“ಆರೋಗ್ಯ ಅಂಗಳ”
– ರೇಷ್ಮಾ
ಬಿಸಿಲಿನ ತಾಪ ಏರಿಕೆಯಾಗುತ್ತಲೇ ಇದೆ. ಇದರೊಂದಿಗೆ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ. ಬೇಸಿಗೆಯಲ್ಲಿ ಕೆಲವು ಸಾಮಾನ್ಯ ಕಾಯಿಲೆಗಳು ಬಾಧಿಸುವುದು ಸಹಜ. ಹಾಗಂತ ಅವುಗಳನ್ನು ನಿರ್ಲಕ್ಷ್ಯ ಮಾಡುವುದೂ ಸರಿಯಲ್ಲ. ಬಿರುಬೇಸಿಗೆಯಲ್ಲಿ ಕಾಣಿಸುವ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಬೇಸಿಗೆಯಲ್ಲಿ ಆರೋಗ್ಯ ಕಾಳಜಿಯ ಕುರಿತ ಟಿಪ್ಸ್ ಇಲ್ಲಿದೆ.
ಸಾಮಾನ್ಯವಾಗಿ ಮಾರ್ಚ್ ತಿಂಗಳಿನಿಂದ ಮೇ ತಿಂಗಳ ಅಂತ್ಯದವರೆಗೆ ಬಿಸಿಲು ಜೋರಾಗಿರುತ್ತದೆ. ಆದರೆ ಈ ವರ್ಷ ಬಿಸಿಲಿನ ಪ್ರತಾಪ ಇನ್ನೂ ಜೋರಿದೆ. ಬಿಸಿಲು ಏರಿಕೆಯಾದಷ್ಟೂ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತವೆ.
ಬೇಸಿಗೆಯಲ್ಲಿ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವರ್ಷ ಬಿಸಿಲಿನ ಧಗೆ ಹೆಚ್ಚಿರುವ ಕಾರಣಕ್ಕೆ ಕಾಯಿಲೆಗಳ ಪ್ರಮಾಣವೂ ಹೆಚ್ಚಿದೆ. ಬೇಸಿಗೆಯಲ್ಲಿ ಕಾಣಿಸುವ ಸಾಮಾನ್ಯ ಕಾಯಿಲೆಗಳನ್ನು ಅಸಡ್ಡೆ ಮಾಡಬಾರದು. ಇದರಿಂದ ಅಪಾಯ ಹೆಚ್ಚುವ ಸಾಧ್ಯತೆ ಇದೆ.
ತಾಪಮಾನದ ಏರಿಕೆಯು ದೇಹದ ಯಾವುದೋ ಒಂದು ಭಾಗದ ಮೇಲೆ ಮಾತ್ರವಲ್ಲ; ಇದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಚರ್ಮ, ಕಣ್ಣು, ಉಸಿರಾಟದ ಸಮಸ್ಯೆ ಇವು ಸಾಮಾನ್ಯವಾಗಿ ಕಾಡುವ ತೊಂದರೆಗಳು. ಬಿಸಿಲಿನ ಬಗ್ಗೆ ಮುನ್ನೆಚ್ಚರಿಕೆ ವಹಿಸದಿದ್ದರೆ ಸುಡುವ ಶಾಖ ಹಾಗೂ ನಿರಂತರ ಶುಷ್ಕತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಬೇಸಿಗೆಯಲ್ಲಿ ಕಾಣಿಸುವ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳಿವು
ಶಾಖಾಘಾತ
ಬೇಸಿಗೆಯಲ್ಲಿ ಹೈಪರ್ಥರ್ಮಿಯಾ ಅಥವಾ ಶಾಖಾಘಾತ ಉಂಟಾಗುವುದು ಸಾಮಾನ್ಯ. ಅತಿಯಾದ ಬಿಸಿಲಿನಲ್ಲಿ ಓಡಾಡುವುದು ಇದಕ್ಕೆ ಮೂಲವಾಗಬಹುದು. ಇದರಿಂದ ತಲೆಸುತ್ತು ಬರುವುದು, ತಲೆನೋವು, ಪ್ರಜ್ಞೆ ಕಳೆದುಕೊಳ್ಳುವುದು, ಅಂಗವೈಫಲ್ಯ ಕೆಲವೊಮ್ಮೆ ಜೀವಕ್ಕೂ ಹಾನಿಯಾಗಬಹುದು. ಶಾಖಾಘಾತಕ್ಕೆ ನೀರು, ತಂಪಾದ ಗಾಳಿ ಹಾಗೂ ಐಸ್‌ಪ್ಯಾಕ್‌ಗಳಿಂದ ಪ್ರಥಮ ಚಿಕಿತ್ಸೆ ನೀಡಬಹುದು.
ಫುಡ್ ಪಾಯಿಸನಿಂಗ್
ಬೇಸಿಗೆಯಲ್ಲಿ ಫುಡ್ ಪಾಯಿಸನಿಂಗ್ ಸಮಸ್ಯೆ ಉಂಟಾಗುವುದು ಸಾಮಾನ್ಯ. ಕಲುಷಿತ ನೀರು ಅಥವಾ ಆಹಾರದ ಸೇವನೆಯಿಂದ ಸಮಸ್ಯೆ ಉಂಟಾಗುತ್ತದೆ. ಫುಡ್ ಪಾಯಿಸನಿಂಗ್‌ನಿಂದ ಹೊಟ್ಟೆನೋವು, ವಾಕರಿಕೆ, ಅತಿಸಾರ ಹಾಗೂ ವಾಂತಿಯಂತಹ ಸಮಸ್ಯೆಗಳು ಕಾಣಿಸಬಹುದು. ನೀರು ಅಥವಾ ಆಹಾರವನ್ನು ಬಿಸಿ ಮಾಡಿ ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ನಿರ್ಜಲೀಕರಣ
ಇದು ಬೇಸಿಗೆಯಲ್ಲಿ ಎಲ್ಲರನ್ನೂ ಬಾಧಿಸುವ ಸಮಸ್ಯೆ. ನಿರ್ಜಲೀಕರಣಕ್ಕೆ ನೀರು ಕುಡಿಯದೇ ಇರುವುದು ಕಾರಣವಾದರೂ ಅತಿಯಾಗಿ ಸಿಹಿ ಹಾಗೂ ಉಪ್ಪಿನಂಶ ಸೇವನೆಯೂ ಕಾರಣವಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಸೇವಿಸುವ ಆಹಾರದ ಬಗ್ಗೆ ಎಚ್ಚರಿಕೆ ವಹಿಸಬೇಕು.
ದಡಾರ
ಬೇಸಿಗೆಯಲ್ಲಿ ಕಂಡುಬರುವ ಮತ್ತೊಂದು ಸಾಮಾನ್ಯ ರೋಗವೆಂದರೆ ಮಂಪ್ಸ್ ಅಥವಾ ದಡಾರ. ಇದು ಸಾಂಕ್ರಾಮಿಕ ರೋಗ. ಇದು ಬಿಸಿಲಿನ ತಾಪ ಅತಿಯಾದ ಸಮಯದಲ್ಲಿ ಮಕ್ಕಳಲ್ಲಿ ಕಾಣಿಸುತ್ತದೆ. ಕೆಮ್ಮುವುದರಿಂದ, ಸೀನುವುದರಿಂದ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಚಿಕನ್ ಪಾಕ್ಸ್
ಬೇಸಿಗೆಯಲ್ಲಿ ಕಾಣಿಸುವ ಚರ್ಮ ಕಾಯಿಲೆ ಇದು. ಚರ್ಮದ ಮೇಲೆ ಗುಳ್ಳೆ ಏಳುವುದು, ತುರಿಕೆ, ದದ್ದು, ತೀವ್ರತರದ ಜ್ವರ, ಹಸಿವಾಗದೇ ಇರುವುದು ಹಾಗೂ ತಲೆನೋವು ಈ ರೋಗದ ಲಕ್ಷಣಗಳಾಗಿವೆ.
ಸನ್‌ಬರ್ನ್
ಸೂರ್ಯನ ಅತಿ ನೇರಳೆ ಕಿರಣಗಳು ಚರ್ಮಕ್ಕೆ ತೊಂದರೆ ಉಂಟು ಮಾಡುತ್ತವೆ, ಅಲ್ಲದೆ ಇವು ಚರ್ಮದ ಕೋಶಗಳಿಗೂ ಹಾನಿ ಉಂಟು ಮಾಡುತ್ತವೆ. ಅತಿನೇರಳೆ ಕಿರಣಗಳಿಗೆ ಅತಿಯಾಗಿ ಚರ್ಮವನ್ನು ಒಡ್ಡುವುದರಿಂದ ನೋವಿನಿಂದ ಕೂಡಿದ ದದ್ದು, ಚರ್ಮ ಕಪ್ಪಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು.
ಬೆವರುಸಾಲೆ
ಚರ್ಮದ ಮೇಲೆ ಗುಲಾಬಿ ಬಣ್ಣದ ಸಣ್ಣ ಸಣ್ಣ ಗುಳ್ಳೆಗಳಾಗುವುದು ಬೇಸಿಗೆಯಲ್ಲಿ ಸಾಮಾನ್ಯ. ಈ ಬೆವರುಸಾಲೆ ಮಕ್ಕಳಲ್ಲಿ ಕಾಣಿಸುವುದು ಹೆಚ್ಚು.
ಇದರೊಂದಿಗೆ ಅತಿಸಾರ, ಭೇದಿ, ಕಾಲರಾದಂತಹ ಕಾಯಿಲೆಗಳು ಬೇಸಿಗೆಯಲ್ಲಿ ಹರಡುವ ಸಾಮಾನ್ಯ ರೋಗಗಳಾಗಿವೆ.
ಬೇಸಿಗೆಯಲ್ಲಿ ಕಾಣಿಸುವ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಲು ಇಲ್ಲಿವೆ ಕೆಲವು ಟಿಪ್ಸ್
- ಸಾಕಷ್ಟು ನೀರು ಕುಡಿಯಿರಿ. ಇದರೊಂದಿಗೆ ಮಜ್ಜಿಗೆ, ಎಳನೀರು, ನಿಂಬೆಪಾನಕ ಕುಡಿಯಿರಿ. ಮನೆಯಿಂದ ಹೊರಗೆ ಹೋಗುವಾಗ ನೀರು ತೆಗೆದುಕೊಂಡು ಹೋಗಲು ಮರೆಯದಿರಿ. ದಿನದಲ್ಲಿ 8 ರಿಂದ 10 ಲೋಟ ನೀರು ಸೇವಿಸಿ.
- ಸಡಿಲವಾದ ಬಟ್ಟೆಗಳನ್ನು ಧರಿಸಿ. ಕಾಟನ್ ಹಾಗೂ ತಿಳಿ ಬಣ್ಣದ ಬಟ್ಟೆಗೆ ಆದ್ಯತೆ ನೀಡಿ.
- ಹೊರಾಂಗಣ ಚಟುವಟಿಕೆ ಅಥವಾ ಹೊರಗಡೆ ಹೋಗುವಾಗ ಅತಿಯಾದ ಬಿಸಿಲಿನಲ್ಲಿ ಓಡಾಡುವುದಕ್ಕೆ ಕಡಿವಾಣ ಹಾಕಿ. ನೆರಳಿನಲ್ಲಿ ಇರಿ.
- ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನಲ್ಲಿ ಕುಳಿತುಕೊಳ್ಳುವುದಕ್ಕೆ ಕಡಿವಾಣ ಹಾಕಿ, ಜೊತೆಗೆ ಕಾರನ್ನು ಸಾಧ್ಯವಾದಷ್ಟು ನೆರಳಿರುವ ಜಾಗದಲ್ಲಿ ಪಾರ್ಕ್ ಮಾಡಿ.
- ಸನ್‌ಬರ್ನ್ ಕಾರಣದಿಂದ ಉಂಟಾಗುವ ನೋವು ನಿವಾರಣೆಗೆ ಐಸ್‌ಪ್ಯಾಕ್ ಅಥವಾ ನೋವು ನಿವಾರಕಗಳನ್ನು ಬಳಸಿ.
- ಆಗಾಗ ಕೈ ತೊಳೆಯುವ ಮೂಲಕ ನೈರ್ಮಲ್ಯ ಕಾಪಾಡಿಕೊಳ್ಳಿ. ಅಡುಗೆ ಮಾಡುವಾಗ, ತಿನ್ನುವಾಗ ಕೈ ತೊಳೆಯಲು ಮರೆಯದಿರಿ. ಇದರಿಂದ ಆಹಾರ ಹಾಗೂ ನೀರಿನಿಂದ ಉಂಟಾಗುವ ಸೋಂಕುಗಳಿಂದ ರಕ್ಷಣೆ ಪಡೆಯಬಹುದು.
- ಬಾತ್‌ರೂಮ್ ಬಳಕೆಯ ನಂತರ ಕೈ ತೊಳೆಯಲು ಮರೆಯದಿರಿ.
- ಬೇಸಿಗೆಯಲ್ಲಿ ಬೀದಿ ಬದಿ ಆಹಾರ ಹಾಗೂ ಹೊರಗಿನ ಆಹಾರ ತಿನ್ನುವುದಕ್ಕೆ ಕಡಿವಾಣ ಹಾಕಿ. ಹಣ್ಣು, ತರಕಾರಿ ಸೇವನೆಗೆ ಒತ್ತು ನೀಡಿ.
- ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಕಿಟಕಿಗಳನ್ನು ಮುಚ್ಚಿ. ಇದರಿಂದ ಒಳಭಾಗದಲ್ಲಿ ಬಿಸಿಲಿನ ತಾಪ ಇರುವುದಿಲ್ಲ.
- ರುಬೆಲ್ಲಾ, ದಡಾರದಂತಹ ಕಾಯಿಲೆಗಳಿಗೆ ವ್ಯಾಕ್ಸಿನ್ ಹಾಕಿಸಿ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ವ್ಯಾಕ್ಸಿನ್ ಹಾಕಿಸುವುದರಿಂದ ಇಂತಹ ಆರೋಗ್ಯ ಸಮಸ್ಯೆಗಳಿಂದ ದೂರ ಮಾಡಬಹುದು.
- ಕನಿಷ್ಠ ಎಸ್‌ಪಿಎಫ್ 15 ಇರುವ ಸನ್‌ಸ್ಕ್ರೀನ್ ಬಳಸಿ.
- ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಓಡಾಡುವುದಕ್ಕೆ ಕಡಿವಾಣ ಹಾಕುವುದು ಬಹಳ ಉತ್ತಮ
- ಬಿಸಿಲಿನಲ್ಲಿ ಓಡಾಡುವಾಗ ಛತ್ರಿ, ಸನ್‌ಗ್ಲಾಸ್, ಸ್ಕಾರ್ಪ್ ಧರಿಸಲು ಮರೆಯದಿರಿ.
ಸೌಜನ್ಯ:ht kannada