ಅಶ್ರುವಾಯು ಸಿಡಿಸುತ್ತಾ ಗ್ಯಾಲರಿಯಿಂದ ನುಗ್ಗಿದ ಈರ್ವರು |ಆರು ಆರೋಪಿಗಳ ಬಂಧನ | 3 ತಿಂಗಳ ತಯಾರಿ!
ನವದೆಹಲಿ: ಇಬ್ಬರು ಆಗಂತುಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸದಸ್ಯರ ಪೀಠಕ್ಕೆ ಜಿಗಿದು ಹಳದಿ ಬಣ್ಣದ ಆಶ್ರುವಾಯು ಸಿಡಿಸುತ್ತಾ ಓಡಾಡಿದ ಘಟನೆ ಬುಧವಾರ ಲೋಕಸಭೆಯಲ್ಲಿ ನಡೆದಿದ್ದು ಭಾರೀ ಭದ್ರತಾ ಲೋಪವುಂಟಾದ ಪ್ರಸಂಗ ನಡೆದಿದೆ.
ಇದರಿಂದ ಗೊಂದಲದ ವಾತಾವರಣ ಉಂಟಾಗಿ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ಸಂದರ್ಶಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಬೆಂಚುಗಳ ಮೇಲೆ ಘೋಷಣೆ ಕೂಗುತ್ತಾ ಇಬ್ಬರು ಹಾರುತ್ತಿರುವುದು ಕಂಡುಬಂದಿತು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳುವಂತೆ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಜಿಗಿದಿದ್ದಾರೆ. ಶೂನ್ಯ ವೇಳೆಯಲ್ಲಿ ಒಬ್ಬರು ಅಶ್ರುವಾಯು ಎರಚುತ್ತಾ ಸಾರ್ವಜನಿಕ ಗ್ಯಾಲರಿಯಿಂದ ಜಿಗಿದರೆ ಮತ್ತೊಬ್ಬ ಲೋಕಸಭೆಯ ಬೆಂಚುಗಳ ಮೇಲೆ ಹಾರುತ್ತಿರುವುದು ಕಂಡುಬಂದಿದೆ ಎಂದು ಚೌಧರಿ ಹೇಳಿದರು.
ಕೂಡಲೇ ಇಬ್ಬರು ವ್ಯಕ್ತಿಗಳನ್ನು ಅಲ್ಲಿದ್ದ ಲೋಕಸಭಾ ಸದಸ್ಯರು ಮತ್ತು ಸಿಬ್ಬಂದಿ ನಿಯಂತ್ರಿಸಲು ಹೋಗಿ ತಳ್ಳಾಟ ನಡೆದಿದೆ.
ಇದು ಭದ್ರತಾ ಉಲ್ಲಂಘನೆಯಾಗಿದೆ. ಇಂದು 2001 ರಲ್ಲಿ ನಡೆದ ಸಂಸತ್ತಿನ ದಾಳಿಯ 22ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ.
ಘಟನೆಗೆ ಸಂಬಂಧಿಸಿದಂತೆ ಸದನದೊಳಗೆ ನುಗ್ಗಿ ದಾಂಧಲೆ ನಡೆಸಿದ ಇಬ್ಬರು ಹಾಗೂ ಹಳದಿ ಬಣ್ಣದ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಹೊತ್ತು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಸೇರಿ ಮತ್ತೊಬ್ಬ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂಸತ್ತಿನ ಒಳಗೆ ನುಗ್ಗಿದ ಒಬ್ಬಾತನನ್ನು ಸಾಗರ್ ಶರ್ಮಾ ಹಾಗೂ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರಲ್ಲಿ ಒಬ್ಬ ಮಹಿಳೆ ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ.


