ಆಲಮಟ್ಟಿ ಮಂಜಪ್ಪ ಹರ್ಡೇಕರ ಸನ್ನಿಧಿಯಲ್ಲಿ ಬಿ.ಕೆ.ಬಿರಾದಾರ ಅವರಿಗೆ ಸಂಮಾನ
ಆಲಮಟ್ಟಿ: ಇಲ್ಲಿನ ಕೃಷ್ಣೆಯ ಸುಂದರ ಪರಿಸರದಲ್ಲಿರುವ ಕರುನಾಡು ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕ ಭವನಕ್ಕೆ ಭೇಟಿ ನೀಡಿದ ವಿಜಯಪುರ ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಇಂಗ್ಲೀಷ ವಿಷಯ ಪರಿವೀಕ್ಷಕ ಬಿ.ಕೆ.ಬಿರಾದಾರ ಅವರನ್ನು ಹೃದಯಸ್ಪರ್ಶಿವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಗದುಗಿನ ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ,ಶಿಕ್ಷಣ ತಜ್ಞ ಪ್ರೊ, ಎಸ್.ಎಸ್.ಪಟ್ಟಣಶೆಟ್ಟರ ಅವರು ಮಂಜಪ್ಪನವರ ಕಂಚಿನ ಪುತ್ಥಳಿ ಸನ್ನಿಧಿಯಲ್ಲಿ ಸಂಸ್ಥೆಯ ಪರವಾಗಿ ಬಿ.ಕೆ.ಬಿರಾದಾರ ಅವರನ್ನು ಶಾಲು ಹೊದಿಸಿ ಸತ್ಕರಿಸಿದರು.
ಈ ವೇಳೆ ಕರುನಾಡಿನ ಅನರ್ಘ್ಯ ರತ್ನ, ಅಜ್ಞಾತ ಮಹಾತ್ಮ ಮಂಜಪ್ಪ ಹರ್ಡೇಕರ ಅವರ ಜೀವನ ಚರಿತ್ರೆಯ ಯಶೋಗಾಥೆ ಮೇಲೆ ಪ್ರೊ,ಪಟ್ಟಣಶೆಟ್ಟರ ಬೆಳಕು ಚೆಲ್ಲಿದರು.
ಸಮಾಜಕ್ಕಾಗಿ ಇಡೀ ತಮ್ಮ ಜೀವ ಸವೆದಿರುವ ಮಂಜಪ್ಪನವರು ಅಪ್ರತಿಮ ಚಿಂತಕರು. ತ್ಯಾಗ ಜೀವಿ ಈ ಶರಣರ ಸತ್ಕಾರ್ಯಗಳು ಆಜರಾಮರ. ಅವರ ದೇಶ ಪ್ರೇಮ, ಪಾರದರ್ಶಕತೆ ಬದುಕು ಮರೆಯಲಾಸಾಧ್ಯ ಎಂದರು. ಮಂಜಪ್ಪನವರ ಸಕಾರಾತ್ಮಕ ಚಿಂತನೆ, ಸಮಾಜಮುಖಿ ಕಾರ್ಯ ಅಮೋಘವಾಗಿವೆ. ಸರಳತೆಯ ಬದುಕು ಜೀವನ್ನುದ್ದಕ್ಕೂ ಪಾಲಿಸಿ ಅವರು ಆದರ್ಶತನ ಮೆರೆದಿದ್ದಾರೆ. ಮಾನವೀಯತೆಯ ಮೌಲ್ಯಧಾರಿತ ಗುಣಗಳಂತೂ ಆವರ್ಣಿಯವಾಗಿವೆ. ಮಹಾತ್ಮಾ ಗಾಂಧೀಜಿಯವರ ಹಾಗೂ ಬಸವಣ್ಣನವರ ಚಿಂತನೆಗಳನ್ನು ಸಮಾಜದಲ್ಲಿ ಹಗಲಿರುಳು ಶ್ರಮಿಸಿ ಬಿತ್ತರಿಸಿದ್ದಾರೆ. ಇಂಥ ನಿಷ್ಕಲ್ಮಶ ಭಾವ ಕಾಣುವುದು ವಿರಳ. ಶರಣ ಮಂಜಪ್ಪನವರ ಬೋಧಾಮೃತ ಕರುನಾಡಿಗೆ ಸಂಜೀವಿನಿಯಾಗಿದೆ ಎಂದು ಪ್ರೊ,ಎಸ್.ಎಸ್.ಪಟ್ಟಣಶೆಟ್ಟರ ನುಡಿದರು.
ಅಂದು ಗ್ರಾಮೋದ್ಯೋಗದ ಪರಿಕಲ್ಪನೆಯನ್ನು ಹೊಂದಿ ಗ್ರಾಮೋದ್ಧಾರಕ್ಕಾಗಿ ತಡಕಾಡಿದ ಮಂಜಪ್ಪ ಹಡೇ೯ಕರ ಅವರು ಜೀವನ ಶಿಕ್ಷಣಕ್ಕೆ ಮೊದಲಾದ್ಯತೆ ನೀಡಿದ್ದರು. ಆಲಮಟ್ಟಿಯಲ್ಲಿ ವಿದ್ಯಾಲಯ ತೆರೆದು ಔಪಚಾರಿಕ ಶಿಕ್ಷಣದೊಂದಿಗೆ ಕೈಕಸಬಿನ ಕಲೆ, ಗೃಹ ಕೈಗಾರಿಕೆಗೆ ಮಹತ್ವ ಸಾರಿದರು. ಸಮಾಜದಲ್ಲಿ ಬೇರು ಬಿಟ್ಟಿದ ಅಸ್ಪೃಶ್ಯತೆಯ ಭಾವ ತೊಲಗಿಸಲು ಮಂಜಪ್ಪನವರು ಮುತ್ಸದ್ಧಿಯ ಗಟ್ಟಿತನ ತೋರಿದರು. ಸತ್ಯ ಮಾರ್ಗ ಆಚರಣೆಯೇ ಅವರ ಉಸಿರಾಗಿತ್ತು. ಸಕಲರಿಗೂ ಲೇಸನೇ ಬಯಸಿದ ವಿಭೂಷಿತ, ಬಸವ ಪ್ರಜ್ಞೆ ಮಹಾತ್ಮ ಮಂಜಪ್ಪ ಹರ್ಡೇಕರ ಕವಿ,ಸಾಹಿತಿ, ಪತ್ರಕರ್ತರಾಗಿಯೂ ಮಿನುಗಿದ್ದಾರೆ. ಮಂಜಪ್ಪವೆಂಬ ರಾಷ್ಟçದೃಷ್ಟಾರ ಕನ್ನಡ ನಾಡಿನ ಪವಿತ್ರ ಜೀವವಾಗಿದ್ದಾರೆ. ಅವರು ಈ ನೆಲಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಆದರೆ ಮೇರು ವ್ಯಕ್ತಿತ್ವದ ಮಂಜಪ್ಪನವರ ದಿವ್ಯ ವ್ಯಕ್ತಿತ್ವಕ್ಕೆ ಇನ್ನುವರೆಗೆ ಸಮಾಜದಲ್ಲಿ ಸರಿಯಾಗಿ ಮನ್ನಣೆ ಸಿಗದಿರುವುದು ನೋವಿನ ಸಂಗತಿಯಾಗಿದೆ. ಸತ್ಯ, ನಿಷ್ಟೆ, ನಿಸ್ವಾರ್ಥತೆಯ ಶುದ್ಧ ಚಾರಿತ್ರಿಕ ತ್ಯಾಗಿ ಮಂಜಪ್ಪನವರನ್ನು ಗುರುತಿಸುವ ಕೆಲಸ ಅಗಬೇಕು ಎಂದರು.
ಲಿಂ,ತೋಂಟದ ಸಿದ್ದಲಿಂಗ ಪೂಜ್ಯರು ಮಂಜಪ್ಪನವರ ಬಗ್ಗೆ ಅಪಾರ ಗೌರವ,ಕಾಳಜಿ ಹೊಂದಿದ್ದರು. ಆ ಹಿನ್ನೆಲೆಯಲ್ಲಿ ಕೃಷ್ಣೆಯ ಹಿನ್ನೀರಿನಲ್ಲಿ ಅವಸಾನದ ಅಂಚಿನಲ್ಲಿ ನಶಿಸಿ ಕಣ್ಮರೆಯಾಗುತ್ತಿದ್ದ ಮಂಜಪ್ಪನವರ ಸಮಾಧಿಯನ್ನು ಸಿದ್ದಲಿಂಗ ಪೂಜ್ಯರ ಕಳಕಳಿಯಿಂದಲ್ಲೇ ಇಲ್ಲಿ ಸ್ಥಳಾಂತರಗೊಂಡಿದೆ, ಅಂದು ಕೃಷ್ಣೆಯ ದಡದಲ್ಲಿ ಈ ಪ್ರಕ್ರಿಯೆ ಐತಿಹಾಸಿಕ ರೂಪದಲ್ಲಿ ನೆರವೇರಿದ್ದು ಹಾಗೂ ಆಲಮಟ್ಟಿ ಸುತ್ತಮುತ್ತಲಿನ ಜನತೆ ಇಂಥದೊಂದು ಅಭೂತಪೂರ್ವ ಸಮಾಧಿ ಸ್ಥಳಾಂತರ ಜಾತ್ರೆಯಲ್ಲಿ ಭಕ್ತಿಭಾವದಿಂದ ಭಾಗವಹಿಸಿದ್ದು ಇತಿಹಾಸವಾಗಿ ಉಳಿದುಕೊಂಡಿದೆ ಎಂದು ಪ್ರೊ,ಎಸ್.ಎಸ್. ಪಟ್ಟಣಶೆಟ್ಟರ ಸ್ಮರಿಸಿಕೊಂಡರು.
ಮಂಜಪ್ಪನವರ ಕಂಚಿನ ಪುತ್ಥಳಿಗೆ ಹೂಪುಷ್ಪದೊಂದಿಗೆ ಗಣ್ಯರು ನಮನ ಸಲ್ಲಿಸಿದರು. ಭವ್ಯ ಸ್ಮಾರಕ ಭವನ ಹಾಗೂ ಮಂಜಪ್ಪನವರ ಸಾಧನೆ ಆಲಿಸಿ ವಿಷಯ ಪರಿವೀಕ್ಷಕ ಬಿ.ಕೆ.ಬಿರಾದಾರ ಪುಳಕಿತಗೊಂಡರು. ಈ ವೇಳೆ ಗದಗಿನ ತೋಂಟದಾರ್ಯ ಮಠದ ಹಿರಿಯ ಸದ್ಭಕ್ತರಾದ ಎಸ್.ಎಸ್.ಕಳಸಾಪುರಶೆಟ್ರ, ಆಲಮಟ್ಟಿ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ, ಪದವಿ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಕೆಲೂರ, ಗದಗಿನ ಜೆಟಿವಿಪಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ನೀಲಗುಂದ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಎಸ್.ಎಚ್.ನಾಗಣಿ, ಮಹೇಶ ಗಾಳಪ್ಪಗೋಳ, ಈರಣ್ಣ ಗುರುಪುತ್ರಪ್ಪನವರ, ಜಿ.ಆರ್.ಜಾಧವ, ಸಿದ್ದು ಪಟ್ಟಣಶೆಟ್ಟಿ, ಗೋಪಾಲ ಬಸಪ್ಪ ವಡ್ಡರ ಇತರರಿದ್ದರು.

