ಸಂಸದ ಉಮೇಶ ಜಾಧವ ಆಪ್ತನ ಹತ್ಯೆ | ಕಣ್ಣಿಗೆ ಖಾರದ ಪುಡಿ ಹಾಕಿ ಕೊಚ್ಚಿ ಕೊಲೆ | ಜೊತೆಗಿದ್ದವರಿಂದಲೇ ಹತ್ಯೆ ಶಂಕೆ

ಅಫಜಲಪುರ: ಕಲಬುರಗಿ ಸಂಸದ ಡಾ. ಉಮೇಶ ಜಾಧವ ಆಪ್ತವಲಯದಲ್ಲಿದ್ದ ಯುವ ಮುಖಂಡ ಗಿರೀಶ ಚಕ್ರ(೩೧) ಬರ್ಬರವಾಗಿ ಹತ್ಯೆಯಾಗಿದ್ದಾರೆ.
ಘಟನೆ ಕುರಿತು ಮೃತ ಗಿರೀಶಬಾಬು ಚಕ್ರ ಸಹೋದರ ಮಲ್ಲಣ್ಣ ಚಕ್ರ(೫೦) ದೇವಲ ಗಾಣಗಾಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುರುವಾರ ರಾತ್ರಿ ಸಾಗನೂರ ಗ್ರಾಮದಲ್ಲಿ ಗಿರೀಶಬಾಬು ಗೆಳೆಯ ಸಚೀನ ಶರಣಪ್ಪ ಕಿರಸಾವಳಗಿ ಮತ್ತು ಮೂರು ಜನ ಸಹಚರರು ಗಿರೀಶ ಚಕ್ರ ಅವರಿಗೆ ಶಾಲು ಹೊದಿಸಿ ಹೂಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿದ್ದಲ್ಲದೆ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಪಾರ್ಟಿ ಕೋಡುವಂತೆ ಕೇಳಿದಾಗ ಎಲ್ಲರೂ ಕೂಡಿಕೊಂಡು ಸಾಗನೂರ ಗ್ರಾಮದ ಸಂತೋಷ ಗಡಗಿ ಎಂಬಾತನ ಜಮೀನಿನಲ್ಲಿ ಪಾರ್ಟಿ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಈ ವೇಳೆ ಸಚೀನ ಕಿರಸಾವಳಗಿ ಬೀಯರ್ ತರಿಸುವಂತೆ ಗಿರೀಶನಿಗೆ ಕೇಳಿಕೊಂಡಾಗ ಗಿರೀಶ ತನ್ನ ಅಳಿಯನನ್ನು ಕಾರಿನಲ್ಲಿ ಬೀಯರ್ ತರಲು ಕಳುಹಿಸಿದ್ದಾರೆ. ಈ ಸಮಯದಲ್ಲೇ ದುಷ್ಕರ್ಮಿಗಳು ಗಿರೀಶ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಸಚಿನ ಕಿರಸಾವಳಗಿ ಕೊಲೆ ಕೇಸೊಂದರಲ್ಲಿ ಜೈಲಿಗೆ ಹೋಗಿ ಕೆಲ ದಿನಗಳ ಹಿಂದಷ್ಟೆ ಹೊರಬಂದಿದ್ದ. ಈಗ ತನ್ನ ಗೆಳೆಯನ್ನನ್ನೇ ಕೊಲೆ ಮಾಡುವ ಮೂಲಕ ಮತ್ತೆ ಪಾತಕ ಲೋಕಕ್ಕೆ ಇಳಿದಿದ್ದಾನೆ.
ಘಟನೆ ಕುರಿತು ಗಾಣಗಾಪೂರ ಠಾಣೆಯಲ್ಲಿ ಗುನ್ನೆ ನಂ ೧೩/೨೦೨೪ ಕಲಂ ೧೨೦(ಬಿ)೩೦೨ ಸಂ ೩೪ಐಪಿಸಿ&೩(೨)(ವಿ) ಎಸ್.ಸಿ/ಎಸ್.ಟಿ ಪಿಎ ಆ್ಯಕ್ಟ್ ೧೯೮೯ರಡಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಎಸ್‌ಪಿ, ಪೊಲೀಸ್ ಅಧಿಕಾರಿಗಳು ಗಾಣಗಾಪೂರ ಠಾಣೆಯ ಪಿಎಸ್‌ಐ ಪರಶುರಾಮ ಜಿ.ಸಿ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.

