ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಸಮ್ಮೇಳನ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ
ವಿಜಯಪುರ: ಕುಟುಂಬ ಮತ್ತು ದೇಶಕ್ಕೆ ಆಧಾರ ಸ್ತಂಬವಾಗಿ ಸಮಾಜಕ್ಕೆ ಬೆನ್ನೆಲುಬಾಗಿರುವ ಮಹಿಳೆಯರನ್ನು ಸದಾ ಸದೃಢ ಮತ್ತು ಆರೋಗ್ಯವಂತವಾಗಿಡಲು ನಾವೆಲ್ಲರೂ ಪಣತೊಡೋಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಬಿ. ಎಲ್. ಡಿ. ಈ ವೈದ್ಯಕೀಯ ಕಾಲೇಜಿನ ಗ್ರಂಥಾಲಯದಲ್ಲಿ ಶುಕ್ರವಾರ ಮುಸ್ಸಂಜೆ ನಡೆದ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ 38ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ವಿಶ್ವದಲ್ಲಿ ಭೂಮಿ ತಾಯಿಯಂತೆ ಪ್ರಮುಖ ಪಾತ್ರ ವಹಿಸುತ್ತಾರೆ. ಮಹಿಳೆಗೆ ಮಾತ್ರ ಮತ್ತೋಂದು ಜೀವ ಸೃಷ್ಠಿ ಸಾಮರ್ಥ್ಯವಿದೆ. ದೇವರು ಜೀವಸೃಷ್ಠಿಗೆ ಮಹಿಳೆಯನ್ನು ಸೃಷ್ಠಿಸಿದ್ದಾರೆ. ಹೀಗಾಗಿ ಹೆರಿಗೆ ಸಂದರ್ಭದಲ್ಲಿ ಮಹಿಳೆಯರ ಸಾವು ಮತ್ತು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕಿದೆ. ಆರೋಗ್ಯವಂತ ಮಹಿಳೆ ತನ್ನ ಕುಟುಂಬವನ್ನು ಸುಖವಾಗಿ ಇಡಬಲ್ಲಳು. ಜೊತೆಗೆ ಸದೃಢ ರಾಷ್ಟ್ರವನ್ನು ನಿರ್ಮಿಸಬಲ್ಲಳು. ಹೀಗಾಗಿ ಸ್ತ್ರೀರೋಗ ಶಾಸ್ತ್ರದಲ್ಲಿ ಆಗುತ್ತಿರುವ ಆಧುನಿಕ ಬದಲಾವಣೆಗಳಿಗೆ ತಕ್ಕಂತೆ ಜ್ಞಾನ ಸಂಪಾದಿಸಿ ವೃತ್ತಿಕೌಶಲ್ಯ ಬೆಳೆಸಿಕೊಳ್ಳಬೇಕು. ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಿರುವ ಕೃತಕ ಬುದ್ದಿಮತ್ತೆಯನ್ನು ಸಮರ್ಪಕವಾಗಿ ಬಳಸಿಕೊಂಡು ಆನಾರೋಗ್ಯದ ಲಕ್ಷಣಗಳನ್ನು ಆರಂಭ ಹಂತದಲ್ಲಿಯೇ ಪತ್ತೆ ಮಾಡಿ ಶಿಶು ಮರಣ ಪ್ರಮಾಣವನ್ನು ತಡೆಯಲು ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಅವರು ಹೇಳಿದರು.
ವಿಶ್ವಾದ್ಯಂತ ಕೇವಲ ಶೇ. 33 ರಷ್ಟು ರಾಷ್ಟ್ರಗಳು ಮಾತ್ರ ಮಹಿಳಾ ಕಾನೂನುಗಳನ್ನು ಅನುಷ್ಠಾನಕ್ಕೆ ತಂದಿವೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸದಿದ್ದರೆ ಮಹಿಳಾ ಆರೋಗ್ಯ ವ್ಯವಸ್ಥೆಗೆ ಬಲವಾದ ಪೆಟ್ಟು ಬೀಳಲಿದೆ. ಮಹಿಳೆಯರು ಸ್ವಾಭಿಮಾನ ಮತ್ತು ಘನತೆಯೊಂದಿಗೆ ಸ್ವತಂತ್ರ ಜೀವನವನ್ನು ನಡೆಸಲು ಅವಳಿಗೆ ಅಧಿಕಾರ ನೀಡಿ ಘನತೆಯಿಂದ ಜೀವನ ನಡೆಸಲು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಪೌಷ್ಠಿಕಾಂಶಗಳ ಕೊರತೆ, ಮುಟ್ಟಿನ ಸಮಸ್ಯೆ, ನೈರ್ಮಲ್ಯ, ಪಾಲಿಸಿಸ್ಟಿಕ್ ಒವೆರಿಯನ್ ಸಿಂಡ್ರೋಮ್ ಮತ್ತು ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಸವಾಲುಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಬಹಳಷ್ಟು ಮಹಿಳೆಯರು ತಮ್ಮ ಆರೋಗ್ಯ ಮತ್ತು ಅಗತ್ಯ ಪೌಷ್ಠಿಕಾಂಶ ಆಹಾರ ಸೇವನೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಕಬ್ಬಿಣಾಂಶದ ಕೊರತೆಯಿಂದ ಬಳಲುವ ಮಹಿಳೆಯರ ಪ್ರಮಾಣ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಈ ಕುರಿತು ಸೂಕ್ತ ಮಾಹಿತಿ ಮತ್ತು ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.
ಸ್ತ್ರೀರೋಗ ತಜ್ಞರು ತಮಗೆ ಎದುರಾಗುವ ಯಾವುದೇ ಸಮಸ್ಸೆಯನ್ನು ನನ್ನ ಗಮನಕ್ಕೆ ತಂದರೆ ಸರಕಾರದೊಂದಿಗೆ ಚರ್ಚಿಸಿ ಬಗೆಹರಿಸುತ್ತೇನೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಕೆಲವರು ಕೆಟ್ಟವರು ಇರುತ್ತಾರೆ.ಕೆಲವೇ ಕೆಲವು ಜನ ಮಾಡುವ ಭ್ರೂಣಹತ್ಯೆಯಂಥ ಹೀನ ಕೃತ್ಯಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಅದನ್ನು ಆರೋಗ್ಯ ಕ್ಷೇತ್ರದ ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ತಮ್ಮ ಬಳಿ ಚಿಕಿತ್ಸೆಗೆ ಬರುವ ತಾಯಂದಿರಿಗೆ ಈ ಕುರಿತು ತಿಳಿ ಹೇಳಬೇಕು. ಬಸವಣ್ಣನವರು 12ನೇ ಶತಮಾನದಲ್ಲಿಯೇ ಲಿಂಗ ಸಮಾನತೆ ಸಾರಿದ್ದಾರೆ ಎಂಬುದನ್ನು ಮನದಟ್ಟು ಮಾಡಬೇಕು. ಸ್ರ್ರೀಯರ ಕುರಿತು ಸಮಾಜದಲ್ಲಿ ಇನ್ನೂ ಕೆಲವು ಕಡೆ ಇರುವ ಮೌಢ್ಯಗಳ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.

