’ವಿದ್ಯಾರ್ಥಿ ನಿಧಿ’ ಮಕ್ಕಳ ಕಥೆ- ಮಂಡ್ಯ ಮ.ನಾ.ಉಡುಪ
ಅದೊಂದು ಕಾಡು. ಅಲ್ಲಿ ನಾನಾ ರೀತಿಯ ಪ್ರಾಣಿಗಳು ವಾಸಿಸುತ್ತಿದ್ದವು. ಅವುಗಳಲ್ಲಿ ತೋಳವೊಂದಿತ್ತು. ತೋಳವು ಚಿಕ್ಕಪುಟ್ಟ ಪ್ರಾಣಿಗಳನ್ನು ತಿಂದು ಹಸಿವನ್ನು ನೀಗಿಸಿಕೊಳ್ಳುತಿತ್ತು.
ಒಮ್ಮೆ ಕಾಡಿನ ಪಕ್ಕದಲ್ಲಿನ ಗುಹೆಯಿಂದ ಸಿಂಹವೊಂದು ಜೋರಾಗಿ ಘರ್ಜನೆ ಮಾಡುತ್ತಾ ಕಾಡನ್ನು ಪ್ರವೇಶಮಾಡಿತು. ಸಿಂಹದ ಘರ್ಜನೆ ಕೇಳಿದ ಕಾಡಿನ ಪ್ರಾಣಿಗಳೆಲ್ಲ ನಡುಗಿಹೋದವು. ಬೆಟ್ಟದ ಮೇಲಿನಿಂದ ಬರುತಿದ್ದ ತೋಳಕ್ಕೂ ಸಿಂಹದ ಘರ್ಜನೆ ಕೇಳಿತು. ಅದು ಗಡಿಬಿಡಿಯಲ್ಲಿ ಓಡವಾಗ ಬೆಟ್ಟದಿಂದ ಕೆಳಗಿನ ಕಮರಿಯೊಂದಕ್ಕೆ ಬಿತ್ತು. ಬಿದ್ದ ರಭಸಕ್ಕದು ಎದ್ದು ಓಡಾಡದ ಸ್ಥಿತಿ ತಲುಪಿತು.
ಸಿಂಹ ಕಾಡೆಲ್ಲವನ್ನು ಸುತ್ತಿ ಗುಹೆಗೆ ಹೊರಟು ಹೋಯಿತು. ಕಾಡು ಮತ್ತೆ ಪ್ರಶಾಂತವಾಯಿತು.
ಇದೇ ಸಮಯದಲ್ಲಿ ಮೊಲವೊಂದು ಹುಲ್ಲು ಹುಡುಕಿಕೊಂಡು ಹೊರಟಿತ್ತು. ದಾರಿಯಲ್ಲಿ ಕಮರಿಯೊಳಗೆ ಬಿದ್ದ ತೋಳವನ್ನು ನೋಡಿತು. ತೋಳವು ದೈನ್ಯವಾದ ದನಿಯಿಂದ ಕೇಳಿತು
” ಮಿತ್ರಾ ನಾನು ಹಸಿವು ಮತ್ತೆ ಬಾಯಾರಿಕೆಯಿಂದ ಬಳಲಿಹೋಗಿರುವೆ. ಕನಿಕರಿಸಿ ಸ್ವಲ್ಪ ಪಕ್ಕದ ಹಳ್ಳದಿಂದ ನೀರು ತಂದುಕೊಡಬಲ್ಲೆಯಾ… ? “
ಆಗ ಮೊಲವು ಹೇಳಿತು
” ಮಿತ್ರಾ ನಾನೇನಾದರೂ ನೀರು ತೆಗೆದುಕೊಂಡು ನಿನ್ನ ಬಳಿಗೆ ಬಂದರೆ ನಿನಗೆ ಬಾಯಾರಿಕೆ ಜೊತೆಗೆ ನಿನ್ನ ಹಸಿವಿನಿಂದಾಗಿ ನನ್ನ ಪ್ರಾಣವೂ ಹೋಗುತ್ತದೆ..” ಎಂದು ಹೊರಟುಹೋಯಿತು.
“ದುಷ್ಟರು ಎಂಥಹ ದಯನೀಯ ಸ್ಥಿತಿಯಲ್ಲಿದ್ದಾಗಲೂ ದುರ್ಬಲರನ್ನು ಹಿಂಸಿಸದೇ ಬಿಡರು “