ವಿಜಯಪುರ ಜಿಲ್ಲೆ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ | ತಿಕೋಟಾ ಆಡಳಿತ ಸೌಧ ಉದ್ಘಾಟನೆ | ಸಚಿವ ಡಾ.ಎಂ.ಬಿ.ಪಾಟೀಲ ಭರವಸೆ
ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ. ಆಹಾರ ಸಂಸ್ಕೃರಣ ಘಟಕಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಬೆಳೆಯಲಾದ ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗಳಿಗೆ ಉತ್ತಮ ಬೆಲೆ ದೊರಕಿ ಆರ್ಥಿಕತೆ ವೃದ್ದಿಯಾಗಿ, ಸ್ಥಳೀಯವಾಗಿಯೇ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದ್ದು, ಜಿಲ್ಲೆಯ ಸರ್ವಾಂಗೀರ್ಣ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಶನಿವಾರ ತಿಕೋಟಾದಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧ ಉದ್ಘಾಟನೆ ಹಾಗೂ ತಾಲೂಕಾ ಪಂಚಾಯತಿ ಮತ್ತು ಪಟ್ಟಣ ಪಂಚಾಯತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೇವಲ ನೀರಾವರಿ ಯೋಜನೆಗಳಷ್ಟೇ ಅಲ್ಲದೇ ಕೆರೆಗಳಿಗೆ ನೀರು ತುಂಬಿಸುವುದು, ಶಿಕ್ಷಣ ಗುಣಮಟ್ಟ ಸುಧಾರಣೆ, ಶಾಲಾ ಕಟ್ಟಡಗಳ ಸುಧಾರಣೆ, ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್‌ಗಳ ಆರಂಭ, ಅರಣ್ಯ ಪ್ರದೇಶಾಭಿವೃದ್ದಿ, ಜಿಲ್ಲೆಯ ಮಮದಾಪುರದಲ್ಲಿ ೧೪೦೦ ಎಕರೆ ಪ್ರದೇಶದಲ್ಲಿ ಅರಣ್ಯ ಅಭಿವೃದ್ದಿ, ಗ್ರಾಮೀಣ ರಸ್ತೆ ಅಭಿವೃದ್ದಿಗೂ ಒತ್ತು ನೀಡುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ತಹಶೀಲ್ದಾರ ಸುರೇಶ ಮುಂಜೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

