ಮುದ್ದೇಬಿಹಾಳ: ಶಕ್ತಿ ಸಾಮರ್ಥ್ಯ ಇದ್ದ ವ್ಯಕ್ತಿ ಎಂದಿಗೂ ನ್ಯಾಯ, ನೀತಿ, ಧರ್ಮವನ್ನು ಬಿಡಬಾರದು ಎಂದು ಹಾರ್ವರ್ಡ್ ಪಿ.ಯು.ಸೈನ್ಸ್ ಕಾಲೇಜಿನ ಅಧ್ಯಕ್ಷ ಎಸ್.ಎಮ್.ನೆರಬೆಂಚಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ನಾಲತವಾಡ ರಸ್ತೆಯಲ್ಲಿರುವ ಹಾರ್ವರ್ಡ್ ಪಿ.ಯು.ಸೈನ್ಸ್ ಕಾಲೇಜಿನಲ್ಲಿ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿವರೇಣ್ಯರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೩ರ ತಾಲೂಕು ಮಟ್ಟದ ಸಪ್ತಾಹದ ೬ನೇ ದಿನದ ಉಪನ್ಯಾಸಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೂಮಿಗೆ ಬಂದ ಪ್ರತಿಯೊಬ್ಬ ಮನುಷ್ಯನಿಗೂ ಅಂತ್ಯವೆಂಬ ಸತ್ಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹಣಬಲ, ತೋಳ್‌ಬಲ ಇದೆ ಅಂದ ಮಾತ್ರಕ್ಕೆ ನ್ಯಾಯ, ನೀತಿ ಮತ್ತು ಧರ್ಮವನ್ನು ಬಿಟ್ಟು ಬದುಕಬಾರದು ಎಂದು ಭಗದ್ಗೀತೆಯ ಪ್ರತಿಯೊಂದು ಅಧ್ಯಾಯಗಳು ಹೇಳುತ್ತವೆ. ನಮ್ಮ ಶಕ್ತಿ ಸಾಮರ್ಥ್ಯವನ್ನು ಸಾಧ್ಯವಾದಷ್ಟು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು ಎಂದರು.
ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ನಿವೃತ್ತ ಮುಖ್ಯಗುರು ಎಸ್.ಎಚ್.ಮುದ್ನಾಳ, ನಿವೃತ್ತ ಖಾದಿ ಗ್ರಾಮೋದ್ಯೋಗ ಕೇಂದ್ರದ ನೌಕರರಾದ ಕೆ.ಎಸ್.ಕುಲಕರ್ಣಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ರಾಜಶ್ರೀ ರೂಢಗಿ. ಉಪನ್ಯಾಸಕರಾದ ಇಮಾಂಬು ಗಂಗೂರ, ಸಿ.ಎಸ್.ಪಾಟೀಲ್, ದಾನಪ್ಪ ಹೊಸಮನಿ ಸೇರಿದಂತೆ ಇತರರು ಹಾಜರಿದ್ದರು.
ಜ್ಞಾನ ಭಾರತಿ ವಿದ್ಯಾ ಮಂದಿರದ ಗೀತ ಗಾಯನ ತಂಡದವರು ಗುರುಮಾತೆ ರಂಜಿತಾ ಹೆಗಡೆ ನೇತೃತ್ವದಲ್ಲಿ ಸಾಮೂಹಿಕವಾಗಿ ಭಗವದ್ಗೀತೆಯ ೧೦ನೇ ಅಧ್ಯಾಯವನ್ನು ಪಠಿಸಿದರು.
ಉಪನ್ಯಾಸಕ ಬಿ.ಆರ್.ಬೆಳ್ಳಿಕಟ್ಟಿ ಸ್ವಾಗತಿಸಿ ನಿರ್ವಹಿಸಿದರು. ಸಂಚಾಲಕ ರಾಮಚಂದ್ರ ಹೆಗಡೆ ಆಶಯದ ನುಡಿಗಳನ್ನಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

