ಸಹಸ್ರಾರು ಭಕ್ತರ ಲಗ್ಗೆ | ಶೋಭಾಯಾತ್ರೆ | ಅಹೋರಾತ್ರಿ ಸಂಗೀತ ಕಾರ್ಯಕ್ರಮ | ತೆರದ ಬಂಡಿ ಸ್ಪರ್ಧೆ
ಆಲಮಟ್ಟಿ: ಏಳೂರು ಒಡೆಯ ಯಲಗೂರೇಶ್ವರನ ಕಾರ್ತಿಕೋತ್ಸವ ಶನಿವಾರ, ಸಹಸ್ರಾರು ಭಕ್ತರ ಭಾವಪರವಶದ ಮಧ್ಯೆ ಚಾಲನೆ ದೊರೆಯಿತು.
ನಸುಕಿನ ಜಾವದಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ಯಲಗೂರದತ್ತ ಲಗ್ಗೆ ಇಟ್ಟಿತು. ಪಾದಯಾತ್ರೆಯ ಮೂಲಕ ಬಂದ ಭಕ್ತರಿಗೆ ನಾನಾ ಕಡೆ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಿವಿಧ ಆಚಾರ್ಯರ ನೇತೃತ್ವದ ತಂಡ ವೇದಘೋಷಗಳೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಅವಳಿ ಜಿಲ್ಲೆಗಳಿಂದ ಬಂದಿದ್ದ ನೂರಾರು ಮಹಿಳೆಯರು, ಹಲವಾರು ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡವು. ಭಜನೆಯೊಂದಿಗೆ ಮೆರವಣಿಗೆ ಸಾಗಿತು. ಗ್ರಾಮದ ತುಂಬೆಲ್ಲಾ ಶೋಭಾಯಾತ್ರೆಯಲ್ಲಿ ಮಹಿಳೆಯರ ಕೋಲಾಟ ಗಮನಸೆಳೆಯಿತು. ವಿಜಯಪುರ, ಬಾಗಲಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತೆಲಗಿ, ಹುಬ್ಬಳ್ಳಿ, ಬೆಳಗಾವಿ, ಆಲಮಟ್ಟಿ , ಯಲಗೂರ ಸೇರಿದಂತೆ ವಿವಿಧ ಭಜನಾ ಮಂಡಳಿಗಳಿಂದ ಎರಡು ದಿನಗಳಕಾಲ ನಿರಂತರ ಭಜನಾ ನಿನಾದ ಸದ್ದು ಝೇಂಕರಿಸಿತು.
ಸಂಗೀತಕ್ಕೆ ಚಾಲನೆ:
ಹದಿದಾಸ ಸಂಗೀತ ಸಾಹಿತ್ಯ ವೇದಿಕೆ ವತಿಯಿಂದ ಸಂಘಟಿಸಿರುವ ಅಹೋರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ವಿ.ಬಿ. ಕುಲಕರ್ಣಿ, ಗೋಪಾಲ ಗದ್ದನಕೇರಿ, ನಾರಾಯಣ ಒಡೆಯರ, ಟ್ರಸ್ಟ್ ಅಧ್ಯಕ್ಷ ಅನಂತ ಓಂಕಾರ, ನರಸಿಂಹ ಆಲೂರ ಮತ್ತೀತರರು ಚಾಲನೆ ನೀಡಿದರು.
ಅಲ್ಲಿಂದ ಆರಂಭಗೊಂಡ ಸಂಗೀತ ಕಾರ್ಯಕ್ರಮ ರಾತ್ರಿಯಿಡಿ ಜರುಗಿತು. ನೂರಾರು ಸಂಗೀತ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದರು.
ತೆರದ ಬಂಡಿ ಸ್ಪರ್ಧೆ:
ಗ್ರಾಮದ ಹೊರಬಾಜು ತೆರದ ಬಂಡಿ ಸ್ಪರ್ಧೆ ಜರುಗಿತು. ದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ತೆರದ ಬಂಡಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸದಲ್ಲಿ ಮೂರು ದಿನಗಳ ಕಾಲ ನಿರಂತರ ಅನ್ನ ದಾಸೋಹವೂ ನಡೆಯಲಿದೆ. ಬೆಳಿಗ್ಗೆಯಿಂದ ಸಹಸ್ರಾರು ಜನರು ಅನ್ನ ಪ್ರಸಾದ ಸೇವಿಸಿದರು. ನೂರಾರು ಕಾರ್ಯಕರ್ತರು ದಾಸೋಹ ಸೇವೆಯಲ್ಲಿ ತೊಡಗಿದ್ದಾರೆ.
ಸಂಜೆ ದೇವಸ್ಥಾನದ ಪಲ್ಲಕ್ಕಿ ಉತ್ಸವ ಜರುಗಿತು.
ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಕಾರ್ಯ:
ಜಾತ್ರೆಯ ಎರಡು ದಿನ ಆಲಮಟ್ಟಿಯ ಎಂಎಚ್ಎಂ ಪ್ರೌಡಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಕೌಟ್ಸ್ ಮಾಸ್ಟರ್ ಎಂ.ಎಚ್. ಬಳಬಟ್ಟಿ ನೇತೃತ್ವದಲ್ಲಿ ಸ್ವಯಂ ಸೇವಕರ ಕಾರ್ಯ ನಡೆಸುತ್ತಿದ್ದಾರೆ. ದೇವಸ್ಥಾನದೊಳಗೆ ಸುಲಭ ಪ್ರವೇಶಕ್ಕೆ ಇವರು ಅವಕಾಶ ಮಾಡಿಕೊಡುತ್ತಿದ್ದಾರೆ.
ಉಚಿತ ವೈದ್ಯಕೀಯ ತಪಾಸಣೆ:
ಪಿಎಂ ನಾಡಗೌಡ ದಂತ ಮಹಾವಿದ್ಯಾಲಯದ ವೈದ್ಯರು ಭಕ್ತರಿಗೆ ಉಚಿತ ದಂತ ತಪಾಸಣೆ ನಡೆಸಿದರು. ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆ, ವಿಜಯಪುರದ ಕಣಬೂರ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವೂ ಜರುಗಿತು.

