ಭೀಮಾಂತರಂಗ ಜಗಲಿ, ಆನ್ ಲೈನ್ ಉಪನ್ಯಾಸ ಮಾಲಿಕೆಯಲ್ಲಿ ಡಾ.ಮಧುಬಾಲ ಅಭಿಮತ
ಇಂಡಿ: 19ನೇ ಶತಮಾನದಲ್ಲಿ ಕರ್ನಾಟಕ, ಕನ್ನಡ ಮತ್ತು ಕನ್ನಡ ಜನರಿಗೋಸ್ಕರ ದೂರದ ಗಡಿ ಸೊಲ್ಲಾಪುರದಲ್ಲಿ ನಿಂತು ಕನ್ನಡಿಗರ ಕೋಟೆ ಕಟ್ಟಿ ಅದನ್ನು ರಕ್ಷಣೆ ಮಾಡಿದ ಅಪ್ರತಿಮ ಹೋರಾಟಗಾರ್ತಿ, ಗಡಿನಾಡ ಸಿಂಹಿಣಿ ಜಯದೇವಿತಾಯಿ ಲಿಗಾಡೆ ಆಗಿದ್ದರು ಎಂದು ಸೋಲಾಪುರದ ಖ್ಯಾತ ವೈದ್ಯ-ಸಾಹಿತಿ ಡಾ.ಮಧುಬಾಲ ಲಿಗಾಡೆ ಹೇಳಿದರು.
ಅವರು ಇಂಡಿಯ ಭೀಮಾಂತರಂಗ ಜಗಲಿ, ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-2 ರಲ್ಲಿ ಜಯದೇವಿತಾಯಿ ಲಿಗಾಡೆ ಬದುಕು-ಬರಹ ಕುರಿತು ಉಪನ್ಯಾಸ ನೀಡುತ್ತಾ ಈ ಮಾತುಗಳನ್ನು ಹೇಳಿದರು.
ಸಿದ್ದರಾಮೇಶ್ವರ ಪುರಾಣ ಮಹಾಕಾವ್ಯ ಕರ್ತೃವಾಗಿ,ಕನ್ನಡ ಕಾವಲುಗಾರ್ತಿಯಾಗಿ,ಸಾಹಿತ್ಯ ಸಾಧಕಿಯಾಗಿ,
ಆಧ್ಯಾತ್ಮ ಚಿಂತನಕಾರರಾಗಿ, ಕುಟುಂಬವತ್ಸಲೆಯಾಗಿ ಈ
ಜಂಗಮತಾಯಿಯು ತಾಯ್ನುಡಿಯ ಸೇವೆಗಾಗಿ ತಮ್ಮ ಜೀವನ ಸವೆಸಿದರು. ಕನ್ನಡ ನಾಡು-ನುಡಿ ಬೆಳೆಸುವಲ್ಲಿ ಅವರ ಅಗಾಧ ಪರಿಶ್ರಮ, ಅದ್ಭುತಕಾರ್ಯ, ಅಪಾರ ಸಾಧನೆ ಇಂದಿಗೂ ಚಿರಸ್ಥಾಯಿಯಾಗಿದ್ದು, ಕನ್ನಡಿಗರ ಅಭಿಮಾನದ ಮಹಾತಾಯಿಯೇ ಆಗಿದ್ದಾರೆ ಎಂದು ಹೇಳಿದರು.
ಹುಟ್ಟಿನಿಂದ ಹೋರಾಟ ಮನೋಭಾವ ಮೈಗೂಡಿಸಿಕೊಂಡು ಕನ್ನಡ ಚಳವಳಿ, ಸ್ವಾತಂತ್ರ ಏಕೀಕರಣ, ದಲಿತ ವಿಮೋಚನೆ, ಮಹಿಳಾಪರ ಕಾಳಜಿ, ಕಾರ್ಮಿಕ ಕಲ್ಯಾಣ, ಮಾನವಹಕ್ಕು, ಮೂಢನಂಬಿಕೆ, ಕಂದಾಚಾರ, ಮನುಷ್ಯತ್ವದ ಅರಿವು, ಶಿಕ್ಷಣ ಜಾಗೃತಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಡಸಂರಕ್ಷಣೆಯಂತಹ ಹೋರಾಟದ ಜೊತೆಯಲ್ಲೇ ಅಷ್ಟೇ ಗಂಭೀರವಾಗಿ ಸಾಹಿತ್ಯ ಕೃಷಿಯನ್ನೂ ಮಾಡಿ ಸಾಹಿತ್ಯ ನಕ್ಷತ್ರವಾಗಿ ಕಲ್ಯಾಣದಲ್ಲಿ ಬಾಳ್ವೆ ಕಳೆದವರು ಎಂದು ಹೇಳಿದರು.
ಸಿಂದಗಿಯ ಜಾನಪದ ವಿದ್ವಾಂಸ ಡಾ.ಎಂ ಎಂ ಪಡಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಡಿ ಎನ್ ಅಕ್ಕಿ, ಡಾ.ಚನ್ನಪ್ಪ ಕಟ್ಟಿ, ರಾಘವೇಂದ್ರ ಕುಲಕರ್ಣಿ, ಸಂತೋಷ ಬಂಡೆ, ಗೀತಯೋಗಿ, ಬಸವರಾಜ ಕಿರಣಗಿ, ಶ್ರೀಧರ ಹಿಪ್ಪರಗಿ,ಸುಜಾತಾ ಬೀಳಗಿ, ಪ್ರಶಾಂತ ಕುಲಕರ್ಣಿ,
ಬಿ ಸಿ ಭಗವಂತಗೌಡರ, ಸಂಜಯ ಬುಲಬುಲೆ, ರಾಜಶೇಖರ ಮಾರನೂರ, ಸಿದ್ರಾಮಪ್ಪ ಮಾರನೂರ ಬಿ ಎನ್ ಹಿರೇಮಠ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ನಾದ ಕೆಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ ಎಂ ಬಂಡಗರ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕಿ ಸರೋಜಿನಿ ಮಾವಿನಮರ ನಿರೂಪಿಸಿದರು. ಶಿಕ್ಷಕ ವೈ ಜಿ ಬಿರಾದಾರ ವಂದಿಸಿದರು.

