ಪತ್ರಕರ್ತ ದಿ.ರಾಮ ಮನಗೂಳಿಗೆ ಯಲಗೂರೇಶ್ವರ ಅನುಗ್ರಹ ಪ್ರಶಸ್ತಿ
ಆಲಮಟ್ಟಿ: ಯಲಗೂರೇಶ್ವರ ದೇವಸ್ಥಾನ ಸಮಿತಿ ಪ್ರತಿವರ್ಷ ನೀಡುವ ಪ್ರತಿಷ್ಠಿತ “ಯಲಗೂರೇಶ ಅನುಗ್ರಹ ಪ್ರಶಸ್ತಿ’ ಈ ಬಾರಿ ಖ್ಯಾತ ಪತ್ರಕರ್ತ ದಿ. ರಾಮ ಮನಗೂಳಿ ಅವರಿಗೆ ಮರಣೋತ್ತರವಾಗಿ ನೀಡಲಾಯಿತು.
ಜಾತ್ರೆಯ ಎರಡನೇ ದಿನ ಭಾನುವಾರ ತೆಂಗಿನ ತೋಟದಲ್ಲಿ ನಡೆದ ಮಹಾನ್ ಕಲಾವಿದರ ಸಂಗೀತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸಮಿತಿಯ ಅಧ್ಯಕ್ಷ ಅನಂತ ಓಂಕಾರ ಘೋಷಿಸಿದಾಗ, ಸೇರಿದ್ದ ಸಹಸ್ರಾರು ಜನರು ರಾಮ ಅವರ ಕೊಡುಗೆಯನ್ನು ತಮ್ಮಲ್ಲಿ ಮೆಲುಕು ಹಾಕುತ್ತಾ, ಕಣ್ಣಂಚಿನಲ್ಲಿ ನೀರು ಬಂದಿದ್ದು ಕಂಡು ಬಂತು.
ಅಲ್ಲಿ ಮಾತನಾಡಿದ, ದೇವಾಲಯ ಸಮಿತಿಯ ಸದಸ್ಯ ಗೋಪಾಲ ಗದ್ದನಕೇರಿ, ಯಲಗೂರ ಕ್ಷೇತ್ರದ ಅಭಿವೃದ್ಧಿಗೆ ಪರೋಕ್ಷವಾಗಿ ಸಾಕಷ್ಟು ಶ್ರಮಿಸಿದ್ದಾರೆ, ರಾ.ಹೆ.50 ರಿಂದ ಯಲಗೂರದವರೆಗೆ ರಸ್ತೆ ನಿರ್ಮಾಣಕ್ಕೆ, ನದಿ ದಂಡೆಯಿಂದ ಗ್ರಾಮದವರೆಗೆ ರಸ್ತೆ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಸಚಿವರ ಮೇಲೆ ಒತ್ತಡ ಹಾಕಿ ಆ ಕಾರ್ಯ ಆಗುವ ನಿಟ್ಟಿನಲ್ಲಿ ಅವರ ಕೊಡುಗೆ ಸಾಕಷ್ಟಿದೆ ಎಂದು ಸ್ಮರಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆ ಸಂತ್ರಸ್ತರ ಪರವಾಗಿ ಕೊನೆ ಗಳಿಗೆಯವರೆಗೂ ಕಾಯಕನಿಷ್ಠೆಯಿಂದ ಹೋರಾಡಿ, ತಮ್ಮದೇ ಲೇಖನಿಗಳ ಮೂಲಕ ಸರ್ಕಾರಕ್ಕೆ ಎಚ್ಚರಿಸಿದ್ದು ರಾಮ ಮನಗೂಳಿ ಎಂದರು. ಪ್ರತಿಯೊಂದು ಜನಪರ, ಪ್ರಗತಿಪರ ಹೋರಾಟಕ್ಕೆ ಸದಾ ಸಾಥ್ ನೀಡುತ್ತಾ, ಸರ್ವಧರ್ಮದವರ ಏಳಿಗೆಯನ್ನು ಬಯಸಿದ ರಾಮಣ್ಣ ಅವರ ಅಕಾಲಿಕ ನಿಧನ ಯಲಗೂರು ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದರು. ನರಸಿಂಹ ಆಲೂರ, ಪ್ರಮೋದ ಕುಲಕರ್ಣಿ ಅವರು ರಾಮ ಮನಗೂಳಿ ಅವರ ಬಗ್ಗೆ ಮಾತನಾಡಿದರು.
ಸಂಗೀತ ಕಾರ್ಯಕ್ರಮ:
ಶನಿವಾರ ಆರಂಭಗೊಂಡಿದ್ದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಭಾನುವಾರ ಸಂಜೆ ಪೂರ್ಣಗೊಂಡಿತು. ಭಾನುವಾರ ಬೆಳಿಗ್ಗೆ 10 ಕ್ಕೆ ಉಸ್ತಾದ್ ಶಫಿಕ್ ಖಾನ್ ಇವರಿಂದ ಸಿತಾರ್, ಪಂ. ವಿಜಯ ಕುಮಾರ ಪಾಟೀಲ್, ಪಂ. ರವೀಂದ್ರ ಸೋರಗಾಂವಿ, ಪಂ. ಮೈಸೂರು ರಾಮಚಂದ್ರಚಾರ ಹಾಗೂ ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ಸಂಗೀತ ಕಚೇರಿ ನಡೆಸಿಕೊಟ್ಟರು.
ರಥೋತ್ಸವಕ್ಕೂ ಮುನ್ನ ಸಾರವಾಡದ ಗೊಂಬೆಗಳ ಕುಣಿತದ ಪ್ರದರ್ಶನವೂ ನಡೆಯಿತು. ಅದಕ್ಕೆ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ಚಾಲನೆ ನೀಡಿದರು.
ಹರಿಶಾವಿಗೆ: ಸರ್ವಧರ್ಮ ನೇವೇದ್ಯೆ ಯಲಗೂರೇಶನಿಗೆ ಅರ್ಪಿಸಿ, ಜಾತಿ ಧರ್ಮ ಎನ್ನದೇ ಎಲ್ಲ ಸಂಪ್ರದಾಯದ ಬಾಬುದಾರರು ಒಟ್ಟಿಗೆ ಕುಳಿತು ಪ್ರಸಾದ ಸ್ವೀಕರಿಸುವ “ಹರಿಶಾವಿಗೆ’ ಕಾರ್ಯಕ್ರಮವೂ ಮಧ್ಯಾಹ್ನ ಜರುಗಿತು. ಇದೊಂದು ಸರ್ವಧರ್ಮ ನೇವೇದ್ಯ, ಅದನ್ನು ಭಿಕ್ಷೆ ರೀತಿಯಲ್ಲಿ ಭಕ್ತರು ಸ್ವೀಕರಿಸುವುದು ಸಂಪ್ರದಾಯ ಹಾಗೂ ಭಕ್ತಿಯ ಪರಾಕಾಷ್ಠೆ. ಸಹಸ್ರಾರು ಜನರು, ಎಲ್ಲಾ ಜಾತಿಯ ಜನರು ಕುಳಿತು ಪೂಜಾರಿಗಳು ಹಾಕುವ ನೇವೇದ್ಯೆಯನ್ನು ಸ್ವೀಕರಿಸಿದ್ದು ವಿಶೇಷ.
ರಥೋತ್ಸವ:
ಭಾನುವಾರ ಸಂಜೆ ಯಲಗೂರೇಶನ ರಥೋತ್ಸವ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ದೇವಸ್ಥಾನದ ಹೊರ ಆವರಣದಿಂದ ಯಲಗೂರ ವೃತ್ತದವರೆಗೆ ರಥೋತ್ಸವ ಜರುಗಿತು. ಎಲ್ಲೆಡೆ ಉತ್ತತ್ತಿ ತೂರುವ ದೃಶ್ಯ, ಗೋವಿಂದ ಗೋವಿಂದ ನಾಮಸ್ಮರಣೆ ಕೇಳಿ ಬಂತು.
ರಾತ್ರಿ 10 ಕ್ಕೆ ಸಂಗಮೇಶ್ವರ ನಾಟ್ಯ ಸಂಘದಿಂದ “ಹಳ್ಳಿ ಹುಡುಗಿ ಮಸರ ಗಡಗಿ’ ನಾಟಕ ಪ್ರದರ್ಶನ ನಡೆಯಿತು, ನಾನಾ ಗಣ್ಯರು ಚಾಲನೆ ನೀಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಅನಂತ ಓಂಕಾರ, ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ, ನಾರಾಯಣ ಒಡೆಯರ, ಗೋಪಾಲ ಗದ್ದನಕೇರಿ, ನರಸಿಂಹ ಆಲೂರ, ಯಲಗೂರದಪ್ಪ ಪೂಜಾರಿ, ಬಿ.ವೈ. ಅವಟಗೇರ, ಮಹಾದೇವ ಹೂಗಾರ, ಶ್ರೀಶೈಲ ಹೂಗಾರ, ಯಲಗೂರದಪ್ಪ ಪೂಜಾರಿ, ಸಂಜೀವ ಪೂಜಾರ, ಎಸ್.ಐ. ಡೆಂಗಿ, ಗುಂಡಪ್ಪ ತಳವಾರ, ಗುಂಡಪ್ಪ ಪೂಜಾರಿ, ಭೀಮಪ್ಪ ಪೂಜಾರಿ ದೇವಸ್ಥಾನ ಸಮಿತಿಯವರು, ಹರಿದಾಸ ಸಾಹಿತ್ಯ ಸಂಗೀತ ವೇದಿಕೆ ಸದಸ್ಯರು ಅಪಾರ ಭಕ್ತರು ಇದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣರಾದರು.
ಗ್ರಾಮದ ವಿದ್ಯಾರ್ಥಿನಿ ಸಂಗೀತಾ ನಿಂಗರಾಜ ಡೆಂಗಿ ಅವರಿಗೆ “ನಮ್ಮೂರು ಹೆಮ್ಮೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

