ಕಥೆ- ಮಂಡ್ಯ ಮ.ನಾ. ಉಡುಪ
ಅದೊಂದು ಕಾಲ. ಆಗ ಕಾಡಿನ ಪ್ರಾಣಿಗಳೆಲ್ಲಾ ಮನುಷ್ಯರಂತೆ ಮಾತಾಡ್ತಾಯಿದ್ವಂತೆ. ಕಾಡಂಚಿನಲ್ಲಿದ್ದ ಮನೆಯೊಂದರ ಕೊಟ್ಟಿಗೆಯಲ್ಲಿದ್ದ ಹಸುವಿನ ಚಿಕ್ಕ ಕರುವಿಗೆ ಅದಕ್ಕೆ ಆಗ ತಾನೆ ಮೂಡುತಿದ್ದ ಅದರ ಕೊಂಬಗಳನ್ನು ನೋಡಿದಾಗೆಲ್ಲ ಜಂಬ ಬರುತಿತ್ತು. ತಾನಾಗಲೇ ದೊಡ್ಡವನೆಂದು ಜಂಬದಿಂದ ಮೆರೆದಿತ್ತು.
ಅದೊಂದು ಮಳೆಗಾಲದ ಸಂಜೆ, ಹೊರಗಡೆಯಿಂದ ಹುಲ್ಲು ಮೇಯ್ದು ಎಲ್ಲಾ ಹಸುಗಳು ಕೊಟ್ಟಿಗೆಯಕಡೆ ಹೊರಟವು. ತಾಯಿ ಎಷ್ಟೇ ಕರೆದರೂ ಕರು ಕೇಳಿಸದಂತೆ ನಟಿಸಿತು. ಕೋಡುಮೂಡುತ್ತಿರುವ ಈ ಕರು. ಸ್ವಲ್ಪ ಹೊತ್ತಿನ ನಂತರ ತಲೆ ಎತ್ತಿ ನೋಡುತ್ತೆ, ಎಲ್ಲ ಹಸುಗಳು ಮನೆಗೆ ಹೊರಟುಹೋಗಿದ್ದವು. ತಾನೊಂದೇ ಹಿಂದೆ ಇರುವುದು ಅರಿವಾಯ್ತು. ಸೂರ್ಯ ಮುಳುಗು ಹೊತ್ತಾಗಿತ್ತು. ಹುಲಿಯ ಭಯದಿಂದ ಆ ಕರುವು ತರತರನೆ ನಡುಗಲಾರಂಭಿಸಿತು. ಭಯದಿಂದಲೇ ಅಂಬಾ ಅಂಬಾ ಕೂಗುತ್ತಾ ಮನೆಯದಾರಿ ಹಿಡಿಯಿತು. ಕಾಡ ದಾರಿಯ ಗಿಡಗಳ ಪೊದೆಯಿಂದ ಸಿಂಹವೊಂದು ದುತ್ತನೆ ಎದುರಿಗೆ ಬಂದು ನಿಂತಾಗ ಇದಕ್ಕೆ ತನ್ನ ಜೀವದ ಮೇಲಿನ ಆಸೆಯನ್ನು ಬಿಟ್ಟುಬಿಟ್ಟಿತು. ಆದರೂ ಸ್ವಲ್ಪ ದೈರ್ಯ ಮಾಡಿ, ನಡುಕದ ದನಿಯಲ್ಲಿ,
” ಸಿಂಹರಾಜ ನನ್ನನ್ನು ತಿನ್ನುವ ಮೊದಲು, ನಿನ್ನ ಕೊಳಲ ದನಿಗೆ ನೃತ್ಯ ಮಾಡಬೇಕೆಂಬದು ನನ್ನ ಕೊನೆ ಆಸೆ, ದಯವಿಟ್ಟು ನೆರೆವೇರಿಸಿಕೊಡು..”
ಎಂದಿತು. ಸಿಂಹಕ್ಕೂ ಕರುಣೆ ಮೂಡಿ
” ಆಗಲಿ ನಿನ್ನ ಆಸೆಯನ್ನು ನೆರವೇರಿಸುತ್ತೇನೆ “
ಎಂದು ತನ್ನ ಕೊಳಲ ತೆಗೆದು ನಿಧಾನವಾಗಿ ಊದತೊಡಗಿತು.
ಮನೆಯ ದಾರಿ ಹಿಡಿದಿದ್ದ ಹಸುಗಳ ಗುಂಪು ತುಂಬಾ ಹೆಚ್ಚು ದೂರ ಹೋಗಿರಲಿಲ್ಲ, ಗುಂಪಿನ ಕಾವಲಿಗಿದ್ದ ನಾಯಿಗಳು ಸಿಂಹದ ಕೊಳಲ ನಾದವನ್ನು ಗುರುತು ಹಿಡಿದವು. ಸಿಂಹದ ಬಾಯಿಗೆ ಯಾವುದೋ ಹಸು ಸಿಲುಕಿದೆಯೆಂದು ಕೂಡಲೇ ಶಬ್ಧಬಂದ ಕಡೆ ನಾಯಿಗಳು ನುಗ್ಗಿದವು. ಇದ್ದಕ್ಕಿದ್ದಂತೆ ನಾಯಿಗಳ ದಾಳಿಯನ್ನು ಕಂಡು, ಸಿಂಹವು ಕೊಳಲನ್ನು ಅಲ್ಲೇ ಹಾಕಿ ಕಾಡಿನೊಳಗೆ ಓಡಿಹೋಯಿತು.