ತದೆ. ಕಪ್ಪು ಕಾಯಿನ್‌ಗಳೂ ಉಳಿಯುವುದಿಲ್ಲ. ಬಿಳಿ ಕಾಯಿನ್‌ಗಳೂ ಉಳಿಯುವುದಿಲ್ಲ. ನಮ್ಮದು–ನಿಮ್ಮದು ಎಂಬ ಭೇದವೂ ಉಳಿಯುವುದಿಲ್ಲ. ಉಳಿಯುವುದು ಒಂದೇ—ಜೀವ. ಆಗ ಬಹುಶಃ ನಮಗೆ ಅರ್ಥವಾಗಬಹುದು—ಬದುಕು ಗೆಲ್ಲುವುದು ಎಂದರೆ ಎಲ್ಲ ಕಾಯಿನ್‌ಗಳನ್ನು ತೂತಿನೊಳಗೆ ಹಾಕುವುದಲ್ಲ. ನಮ್ಮೊಳಗಿನ ಜೀವವನ್ನು ಕಾಪಾಡಿಕೊಂಡು, ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಕೊನೆಗೆ ಎಲ್ಲವನ್ನೂ ಅವನಿಗೆ ಅರ್ಪಿಸಿಕೊಂಡು ಖಾಲಿಯಾಗುವುದೇ ನಿಜವಾದ ಗೆಲುವು. ಆರ್. ಎ. ಹಾಲಕೇರಿ ಸರ್ ಜೊತೆ ಆಡಿದ ಆ ಸಾಮಾನ್ಯ ಕೇರಂ ಆಟ ನನ್ನ ಪಾಲಿಗೆ ಸಾಮಾನ್ಯವಾಗಿ ಉಳಿಯಲಿಲ್ಲ. ಒಬ್ಬ ಸಹೋದ್ಯೋಗಿಯೊಂದಿಗೆ ಕೆಲ ಕ್ಷಣಗಳ ಮನರಂಜನೆಗಾಗಿ ಆರಂಭವಾದ ಆಟ… ನನ್ನ ಬದುಕನ್ನೇ ನನಗೆ ಅರ್ಥೈಸಿದ ಒಂದು ಮೌನದ ಪಾಠವಾಯಿತು. ಅಂದಿನಿಂದ ಕೇರಂ ಬೋರ್ಡ್ ಕಂಡಾಗ ನನಗೆ ಕೇವಲ ಆಟ ಕಾಣುವುದಿಲ್ಲ. ಬದುಕು ಕಾಣುತ್ತದೆ. ಸ್ಟ್ರೈಕರ್ ಕೈಗೆ ಬಂದಾಗಲೆಲ್ಲಾ ಮನಸ್ಸಿನೊಳಗೆ ಒಂದು ಪ್ರಶ್ನೆ ಕೇಳಿಸುತ್ತದೆ—“ಈ ಬದುಕಿನ ಸ್ಟ್ರೈಕರ್ ನನ್ನ ಕೈಯಲ್ಲಿದೆಯೇ.. ಅಥವಾ ಅವನ ಕೈಯಲ್ಲಿದೆಯೇ?”


