ಯಡ್ರಾಮಿ: ಭಕ್ತಿ ಪರಂಪರೆಗೆ ಮತ್ತು ಅಂಕಿತ ಸಾಹಿತ್ಯಕ್ಕೆ ಅಡಿಪಾಯ ಹಾಕಿದ ಕೀರ್ತಿ ಕೊಂಡಗೂಳಿ ಕೇಶಿರಾಜನಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ಡಾ| ಕಾಶಿಲಿಂಗಯ್ಯ ಮಠ ಹೇಳಿದರು.
ಯಡ್ರಾಮಿಯ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರಘೇಂದ್ರ ಶಿವಯೋಗಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಹುಣ್ಣಿಮೆಯ ಸಂಗಮ -57ರ ಆನ್ಲೈನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಂಡಗೂಳಿ ಕೇಶಿರಾಜ ಬಸವಪೂರ್ವದ ವೀರಶೈವ ಕವಿ. 11ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಕಲ್ಯಾಣ ಚಾಲುಕ್ಯರ ಅರಸ 6ನೇ ವಿಕ್ರಮಾದಿತ್ಯನ ಅರಸೊತ್ತಿಗೆಯಲ್ಲಿ ಮಹಾ ದಂಡನಾಯಕನಾಗಿ, ಸಂದಿವಿಗ್ರಹಿಯಾಗಿ ಕೆಲಸ ಮಾಡುವುದರ ಜೊತೆಗೆ ಕೇಶಿರಾಜ ಒಬ್ಬ ಅಪ್ರತಿಮ ಶಿವಭಕ್ತನಾಗಿದ್ದನು. ಈ ಕೊಂಡಗೂಳಿ ಕೇಶಿರಾಜ ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಂಡಗೂಳಿ ಈತನ ಹುಟ್ಟೂರು. ಶಿವಾನುಭವದ ಅತಿಯಾದ ಹಂಬಲದಿಂದ ಅರಸೊತ್ತಿಗೆಯನ್ನೇ ಧಿಕ್ಕರಿಸಿ ಹುಟ್ಟೂರು ಕೊಂಡಗೂಳಿ ಗ್ರಾಮಕ್ಕೆ ಬಂದು ನೆಲೆ ನಿಲ್ಲುತ್ತಾನೆ. ಕೇಶಿರಾಜನು ಮಂತ್ರ ಮಹತ್ವದ ಕಂದ, ಶೀಲ ಮಹತ್ವದ ಕಂದ, ಸೇರಿದಂತೆ ಏಳಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾನೆ. ಓಂ ನಮಃ ಶಿವಾಯ ಈತನ ಕಂದ ಪದ್ಯಗಳ ವಚನಾಂಕಿತವಾಗಿದೆ. ಬಸವಣ್ಣನ ಪೂರ್ವದಲ್ಲಿಯೇ ಕಾಯಕ, ದಾಸೋಹ ಎನ್ನುವ ಪದಗಳನ್ನು ಕೇಶಿರಾಜ ಬಳಕೆ ಮಾಡಿದ್ದು ಆತನ ಕೃತಿಗಳ ಅಧ್ಯಯನದಿಂದ ತಿಳಿದುಬರುತ್ತದೆ. ಶಿವನ ಪರಮ ಭಕ್ತನಾಗಿ ವೀರಶೈವ ಕವಿಗಳಲ್ಲಿಯೇ ಅಗ್ರಗಣ್ಯನಾಗಿ ಕೇಶಿರಾಜ ಕನ್ನಡ ಸಾಹಿತ್ಯ ಜಗತ್ತಿಗೆ ಕೀರ್ತಿ ತಂದು ಕೊಟ್ಟಿದ್ದಾನೆ ಎಂದರು.
ಇಂತಹ ಚಾರಿತ್ರಿಕ ಕವಿಯ ಸಮಾಧಿ ಸ್ಥಳವನ್ನು ಸರ್ಕಾರ ಅಭಿವೃದ್ಧಿ ಮಾಡುವಲ್ಲಿ ಮುತುವರ್ಜಿ ವಹಿಸುವಂತೆ ಮನವಿ ಮಾಡಿದರು.
ನಂತರ, ಆನ್ಲೈನ್ ಹುಣ್ಣಿಮೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಭುಲಿಂಗಯ್ಯ ಮಠ, ಹಬೀಬ್ ಮುಲ್ಲಾ, ಪ್ರಕಾಶ ಸಾಹು ಬೆಲ್ಲದ, ಬಿ.ಬಿ.ವಾರದ, ಆರ್.ಜಿ.ಪುರಾಣಿಕ, ವಿಜಯೇಂದ್ರ ಕುಲಕರ್ಣಿ, ಪ್ರಶಾಂತ ಕುನ್ನೂರ, ಸುಧೀಂದ್ರ ಕುಲಕರ್ಣಿ, ಪ್ರಹ್ಲಾದ ಪತ್ತಾರ, ಗೊಲ್ಲಾಳಪ್ಪ ಪತ್ತಾರ, ವೀರಭದ್ರ ಪತ್ತಾರ, ದೇವು ಮಡಿವಾಳರ, ಮಲ್ಲಿಕಾರ್ಜುನ ಯಾದಗಿರಿ, ಗೊಲ್ಲಾಳಪ್ಪ ನವಲಗುಂದ, ಇತರರು ಇದ್ದರು. ಡಾ| ಸಂತೋಷ ನವಲಗುಂದ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment
