ಜನ-ಜಾನುವಾರುಗಳಿಗೆ ತೊಂದರೆ | ಗ್ರಾಮಸ್ಥರಿಂದ ಹೆದ್ದಾರಿ ತಡೆ | ಸಂಚಾರ ಅಸ್ತವ್ಯಸ್ತ
ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳಿಗೆ ತೊಂದರೆಯಾಗಿದೆ. ಅಧಿಕಾರಿಗಳು ಗ್ರಾಮದ ಹತ್ತಿರವಿರುವ ಮುಳವಾಡ ಏತ ನೀರಾವರಿ ಕಾಲುವೆಯಿಂದ ಗ್ರಾಮದ ಕೆರೆ(ಬಾಂದಾರ)ಗೆ ನೀರು ಬಿಡುವಂತೆ ಆಗ್ರಹಿಸಿ ಶನಿವಾರ ಮಿನಿವಿಧಾನಸೌಧ ಮುಂಭಾಗ ಹಾಯ್ದು ಹೋಗಿರುವ ರಾಜ್ಯ ಬಿಜ್ಜಳ ಹೆದ್ದಾರಿಯಲ್ಲಿ ತಾಲೂಕಿನ ಕಾನ್ನಾಳ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಕಾಲುವೆಯಿಂದ ಬಾಂದಾರಕ್ಕೆ ನೀರು ಬಿಡುವಂತೆ ಆಗ್ರಹಿಸಿ ಗ್ರಾಮಸ್ಥರು ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟನೆ ಮಾಡಿದ ಘಟನೆ ಜರುಗಿತು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕಳೆದ ಫೆ.೨೨ ರಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗದೇ ಇರುವದರಿಂದಾಗಿ ಇಂದು ಬೆಳಗ್ಗೆ ಗ್ರಾಮಸ್ಥರು, ಕಾನ್ನಾಳ ಗ್ರಾಮದ ಪಂಚಾಯಿತಿ ಸದಸ್ಯರು ಗ್ರಾಮಕ್ಕೆ ಕಾಲುವೆ ನೀರು ಬಿಡಲು ಆಗ್ರಹಿಸಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ನಂತರ ಪ್ರತಿಭಟನೆ ಮೆರವಣಿಗೆ ಮೂಲಕ ವಿಜಯಪುರ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ಅಲ್ಲಿಯೂ ಮನವಿ ಸಲ್ಲಿಸಿದರು.
ಮನವಿಯಲ್ಲಿ ನಮ್ಮ ಮನವಿಗೆ ಮಧ್ಯಾನ್ಹ ಎರಡು ಗಂಟೆಯೊಳಗೆ ಅಧಿಕಾರಿಗಳು ಸ್ಪಂದಿಸದೇ ಹೋದರೆ ಗ್ರಾಮಸ್ಥರು ಮಿನಿವಿಧಾನಸೌಧದ ಮುಂಭಾಗ ಹಾಯ್ದುಹೋಗಿರುವ ರಾಜ್ಯ ಬಿಜ್ಜಳ ಹೆದ್ದಾರಿ ಮೇಲೆ ಕುಳಿತು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದರು. ಮಧ್ಯಾನ್ಹ ಮೂರು ಗಂಟೆ ಕಳೆದರೂ ಅಧಿಕಾರಿಗಳು ಇವರ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವದರಿಂದಾಗಿ ಪ್ರತಿಭಟನೆ ನಿರತರು ಒಮ್ಮೆಲೆ ರಾಜ್ಯ ಬಿಜ್ಜಳ ಹೆದ್ದಾರಿ ಮೇಲೆ ಮಹಿಳೆಯರು ಸೇರಿದಂತೆ ಪ್ರತಿಭಟನೆಗೆ ಆಗಮಿಸಿದ್ದ ಗ್ರಾಮಸ್ಥರು ಕುಳಿತು ಕುಡಿಯಲು ನೀರು ಬೇಕು. ಕೂಡಲೇ ಅಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕೆಂದು ಕೆಲ ಹೊತ್ತು ರಸ್ತೆ ತಡೆ ಮಾಡಿದರು. ರಸ್ತೆ ತಡೆ ಪ್ರತಿಭಟನೆ ನಡೆದಾಗ ಎರಡು ಬದಿಯಲ್ಲಿ ವಾಹನಗಳು ಸಾಲಾಗಿ ನಿಂತಿರುವದು ಕಂಡುಬಂದಿತ್ತು.
ಸ್ಥಳಕ್ಕೆ ತಹಸೀಲ್ದಾರ, ಕೆಬಿಜೆಎನ್ಎಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಕಾರರಿಗೆ ಗ್ರಾಮಕ್ಕೆ ಕಾಲುವೆಯಿಂದ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ. ತಮ್ಮ ಪ್ರತಿಭಟನೆ ಹಿಂದೆ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಪ್ರತಿಭಟನೆ ನಿರತರು ನಮ್ಮ ಗ್ರಾಮಕ್ಕೆ ಕಾಲುವೆಯಿಂದ ನೀರು ಬರುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ತಹಸೀಲ್ದಾರ ಕಚೇರಿಯಲ್ಲಿ ಇದರ ಬಗ್ಗೆ ಚರ್ಚೆ ಮಾಡುವುದಾಗಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೆಬಿಜೆಎನ್ಎಲ್ ಇಲಾಖೆಯ ಎಇಇ ಜಗದೀಶ ಹೊನ್ನಕಸ್ತೂರಿ, ಸೆಕ್ಷನ್ ಅಧಿಕಾರಿ ಎನ್.ಎಸ್.ನರಸರೆಡ್ಡಿ ಹೇಳಿದಾಗ ಪ್ರತಿಭಟನೆ ನಿರತರು ತಮ್ಮ ರಸ್ತೆ ತಡೆ ಹಿಂಪಡೆದುಕೊಂಡರು.
ನಂತರ ತಹಸೀಲ್ದಾರ ಅವರ ಕಚೇರಿಯಲ್ಲಿ ಒಂದು ಗಂಟೆ ಕಾಲ ಕಾಲುವೆಯಿಂದ ಗ್ರಾಮದ ಬಾಂದಾರಕ್ಕೆ ನೀರು ಬಿಡುವ ಕುರಿತು ಚರ್ಚೆ ನಡೆಯಿತು. ಗ್ರಾಮಸ್ಥರು ಗ್ರಾಮದಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದೆ. ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಯಿಂದ ಎರಡು ಕೊಳವೆ ಬಾವಿ ಕೊರೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ಹೊಲ-ಗದ್ದೆಗಳಿಗೆ ೨-೩ ಕಿಲೋಮೀಟರ್ ಅಲೆದಾಡಿ ತರುತ್ತಿದ್ದಾರೆ. ಈಗಾಗಲೇ ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡಲಾಗಿದೆ. ಈ ಕಾಲುವೆಯ ಮೂಲಕ ನಮ್ಮ ಗ್ರಾಮದ ಕೆರೆ(ಬಾಂದಾರ)ಕ್ಕೆ ನೀರು ಬಿಟ್ಟರೆ ಅಂತರ್ಜಲ ಮಟ್ಟ ಬರುತ್ತದೆ. ಗ್ರಾಮಕ್ಕೆ ನೀರಿನ ತಾಪತ್ರಯ ತಪ್ಪುತ್ತದೆ. ಕಾಲುವೆಯಿಂದ ೮ ಇಂಚು ಪೈಪ್ ಮೂಲಕ ನೀರು ಬಿಡಲಾಗುವುದು ಎಂದು ಅಧಿಕಾರಿಗಳು ಹೇಳಿದಾಗ ಗ್ರಾಮಸ್ಥರು ಒಂದೂವರೆ ಪೂಟ್ ಇಲ್ಲವೇ ೧೨ ಇಂಚು ಪೈಪ್ ಮೂಲಕ ಬಾಂದಾರಕ್ಕೆ ನೀರು ಅಧಿಕಾರಿಗಳು ಬಿಡಬೇಕು. ಇಲ್ಲದೇ ಹೋದರೆ ನಮ್ಮ ಗ್ರಾಮಕ್ಕೆ ನೀರು ಬೇಡವೇ ಬೇಡ. ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ಪೂರಪ್ಪ ಶರಣರು, ರಾಜಶೇಖರ ಸಜ್ಜನ, ಶಿವನಗೌಡ ತಂಗಡಗಿ, ಎಸ್.ಎಂ.ಸಜ್ಜನ ಇತರರು ಎಚ್ಚರಿಕೆ ನೀಡಿದರು.
ತಹಸೀಲ್ದಾರರು ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಗ್ರಾಮಸ್ಥರ ಅಹವಾಲು ತಿಳಿಸಿ ಕೊನೆಯಲ್ಲಿ ೧೦ ಇಂಚು ಪೈಪ್ ಮೂಲಕ ಗ್ರಾಮದ ಬಾಂದಾರಕ್ಕೆ ಭಾನುವಾರ ಸಂಜೆ ೪ ಗಂಟೆಗೆ ಹೊತ್ತಿಗೆ ನೀರು ಬಿಡುವು ಕುರಿತು ನಿರ್ಣಯವಾಯಿತು.
ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಎಸ್.ಎಂ.ಸಜ್ಜನ, ಸದಸ್ಯರಾದ ಎಚ್.ಡಿ.ಅತ್ತಾರ, ಆರ್.ಎಂ.ಮೇಲಿನಮನಿ, ಯಲ್ಲವ್ವ ಬಸರಕೋಡ, ಗ್ರಾಮಸ್ಥರಾದ ರಾಜಶೇಖರ ಸಜ್ಜನ,ರಾಜು ಮೇಲಿನಮನಿ, ಭೀಮಪ್ಪ ಹೊಲೇರ, ಶಿವಪ್ಪ ಹೂಗಾರ, ಬಸನಗೌಡ ಪಾಟೀಲ, ಭೀಮನಗೌಡ ಪಾಟೀಲ, ವೈ.ಪಿ.ಪೂಜಾರಿ, ಸೋಮನಗೌಡ ಬಿರಾದಾರ, ಮಡಿವಾಳಪ್ಪ ನಾಗರೆಡ್ಡಿ, ಸಿ.ಎಸ್.ಪೂಜಾರಿ, ಬೀರಪ್ಪ ಮೇಲಿನಮನಿ, ಈರಯ್ಯ ಹಿರೇಮಠ, ಬಸಲಿಂಗಪ್ಪ ಮೇಲಿನಮನಿ, ಲಕ್ಕವ್ವ ತಂಗಡಗಿ, ಶಾರವ್ವ ಹಿರೇಮಠ, ಕಸ್ತೂರಿಬಾಯಿ ಹೂಗಾರ, ಖಾಜಾಬಿ ಮುಲ್ಲಾ, ಕಾಂತವ್ವ ನಾಟೀಕಾರ, ಗುರುಬಾಯಿ ನಾಟೀಕಾರ, ಗುರುಸಿದ್ದವ್ವ ನಾಟೀಕಾರ, ಲಕ್ಷ್ಮೀ ತಂಗಡಗಿ ಸೇರಿದಂತೆ ಇತರರು ಭಾಗವಹಿಸಿದ್ದರು.

