– ಮಂಡ್ಯ ಮ.ನಾ.ಉಡುಪ
ರೈತನೊಬ್ಬ ದೊಡ್ಡದಾದ ಗೂಳಿಯೊಂದನ್ನು ಸಾಕಿದ್ದ. ಅದು ನೋಡಲು ಬೃಹದಾಕಾರವಾಗಿತ್ತು. ನೋಡಿದವರು ಅದರ ದೇಹ ನೋಡಿ ಭಯಪಡುವ ರೀತಿಯಲ್ಲಿತ್ತು. ನೋಡಲು ಮಾತ್ರ ಭಯಂಕರವಾಗಿದ್ದ ಗೂಳಿ ತುಂಬಾ ಸಾಧು ಸ್ವಭಾವದ್ದಾಗಿತ್ತು.
ರೈತ ತನ್ನ ಜಮೀನಿನ ಕೆಲಸ-ಕಾರ್ಯಗಳಿಗೆ ಈ ಗೂಳಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದ. ಗೂಳಿಯೂ ಸಹ ರೈತನ ಜೊತೆಗೆ ಯಾವುದೇ ಮೈಗಳ್ಳತನ ಮಾಡದೇ ಪ್ರಾಮಾಣಿಕವಾಗಿ ದುಡಿಯುತ್ತಿತ್ತು.
ಅದೊಂದು ಮದ್ಯಾಹ್ನದ ಸಮಯದಲ್ಲಿ ಗೂಳಿಯನ್ನು ರೈತನು ವಿಶ್ರಾಂತಿಗಾಗಿ ಕೊಟ್ಟಿಗೆಯಲ್ಲಿ ಕಟ್ಟಿದ್ದ. ನೊಣವೊಂದು ಗೂಳಿಯ ಕೊಂಬಿನ ಮೇಲೆ ಬಂದು ಕುಳಿತಿತು. ಸ್ವಲ್ಪ ಸಮಯದ ನಂತರ ನೊಣವು ಹಾರಿಬಂದು ಗೂಳಿಯ ಎದುರಿಗೆ ಬಂದು ಹೇಳಿತು
” ನನ್ನ ಕ್ಷಮಿಸು. ನನಗೆ ತಿಳಿಯದೇ ನಿನ್ನ ಕೊಂಬಿನ ಮೇಲೆ ಬಂದು ಕುಳಿತೆ. ಆಮೇಲೆ ತಿಳಿಯಿತು. ನನ್ನ ದೇಹದ ಭಾರದಿಂದಾಗಿ ನಿನಗೆ ನೋವಾಗುತಿದೆಯೆಂದು … “
ಅದಕ್ಕೆ ಗೂಳಿ ನಗುತ್ತಾ ಹೇಳಿತು
” ಮಿತ್ರಾ ನಿನ್ನಿಂದ ನನಗಾವ ನೋವಾಗಲಿ, ಭಾರವಾಗಲಿ ಆಗಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ನೀನು ನನ್ನ ಕೊಂಬಿನ ಮೇಲೆ ಕುಳಿತುಕೊಂಡ ವಿಚಾರ ನೀ ಹೇಳಿದ ಮೇಲೆ ನನಗೆ ತಿಳಿದಿದ್ದು .. ” ಎಂದಿತು.
ಅಲ್ಪರು ತಮ್ಮ ಕುರಿತಾಗಿ ತಾವೇ ವಿಪರೀತ ಕಲ್ಪನೆ ಮಾಡಿಕೊಂಡಿರುತ್ತಾರೆ. ಆದರೆ ಸಾಧುಗಳು ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾರೆ “