ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ತರಗತಿಗಳು ನಡೆಯುತ್ತಿಲ್ಲವೆಂದು ಆರೋಪಿಸಿ ಬೃಹತ್ ಪ್ರತಿಭಟನೆ
ಇಂಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನೆಯ ಪದಾಧಿಕಾರಿಗಳೊಂದಿಗೆ ಕಳೆದ ೨೨ ದಿನಗಳಿಂದ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲವೆಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದ ವರೆಗೆ ಪಾದಯಾತ್ರ ಮೂಲಕ ತೆರಳಿ ಇಂಡಿ ಉಪವಿಭಾಗಾಧಿಕಾರಿ ಅಭಿದ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ನಂತರ ಎಬಿವಿಪಿ ನಗರ ಉಪಾಧ್ಯಕ್ಷ ಬಿ.ಎಚ್.ಬಗಲಿ ಮಾತನಾಡಿ, “ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಅದರಲ್ಲೂ ಬಡಕುಟುಂಬದಿಂದ ಶಿಕ್ಷಣ ಕಲಿಯಲು ಬರುತ್ತಿದ್ದು, ಅವರಿಗೆ ಸರಿಯಾಗಿ ಪಾಠ ನಡೆಯುತ್ತಿಲ್ಲ ಇದರಿಂದ ಶೈಕ್ಷಣಿಕ ತೊಂದರೆಯಾಗುತ್ತಿದೆ, ಆದಷ್ಟು ಬೇಗ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಿ ತರಗತಿಗಳು ನಡೆಯುವಂತೆ ಆಗಬೇಕು ತನ್ನ ಹಠಮಾರಿ ಧೋರಣೆ ಬಿಟ್ಟು ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಬೇಕು ಎಂದರು.
ವಿದ್ಯಾರ್ಥಿನಿ ಪೂಜಾ ಸಾರವಾಡ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಂಡಿ ಉಪವಿಭಾಗಾಧಿಕಾರಿ ಅಭಿದ ಗದ್ಯಾಳ ” ಈ ವಿಷಯವನ್ನು ಸರಕಾರದ ಗಮನಕ್ಕೆ ತರುವೆ ಹಾಗೂ ಕಾಲೇಜಿನ ಇತರ ಸಮಸ್ಯೆಗಳಿಗೆ ಕಾಲೇಜಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವೆ” ಎಂದರು.
ಎಬಿವಿಪಿ ಪ್ರಮುಖರಾದ ಸಚಿನ ಧನಗೊಂಡ, ಈರಣ್ಣ ಸಿಂದಗಿ, ಚಂದ್ರಕಾಂತ, ವಿಶಾಲ, ಅಭಿಶೇಖ, ಆಕಾಶ ಪಾಟೀಲ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

