ಮುದ್ದೇಬಿಹಾಳ: ಧರ್ಮದ ರಕ್ಷಣೆ ಒಬ್ಬರಿಗೆ ಸೀಮಿತವಾಗಿಲ್ಲ. ಸನಾತನ ಸಂಸ್ಕೃತಿ ಬೆಳೆಸಿ, ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರತಿಯೊಬ್ಬನ ಜವಾಬ್ದಾರಿ ಅಡಕವಾಗಿದೆಯೆಂದು ಬಸವೇಶ್ವರ ಪತ್ತಿನ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಮಹಾಂತೇಶ ಎಸ್. ಪಟ್ಟಣದ ಹೇಳಿದರು.
ಪಟ್ಟಣದ ಸಂಗಮೇಶ್ವರ ನಗರದಲ್ಲಿರುವ ಸಂತ ಕನಕದಾಸ ಪ್ರಾಥಮಿಕ ಶಾಲೆಯಲ್ಲಿ ನಡೆದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿವರೇಣ್ಯರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೩ರ ತಾಲೂಕು ಮಟ್ಟದ ಸಪ್ತಾಹದ ೪ನೇ ದಿನದ ಉಪನ್ಯಾಸಮಾಲಿಕೆ ಕಾರ್ಯಕ್ರಮದಲ್ಲಿ ಸುಂದರ ಬದುಕಿಗೆ ಭಗವದ್ಗೀತೆ ಎನ್ನುವ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು.
ಹಿಂದಿನ ಕಾಲ ಘಟ್ಟದಲ್ಲಿ ಭಾರತೀಯ ಋಷಿಮುನಿಗಳು ತಾವು ತಪಸ್ಸು ಮಾಡಿ ಅದರ ಫಲವನ್ನು ಜಗತ್ತಿಗೆ ನೀಡುತ್ತಾ ಬಂದ ನಿದರ್ಶನಗಳಿವೆ. ಮಹಾಭಾರತ ಕಥೆಗೆ ವೇದ ವ್ಯಾಸರ ಕೊಡುಗೆ ಅಪಾರ. ಆದುದರಿಂದಲೇ ಜಗತ್ತಿಗೆ ೫ನೇ ವೇದವಾಗಿ ಹೊರಹೊಮ್ಮಿದೆ. ಭಾರತ ನೆಲದಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು. ಅಂತಹ ಭಾಗ್ಯಶಾಲಿಗಳಾದ ನಾವು ಯಾವತ್ತೂ ನಮ್ಮ ನೆಲ ಮತ್ತು ದೇಶಕ್ಕೆ ಧಕ್ಕೆಬಾರದಂತೆ ನೋಡಿಕೊಳ್ಳಬೇಕು. ಕೃಷ್ಣನ ಆರಾಧನೆಯಲ್ಲಿ ಸರ್ವಸ್ವವನ್ನು ಸಮರ್ಪಿಸಿ ಪರಮಾತ್ಮನ ಸಾಕ್ಷಾತ್ಕಾರ ಪಡೆದ ಸಂತರ ಸಾಲಿನಲ್ಲಿ ಅಗ್ರಗಣ್ಯರಾದ ಕನಕದಾಸರ ಹರಿಭಕ್ತಿ ಸಾರ ಭಗವದ್ಗೀತೆಯ ತತ್ವದ ಮೇಲೆ ನಿಂತಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಎಮ್.ಬಿ.ಪಾಟೀಲ್ ಮಾತನಾಡಿದರು.
ಈ ವೇಳೆ ನಿವೃತ್ತ ದೈಹಿಕ ಶಿಕ್ಷಕ ಎಸ್. ಎಲ್.ಗುರುವ್, ಮುಖ್ಯಗುರು ಎಮ್.ಎನ್.ಯರಝರಿ, ಎ.ಸಿ.ಕಬಾಡೆ, ಆರ್.ವಾಯ್.ಪಾಟೀಲ್ ಸೇರಿದಂತೆ ಇತರರು ಇದ್ದರು. ಜ್ಞಾನ ಭಾರತಿ ವಿದ್ಯಾ ಮಂದಿರದ ಗೀತಾ ಗಾಯನ ತಂಡದ ಗುರುಮಾತೆ ರಂಜಿತಾ ಹೆಗಡೆ ನೇತೃತ್ವದಲ್ಲಿ ಸಾಮೂಹಿಕವಾಗಿ ಭಗವದ್ಗೀತೆಯ ೧೦ನೇ ಅಧ್ಯಾಯವನ್ನು ಪಠಿಸಿದರು.
ಮುಖ್ಯೋಪಾಧ್ಯಾಯ ಎಮ್.ಎನ್.ಯರಝರಿ ಸ್ವಾಗತಿಸಿದರು. ಸಂಚಾಲಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗೋಪಾಲ ಹೂಗಾರ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

