ವಿಜಯಪುರ: ನಗರದ ಇಬ್ರಾಹಿಂಪುರದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಇದೇ ಜ.6 ರಿಂದ ಮೂರು ದಿನಗಳವರೆಗೆ ಶ್ರೀ ನಂದಬಸವೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಜಾತ್ರೆಯ ಅಂಗವಾಗಿ ಜ.6 ರಂದು ರಾತ್ರಿ 10.30ಕ್ಕೆ ಸ್ಥಳೀಯ ಶ್ರೀ ನಂದಬಸವೇಶ್ವರ ನಾಟ್ಯ ಸಂಘದವರಿಂದ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು.
ಜ. 7 ರಂದು ಬೆಳಿಗ್ಗೆ 6ಕ್ಕೆ ನಂದಬಸವೇಶ್ವರನಿಗೆ ಅಭಿಷೇಕ, ಪೂಜೆ ನೆರವೇರುವುದು. ನಂತರ ನಂದಿಕೋಲ ಮೆರವಣಿಗೆ ನಡೆಯುವುದು. ಬೆಳಿಗ್ಗೆ 9ಕ್ಕೆ ಶ್ರೀ ನಂದಬಸವೇಶ್ವರ ಗುಡಿಯಿಂದ ನಂದಿಕೋಲ ಮೆರವಣಿಗೆ ಹೊರಟು ಗ್ರಾಮದ ಎಲ್ಲ ಭಕ್ತಾದಿಗಳ ಮನೆಗಳಿಗೆ ಭೇಟಿಕೊಟ್ಟು ಮರಳಿ ಮಧ್ಯಾಹ್ನ 1ಕ್ಕೆ ದೇವಸ್ಥಾನಕ್ಕೆ ಬಂದು ತಲುಪುವುದು. ನಂತರ ಮಹಾಪ್ರಸಾದ ನಡೆಯುವುದು.
ಜ.8 ರಂದು ಮಧ್ಯಾಹ್ನ 1ಕ್ಕೆ ನಂದಿಕೋಲ ಮೆರವಣಿಗೆ ಪ್ರಾರಂಭವಾಗಿ ಇಬ್ರಾಹಿಂಪುರ ಭಕ್ತಾದಿಗಳ ಮನೆಗಳಿಗೆ ಭೇಟಿ ಕೊಟ್ಟು ಸಂಜೆ 4.30ಕ್ಕೆ ಕನಕದಾಸ ಬಡಾವಣೆ, ಅಲ್ಲಾಪುರ ಓಣಿಯ ಮಾರ್ಗವಾಗಿ ಸಾಗಿ 6.30ಕ್ಕೆ ರೇಲ್ವೆಸ್ಟೇಷನ್ ಮುಂದಿರುವ ಕರ್ನಾಟಕ ಜಿನ್ನಿಂಗ್ ಫ್ಯಾಕ್ಟರಿ ಬಳಿ ಶ್ರೀ ನಂದಬಸವೇಶ್ವರ ಹಾಗೂ ಶ್ರೀ ಪವಾಡ ಬಸವೇಶ್ವರ ದೇವರು ಎದುರುಗೊಳ್ಳುವುದು. ಸವಳಿಯವರ ತೋಟದ ಬಾವಿಯಲ್ಲಿ ಶ್ರೀ ನಂದಬಸವೇಶ್ವರ ಹಾಗೂ ಶ್ರೀ ಪವಾಡಬಸವೇಶ್ವರ ಅಣ್ಣತಮ್ಮರ ಗಂಗಾಭಿಷೇಕ ನಡೆಯುವುದು. ರಾತ್ರಿ 8ಕ್ಕೆ ಅಲ್ಲಾಪುರ ಅಗಸಿಯಿಂದ ಜುಮ್ಮಾಮಸೀದಿ ಮಾರ್ಗವಾಗಿ ಮೆರವಣಿಗೆ ಸಾಗಿ ಬರುವುದು. ಬಡಿಕಮಾನ ಹತ್ತಿರದ ಕಸಬಾ ಚಾವಡಿಯಲ್ಲಿ ಮಂಗಳಾರತಿ ಮತ್ತು ಕಾಕಡಾರತಿ ಮಾಡಿ ಶ್ರೀ ಪವಾಡಬಸವೇಶ್ವರರನ್ನು ಬೀಳ್ಕೊಟ್ಟು ಮರಳಿ ಕಮಾನಖಾನ್ ಬಜಾರ ಮಾರ್ಗವಾಗಿ ಭಕ್ತಾದಿಗಳ ಮನೆಗೆ ಭೇಟಿ ಕೊಡುತ್ತ ರಾತ್ರಿ 10 ಕ್ಕೆ ಇಬ್ರಾಹಿಂಪುರ ದೇವಸ್ಥಾನಕ್ಕೆ ನಂದಿಕೋಲ ಬಂದು ಗದ್ದುಗೆಗೊಳ್ಳುವುದು.
ಈ ಜಾತ್ರಾ ಮಹೋತ್ಸವದಲ್ಲಿ ಎಲ್ಲ ಭಕ್ತಾದಿಗಳು ಭಾಗವಹಿಸಿ ನಂದಬಸವೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ನಂದಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿಯವರು ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

