ನೂತನ (ಸರಕಾರಿ) ಶಿಕ್ಷಕರಿಗೆ ಸಿಂದಗಿ ಮುಸ್ಲಿಂ ಬಾಗವಾನ ಜಮಾತ್ ನಿಂದ ಸನ್ಮಾನ
ವಿಜಯಪುರ: ಮಕ್ಕಳಲ್ಲಿ ಅಡಗಿರುವ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ಚೆಲ್ಲುವ ಅವಕಾಶ ಪರಮಾತ್ನ ಕರುಣಿಸಿದ್ದಾನೆ. ಪ್ರತಿಯೊಂದು ಮಕ್ಕಳನ್ನು ತಮ್ಮ ಮನೆಯ ಮಕ್ಕಳಂತೆ ಭಾವಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಎಂದು ಮುಸ್ಲಿಂ ಬಾಗವಾನ ಜಮಾತ್ ಅಧ್ಯಕ್ಷ ಅಲ್ತಾಫ ಬಾಗವಾನ ನೂತನ ಶಿಕ್ಷಕರಿಗೆ ಸಲಹೆ ನೀಡಿದರು.
ಪಟ್ಟಣದಲ್ಲಿ ಮುಸ್ಲಿಂ ಬಾಗವಾನ ಜಮಾತ್ ವತಿಯಿಂದ ನೂತನವಾಗಿ ಸರಕಾರಿ ಶಿಕ್ಷಕರಾಗಿ ಆಯ್ಕೆಯಾದ ಶಿಕ್ಷಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಶಾಲೆ ಎಂದರೆ ದೇವಾಲಯ, ಶಿಕ್ಷಕರನ್ನು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ತಮ್ಮನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ ತಮ್ಮ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳನ್ನು ಕೂಡಾ ಗುರುತಿಸಿ ಅವರು ಕೂಡಾ ಈ ದೇಶದ ಉನ್ನತ ಹುದ್ದೆಯ ಅಧಿಕಾರಿಯಾಗುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಬೋಧನೆ ಮಾಡಬೇಕು. ದೇಶದಲ್ಲಿ ಹತ್ತು ಹಲವಾರು ಹುದ್ದೆಗಳು ಸಿಗುತ್ತವೆ. ಎಲ್ಲರಿಗೂ ಶಿಕ್ಷಕನಾಗುವ ಅದೃಷ್ಟ ಇರುವುದಿಲ್ಲ. ಆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿ ಕಲ್ಲಿನಂತ ಮನಸ್ಸಿರುವ ಮಕ್ಕಳನ್ನು ಶಿಲೆಯಾಗಿ ನಿಲ್ಲಿಸುವುದು ತಮ್ಮ ಜವಾಬ್ದಾರಿಯಾಗಿದೆ ಎಂದರು.
ಸನ್ಮಾನಕ್ಕೆ ಪ್ರತಿಯಾಗಿ ನೂತನ ಶಿಕ್ಷಕರಾದ ಫೈಯಾಜ ಚೌಧರಿ, ಮಜುರ ಇಲ್ಲಾಯಿ ಬಾಗವಾನ, ಮಾತನಾಡಿದರು.
ಕಾರ್ಯಕ್ರಮವನ್ನು ಚೌಧರಿ ನಿರೂಪಿಸಿ, ವಂದಿಸಿದರು. ಮುಸ್ಲಿಂ ಬಾಗವಾನ ಜಮಾತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.

